ಪಾಕ್‌ ಅಯೋಮಯ; ಸರಕಾರ‌ಕ್ಕೆ ಈಗ ಚಾಲ್ತಿ ಖಾತೆ ಕೊರತೆಯ ಬಿಕ್ಕಟ್ಟು

ಪಾಕ್‌ ಅಯೋಮಯ; ಸರಕಾರ‌ಕ್ಕೆ ಈಗ ಚಾಲ್ತಿ ಖಾತೆ ಕೊರತೆಯ ಬಿಕ್ಕಟ್ಟು

ಸ್ಲಾಮಾಬಾದ್‌/ಲಾಹೋರ್‌: ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿರುವ ಪಾಕಿಸ್ಥಾನ ಸರಕಾರ‌ಕ್ಕೆ ಐಎಂಎಫ್ನಿಂದ 6.5 ಬಿಲಿಯನ್‌ ಡಾಲರ್‌ ನೆರವಿನ ನಿರೀಕ್ಷೆಯಲ್ಲಿ ಇರುವಂತೆಯೇ ಬಡವರ ಮೇಲೆ ತೆರಿಗೆ ವಿಧಿಸುವುದರ ಬದಲು ಶ್ರೀಮಂತರ ಮೇಲೆ ತೆರಿಗೆ ವಿಧಿಸಿ ಎಂದು ಐಎಂಎಫ್ ಸಲಹೆ ಮಾಡಿದೆ.

ಈ ಬಗ್ಗೆ ಮಾತನಾಡಿದ ಐಎಂಎಫ್ ಮುಖ್ಯಸ್ಥೆ ಕ್ರಿಸ್ಟಾಲಿನಾ ಜಾರ್ಜಿಯೇವಾ ಅವರು, ಸದ್ಯ ಉಂಟಾಗಿರುವ ಬಿಕ್ಕಟ್ಟು ನಿವಾರಣೆ ನಿಟ್ಟಿನಲ್ಲಿ ಪಾಕಿಸ್ಥಾನದಲ್ಲಿ ಎಲ್ಲರೂ ಒಂದಾಗಿ ಕೆಲಸ ಮಾಡಬೇಕಾಗಿದೆ ಎಂದರು.

ಆ ದೇಶ ಹೊಂದಿರುವ ಆರ್ಥಿಕ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಕಠಿನ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಅದಕ್ಕಾಗಿ ಎಲ್ಲರೂ ಒಂದಾಗಿ ಪರಿಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ. ಬಡವರ ಮೇಲೆ ಹೆಚ್ಚಿನ ತೆರಿಗೆ ವಿಧಿಸುವುದರ ಬದಲು, ಶ್ರೀಮಂತರ ಮೇಲೆ ಹೆಚ್ಚಿನ ತೆರಿಗೆಯನ್ನು ವಿಧಿಸಬೇಕು. ಈ ನಿಟ್ಟಿನಲ್ಲಿ ಅಲ್ಲಿನ ಸರಕಾರ‌ ಕೆಲಸ ಮಾಡಬೇಕಾಗಿದೆ ಎಂದು ಹೇಳಿದ್ದಾರೆ.

ಇದೇ ವೇಳೆ, ಪರಮಾಪ್ತ ರಾಷ್ಟ್ರ ಪಾಕಿಸ್ಥಾನಕ್ಕೆ ನೆರವು ನೀಡಬೇಕೋ ಬೇಡವೋ ಎಂಬ ಬಗ್ಗೆ ಚೀನ ಸರಕಾರ‌ ಇನ್ನೂ ಗೊಂದಲದಲ್ಲಿಯೇ ಇದೆ. ಪಾಕಿಸ್ಥಾನದ ದುಃಸ್ಥಿತಿಯ ಬಗ್ಗೆ ನಮ್ಮ ಸರಕಾರ‌ ಸಹಮತ ವ್ಯಕ್ತಪಡಿಸುತ್ತದೆ ಎಂದು ಬೀಜಿಂಗ್‌ನಲ್ಲಿ ವಿದೇಶಾಂಗ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

ಮತ್ತಷ್ಟು ಸಂಕಷ್ಟ: ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿರುವ ಪಾಕಿಸ್ಥಾನಕ್ಕೆ ಈಗ ಚಾಲ್ತಿ ಖಾತೆಯ ಕೊರತೆ ಉಂಟಾಗಿದೆ. ಕಳೆದ ತಿಂಗಳ ಅಂತ್ಯಕ್ಕೆ ಅದರ ಪ್ರಮಾಣ ಶೇ.90.2 ವರೆಗೆ ಇಳಿಕೆಯಾಗಿದೆ. ಶೆಹಬಾಜ್‌ ಷರೀಫ್ ನೇತೃತ್ವದ ಸರಕಾರ‌ಕ್ಕೆ ಮತ್ತೂಂದು ಸಮಸ್ಯೆ ಉಂಟಾಗಿದೆ. 2022ರ ಜನವರಿಗೆ ಹೋಲಿಕೆ ಮಾಡಿದರೆ 2023ರ ಜನವರಿಯಲ್ಲಿ 2.47 ಬಿಲಿಯನ್‌ ಡಾಲರ್‌ಗಳಿಂದ 0.24 ಬಿಲಿಯನ್‌ ಡಾಲರ್‌ಗಳಿಗೆ ಇಳಿಕೆಯಾಗಿದೆ.

ಒಂದು ಕೇಸಲ್ಲಿ
ಇಮ್ರಾನ್‌ಗೆ ಜಾಮೀನು
ನಿಯಮಗಳನ್ನು ಮೀರಿ ವಿದೇಶದಿಂದ ದೇಣಿಗೆ ಸ್ವೀಕರಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಪಾಕಿಸ್ಥಾನ ಫೆಡರಲ್‌ ಏಜೆನ್ಸಿಯಿಂದ ಬಂಧನ ಭೀತಿ ಎದುರಿಸುತ್ತಿದ್ದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ಗೆ ಲಾಹೋರ್‌ ಹೈಕೋರ್ಟ್‌ ಜಾಮೀನು ನೀಡಿದೆ. ಈ ಬಗ್ಗೆ ವಿಚಾರಣೆ ನಡೆಸುವ ನಿಟ್ಟಿನಲ್ಲಿ ಹಾಜರಾಗಲು ಸೋಮವಾರ ಸಂಜೆ 5 ಗಂಟೆಯ ಗಡುವನ್ನು ವಿಧಿಸಲಾಗಿತ್ತು. ಬಿಗಿ ಬಂದೋಬಸ್ತ್ ನಡುವೆ, ವಿಚಾರಣೆಗೆ ಹಾಜರಾದ ಮಾಜಿ ಪ್ರಧಾನಿ ತಮಗೆ ಜಾಮೀನು ನೀಡಬೇಕು ಎಂದು ವಕೀಲರ ಮೂಲಕ ಕೋರಿಕೊಂಡರು. ಜತೆಗೆ ಸಂಸತ್‌ನಿಂದ ಅನರ್ಹತೆ ವಿಚಾರಕ್ಕೆ ಸಂಬಂಧಿಸಿದಂತೆ ಚುನಾವಣ ಆಯೋಗದ ಮುಂಭಾಗದಲ್ಲಿ ದಾಂಧಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಇನ್ನೂ ಅವರು ಬಂಧನದ ತೂಗುಕತ್ತಿ ಎದುರಿಸುತ್ತಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ ಕೂಡ ನಿರೀಕ್ಷಣ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ.

ಪ್ರಾಂತೀಯ ಅಸೆಂಬ್ಲಿಗಳಿಗೆ ಚುನಾವಣೆ ಘೋಷಣೆ
ಪಾಕಿಸ್ಥಾನದ ರಾಷ್ಟ್ರಧ್ಯಕ್ಷ ಆರಿಫ್ ಅಳ್ವಿ ಏಕಪಕ್ಷೀಯವಾಗಿ ಪಂಜಾಬ್‌ ಮತ್ತು ಖೈಬರ್‌-ಪಖು¤ಂಖ್ವಾ ಪ್ರಾಂತೀಯ ಅಸೆಂಬ್ಲಿಗಳಿಗೆ ಚುನಾವಣೆ ದಿನಾಂಕ ಪ್ರಕಟಿಸಿದ್ದಾರೆ. ಇದರಿಂದಾಗಿ ಅಲ್ಲಿ ಶೆಹಬಾಜ್‌ ಷರೀಫ್ ನೇತೃತ್ವದ ಸರಕಾರ‌ ಮತ್ತು ರಾಷ್ಟ್ರಾಧ್ಯಕ್ಷರ ನಡುವಿನ ಗುದ್ದಾಟ ಮತ್ತಷ್ಟು ಬಿರುಸಾಗಿದೆ. ಪ್ರಕಟಗೊಂಡ ವೇಳಾಪಟ್ಟಿ ಪ್ರಕಾರ ಎ.9ರಂದು ಚುನಾವಣೆ ನಡೆಯಲಿದೆ. ಎರಡು ಪ್ರಾಂತೀಯ ಅಸೆಂಬ್ಲಿಗಳನ್ನು ಜನವರಿಯಲ್ಲಿ ವಿಸರ್ಜಿಸಲಾಗಿತ್ತು. ವೇಳಾಪಟ್ಟಿ ಪ್ರಕಟಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಸರಕಾರ‌, ಚುನಾವಣಆಯೋಗ ಮತ್ತು ರಾಷ್ಟ್ರಾಧ್ಯಕ್ಷರ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ. ರವಿವಾರ ನಡೆದಿದ್ದ ಬೆಳವಣಿಗೆಯಲ್ಲಿ ಚುನಾವಣೆ ನಡೆಸುವ ವಿಚಾರ ವಿಚಾರಣೆಯ ಹಂತದಲ್ಲಿ ಇರುವುದರಿಂದ ಚರ್ಚೆ ನಡೆಸಲು ಆಗಮಿಸುವುದಿಲ್ಲ ಎಂದು ಚುನಾವಣ ಆಯೋಗ ಅಳ್ವಿಯವರಿಗೆ ತಿಳಿಸಿತ್ತು.