ಧಾರವಾಡ: ಅನಧಿಕೃತ ಫಲಕ ತೆರವಿಗೆ ಸೂಚನೆ

ಧಾರವಾಡ: ಅನಧಿಕೃತ ಫಲಕ ತೆರವಿಗೆ ಸೂಚನೆ

ಧಾರವಾಡ: 'ನಿಯಮ ಉಲ್ಲಂಘಿಸಿ ಪಾದಚಾರಿ ಮಾರ್ಗ ಅತಿಕ್ರಮಿಸುವವರು ಮತ್ತು ಬ್ಯಾನರ್, ಬಂಟಿಂಗ್ ಅಳವಡಿಸುವವರ ವಿರುದ್ಧ ಕಾನೂನಾತ್ಮಕ ಕ್ರಮಕೈಗೊಳ್ಳಬೇಕು, ಅವುಗಳನ್ನು ತೆರವುಗೊಳಿಸಬೇಕು' ಎಂದು ರಾಜ್ಯಮಟ್ಟದ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ಅಧ್ಯಕ್ಷ ನ್ಯಾಯಮೂರ್ತಿ ಸುಭಾಸ ಅಡಿ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

'ಮನೆ, ಅಂಗಡಿ, ಕಚೇರಿ ಮುಂದಿನ ರಸ್ತೆಗಳ ಪಕ್ಕದ ಪಾದಚಾರಿ ಮಾರ್ಗಗಳನ್ನು ಅತಿಕ್ರಮಿಸಿರುವ ಕೆಲವರು, ತಮ್ಮ ಸ್ವಂತ ಆಸ್ತಿಯಂತೆ ಬಳಸುತ್ತಿದ್ದಾರೆ. ಸ್ಥಳೀಯ ಆಡಳಿತ ಇಂತಹ ಅತಿಕ್ರಮಣ ತೆರವುಗೊಳಿಸಬೇಕು. ಬ್ಯಾನರ್, ಪೋಸ್ಟರ್, ಬಂಟಿಂಗ್‌ಗಳು ಪರಿಸರ ಹಾಳು ಮಾಡುತ್ತದೆ. ಈ ಕುರಿತು ಅಳವಡಿಸುವವರಿಗೆ ತಿಳಿವಳಿಕೆ ನೀಡಬೇಕು. ತಪ್ಪಿದಲ್ಲಿ ದಂಡ ವಿಧಿಸಬೇಕು' ಎಂದು ಹೇಳಿದರು.

'ಅಧಿಕಾರಿಗಳು ನಗರ ಸಮೀಕ್ಷೆ ಮಾಡಿ, ಜನಜೀವನ, ವ್ಯಾಪಾರ, ಸಂಚಾರ ದಟ್ಟಣೆ ಬಗ್ಗೆ ಮಾಹಿತಿ ಕಲೆ ಹಾಕಬೇಕು. ಆಗ ಸಮರ್ಪಕವಾಗಿ ನಗರದ ನಿರ್ವಹಣೆ, ಸ್ವಚ್ಛತೆ, ಸೌಂದರ್ಯ ಕಾಪಾಡಲು ಸಾಧ್ಯವಾಗುತ್ತದೆ' ಎಂದು ಹೇಳಿದರು.

ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪುಷ್ಪಲತ ಸಿ.ಎಂ., ಜಿಲ್ಲಾ ಪಂಚಾಯ್ತಿ ಸಿಇಒ ಡಾ.ಸುರೇಶ ಇಟ್ನಾಳ, ಮಹಾನಗರಪಾಲಿಕೆ ಆಯುಕ್ತ ಡಾ. ಬಿ.ಗೋಪಾಲಕೃಷ್ಣ ಮಾತನಾಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಬಿ. ಜಗಲಾಸರ್, ಡಿಸಿಪಿ ಡಾ. ಗೋಪಾಲ ಬ್ಯಾಕೋಡ, ಹಿರಿಯ ಪರಿಸರ ಅಧಿಕಾರಿ ಸೈಯದ್ ಖಾಜಾ ಇದ್ದರು.