ಗ್ರಾಹಕರಿಗೆ ಬಿಗ್ಶಾಕ್ : ಗೊಲ್ಲಹಳ್ಳಿಯಲ್ಲಿ ಬೆಳೆದ ʻ ದಕ್ಷಿಣ ಆಫ್ರಿಕಾ ಡಾರ್ಪರ್ ಕುರಿ ʼ ಬೆಲೆ ಏರಿಕೆ
ಬೆಂಗಳೂರು : ಕುರಿ ಸಾಕಾಣಿಕೆ ಸಹ ಲಾಭದಾಯಕ ವೃತ್ತಿಯಾಗಿ ಜನಪ್ರಿಯವಾಗುತ್ತಿದೆ. ಅತ್ಯಂತ ವ್ಯವಸ್ಥಿತವಾಗಿ ಕುರಿ ಸಾಕಾಣಿಕೆ ಮಾಡಿದರೆ ರೈತ ಉತ್ತಮ ಆದಾಯವನ್ನೂ ಗಳಿಸಬಹುದು ಎಂಬುದಕ್ಕೆ ಇಲ್ಲೊಂದು ನಿದರ್ಶನವಿದೆ.
ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ದಕ್ಷಿಣ ಆಫ್ರಿಕಾ ಮೂಲದ ಡಾರ್ಪರ್ ಕಪ್ಪು ಮೂತಿ ಹಾಗೂ ಬಿಳಿ ಮೂತಿಯ ಕುರಿ, ಮೇಕೆಗಳು ಗಮನ ಸೆಳೆಯುತ್ತಿವೆ. ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಗೊಲ್ಲಹಳ್ಳಿಯ ಬಿ.ಆರ್.ಎಸ್. ಫಾರ್ಮ್ಸ್ನಲ್ಲಿ ಬೆಳೆಯುತ್ತಿರುವ ಈ ಕುರಿಗಳ ಬೆಲೆ ಕೇಳಿದ್ರೆ ಅಚ್ಚರಿಯಾಗುತ್ತದೆ.
ಹೌದು, ಬಿಳಿ ಮೂತಿಯ ಕುರಿಯ ಬೆಲೆ 5 ಲಕ್ಷ ರೂ.ಗಳ ವರೆಗೂ ಇದ್ದರೆ, ಕಪ್ಪು ಮೂತಿಯ ಕುರಿ ಬೆಲೆ ನಾಲ್ಕು ಲಕ್ಷ ರೂ.ವರೆಗೂ ಇದೆ. ಬಿ.ಆರ್.ಎಸ್.ಫಾರ್ಮ್ಸ್ ಮಾಲೀಕ ಅನೀಲ್ ಕುಮಾರ್ ಅವರು ಈ ಕುರಿಗಳನ್ನು ಬೆಳೆಸಿ, ಮೇಳಕ್ಕೆ ಕರೆ ತಂದಿದ್ದಾರೆ. ಕುರಿಯನ್ನು ಜನ ಕೊಂಡುಕೊಳ್ಳಲಿ ಅನ್ನುವುದಕ್ಕಿಂತ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಲಿ ಎನ್ನುವುದೇ ಇವರ ದೊಡ್ಡ ಆಶಯವಾಗಿದೆ.
ಕೋವಿಡ್ ನಂತರದ ದಿನಗಳಲ್ಲಿ ಸಾಕಷ್ಟು ಯುವಕರು ಉದ್ಯೋಗ ಕಳೆದುಕೊಂಡು ತಮ್ಮ ಸ್ವಂತ ಊರುಗಳಿಗೆ ತೆರಳಿದ್ದು, ಕಡಿಮೆ ಭೂಮಿ, ಬಂಡವಾಳ ಹೂಡಿಕೆಯಲ್ಲಿ ಕುರಿ ಸಾಕಾಣಿಕೆ ಸಹ ಮಾಡಬಹುದಾಗಿದೆ. ಕುರಿ ಸಾಕಾಣಿಕೆ ನಾವೇ ನಿಂತು ಮಾಡಿದಾಗ ಲಾಭದಾಯಕ. ಕೆಲಸಗಾರರನ್ನು ಇಟ್ಟು ಕುರಿ ಸಾಕಾಣಿಕೆ ಮಾಡಲು ಹೋದರೆ ನಷ್ಟವಾಗಲಿದೆ. ಇಂದು ಸಾಕಷ್ಟು ಮಂದಿ ಸ್ವಂತ ಉದ್ಯಮಕ್ಕೆ ಮುಂದಾಗುತ್ತಿದ್ದಾರೆ. ಕುರಿ ಸಾಕಾಣಿಕೆಗೆ ಆಸಕ್ತಿ ತೋರಿದರೆ ಕನಿಷ್ಠ 20 ರಿಂದ 25 ಕುರಿಗಳ ಮೂಲಕ ಸಾಕಾಣಿಕೆ ಆರಂಭಿಸುವುದು ಉತ್ತಮ ಎನ್ನುತ್ತಾರೆ ಅನೀಲ್ ಕುಮಾರ್.
ಮರಿಗಳ ತೂಕ ಜಾಸ್ತಿ: ದಕ್ಷಿಣ ಆಫ್ರಿಕಾ ಮೂಲದ ಕುರಿ ಡಾರ್ಪರ್ ಹಾಗೂ ಬೋಯರ್ ತಳಿಯ ಮೇಕೆ ಅಲ್ಲಿನ ಬಹು ಚರ್ಚಿತ ತಳಿಗಳು. ತಳಿ ಸಂವರ್ಧನೆ ಮಾಡಿದಾಗ, ದೇಸಿ ತಳಿಯಿಂದ ದೇಸಿ ತಳಿಗಳಿಗೆ ಕ್ರಾಸ್ ಮಾಡಿದಾಗ ಮರಿಗಳು ಮೂರು ತಿಂಗಳಿಗೆ 10 ರಿಂದ 12 ಕೆ.ಜಿ ಬರುತ್ತವೆ. ಆದರೆ ಡಾರ್ಪರ್ನಿಂದ ದೇಸಿ ತಳಿಗೆ ಕ್ರಾಸ್ ಮಾಡಿದಾಗ ಮರಿಗಳು 25 ಕೆ.ಜಿ ವರೆಗೂ ತೂಕ ಬರುತ್ತವೆ. ಇದರಿಂದ ರೈತರಿಗೆ ಲಾಭ ಹಾಗೂ ಅನುಕೂಲ ಸಿಗಲಿದೆ. ಎಲ್ಲಾ ಹವಾಗುಣಕ್ಕೂ ಹೊಂದಿಕೊಳ್ಳುತ್ತದೆ. ಮಾಂಸ ಉತ್ಪಾದನೆಗೆ ಹೇಳಿ ಮಾಡಿಸಿದ ಕುರಿ-ಮೇಕೆ ಇದಾಗಿದೆ. ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾದಿಂದ ಪ್ರಪಂಚದ ಮುಕ್ಕಾಲು ಭಾಗಕ್ಕೆ ಇವುಗಳ ಮಾಂಸ ವಿತರಣೆ ಆಗುತ್ತದೆ. ಈ ಜಾತಿಗೆ ಸೇರಿದ ಕುರಿಯ ಮೂರು ತಿಂಗಳ ಮರಿ ಬೆಲೆ 1.5 ಲಕ್ಷ ರೂ. ಆಗುತ್ತದೆ. ನಾವು ದೇಸಿ ತಳಿಗೆ ಸಂವರ್ಧನೆ ಮಾಡಿದ್ದರಿಂದ 50 ಸಾವಿರ ರೂ.ಗೆ ನೀಡುತ್ತೇವೆ ಎಂದು ಬಿ.ಆರ್.ಎಸ್. ಫಾರ್ಮ್ಸ್ ಮಾಲೀಕ ಅನೀಲ್ ಕುಮಾರ್ ಹೇಳಿದ್ದಾರೆ.