ನವಲಗುಂದ ಕ್ಷೇತ್ರಕ್ಕೆ “ಮುಸ್ತಫಾ ಕುನ್ನಿಬಾವಿ” ಜೆಡಿಎಸ್ ಸಾರಥಿ
ಧಾರವಾಡ: ಎನ್.ಎಚ್. ಕೋನರೆಡ್ಡಿ, ಜನತಾದಳದಿಂದ ಶಾಸಕರಾಗಿ ಆಯ್ಕೆಯಾಗಲು ನಿರ್ಣಾಯಕ ಪಾತ್ರ ವಹಿಸಿದ್ದ ಹಿರಿಯ ಪತ್ರಕರ್ತ ಮುಸ್ತಫಾ ಕುನ್ನಿಭಾವಿ ಸಧ್ಯದಲ್ಲಿಯೇ ಜೆಡಿಎಸ್ ಸೇರ್ಪಡೆಯಾಗಲಿದ್ದಾರೆ.
ಸಾಮೂಹಿಕ ವಿವಾಹ, ಬಡ ಮಕ್ಕಳ ಶಿಕ್ಷಣಕ್ಕೆ ನೆರವಾಗುತ್ತ ಸದ್ದಿಲ್ಲದೇ ಸಮಾಜ ಸೇವೆಯಲ್ಲಿ ತೊಡಗಿರುವ ಮುಸ್ತಫಾ ಕುನ್ನಿಭಾವಿ ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷಕ್ಕೆ ಶಕ್ತಿ ತುಂಬಲಿದ್ದಾರೆ. ದಿವಂಗತ ಡಾ. ರಾಜೇಸಾಬ ಕುನ್ನಿಭಾವಿಯವರ ಕಾಲದಿಂದಲೂ ರಾಜಕೀಯ ನಂಟು ಬೆಳೆಸಿಕೊಂಡು ಬಂದಿರುವ ಮುಸ್ತಫಾ ಕುನ್ನಿಭಾವಿ ಎಲ್ಲಾ ಜಾತಿ ಜನಾಂಗದ ಜೊತೆ ಅನನ್ಯ ಸಂಬಂಧ ಹೊಂದಿದ್ದಾರೆ. 2023 ರಲ್ಲಿ ನಡೆಯಲಿರುವ ವಿಧಾನಸಭಾ ಮತಕ್ಷೇತ್ರದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿ ತಾಲೂಕಿನಾಧ್ಯಂತ ಹಬ್ಬಿದೆ.
ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರ ಕಟ್ಟಾ ಬೆಂಬಲಿಗರಾಗಿರುವ ಮುಸ್ತಫಾ, ಈಗಾಗಲೇ ಕುಮಾರಸ್ವಾಮಿಯವರ ಜೊತೆ ನವಲಗುಂದ ವಿಧಾನಸಭಾ ಮತಕ್ಷೇತ್ರದಲ್ಲಿ ಪಕ್ಷ ಸಂಘಟನೆ ಬಗ್ಗೆ ಚರ್ಚಿಸಿದ್ದಾರೆ. ಜೆಡಿಎಸ್ ಪಕ್ಷದಿಂದ ಎಲ್ಲಾ ಅಧಿಕಾರ ಪಡೆದು, ಜೆಡಿಎಸ್ ಪಕ್ಷಕ್ಕೆ ದ್ರೋಹ ಬಗೆದಿರುವ ಕೋನರೆಡ್ಡಿ ಬಗ್ಗೆ ಅಸಮಾಧಾನ ಹೊಂದಿರುವ ಕುಮಾರಸ್ವಾಮಿಯವರು, ಮುಸ್ತಫಾ ಕುನ್ನಿಭಾವಿಯವರಿಗೆ ಬೆನ್ನು ತಟ್ಟಿದ್ದಾರೆ. ಕೋನರೆಡ್ಡಿ, ಜೆಡಿಎಸ್ ತೊರೆದು ಕಾಂಗ್ರೇಸ ಪಕ್ಷಕ್ಕೆ ಸೇರಿ, ತಾನೇ ಕಾಂಗ್ರೇಸ್ ಅಭ್ಯರ್ಥಿ ಎಂದು ಹೇಳುತ್ತಾ ತಿರುಗಾಡುತ್ತಿದ್ದು, ಕಾಂಗ್ರೇಸ್ ಪಕ್ಷವನ್ನು ಕಟ್ಟಿ ಬೆಳೆಸಿದ ಮಾಜಿ ಸಚಿವ ಕೆ ಎನ್ ಗಡ್ಡಿ, ಶಿವಾನಂದ ಕರಿಗಾರ, ವಿಜಯ ಕುಲಕರ್ಣಿ, ಬಾಪುಗೌಡ ಪಾಟೀಲ್, ವಿನೋದ ಅಸೂಟಿಯವರ ಕಣ್ಣು ಕೆಂಪಾಗಿಸಿದೆ.