ಪ್ರಜಾಪ್ರಭುತ್ವ ಅಪಾಯದಲ್ಲಿದೆ: ರಾಹುಲ್‌ಗೆ ಶಿಕ್ಷೆ ಮತ್ತು ಅನರ್ಹತೆ ಖಂಡನೆ

ಪ್ರಜಾಪ್ರಭುತ್ವ ಅಪಾಯದಲ್ಲಿದೆ: ರಾಹುಲ್‌ಗೆ ಶಿಕ್ಷೆ ಮತ್ತು ಅನರ್ಹತೆ ಖಂಡನೆ

ವದೆಹಲಿ: ದೇಶದ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ವಿರೋಧ ಪಕ್ಷಗಳು ಕಳವಳ ವ್ಯಕ್ತಪಡಿಸಿವೆ. ಮಾನಹಾನಿ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರಿಗೆ ಎರಡು ವರ್ಷ ಜೈಲುಶಿಕ್ಷೆ ವಿಧಿಸಿದ್ದನ್ನು ಖಂಡಿಸಿ, 14 ವಿರೋಧ ಪಕ್ಷಗಳ ಹಲವು ನಾಯಕರು ಶುಕ್ರವಾರ ಇಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ರಾಹುಲ್‌ಗೆ ಶಿಕ್ಷೆ ಪ್ರಕಟವಾದ ಬೆನ್ನಲ್ಲೇ, ಶುಕ್ರವಾರ ಬೆಳಿಗ್ಗೆ ವಿರೋಧ ಪಕ್ಷಗಳ ಸಭೆ ನಡೆಸಲು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುರುವಾರ ರಾತ್ರಿ ಕರೆ ನೀಡಿದ್ದರು. ಶುಕ್ರವಾರ ಬೆಳಿಗ್ಗೆ ಸಭೆ ನಡೆಸಿದ ವಿರೋಧ ಪಕ್ಷಗಳ ನಾಯಕರು ಸಂಸತ್ ಭವನದ ಆವರಣದಿಂದ ರಾಷ್ಟ್ರಪತಿ ಭವನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಅದಾನಿ ಸಮೂಹದ ಷೇರುಗಳ ಮೌಲ್ಯ ತಿರುಚಿದ ಆರೋಪದ ತನಿಖೆಗೆ ಜಂಟಿ ಸಂಸದೀಯ ಸಮಿತಿ ರಚಿಸಬೇಕು ಎಂದು ಒತ್ತಾಯಿಸಿದರು.

ವಿಜಯ್‌ ಚೌಕ್‌ನಲ್ಲಿ ಪೊಲೀಸರು ನಿಷೇಧಾಜ್ಞೆ ಜಾರಿ ಮಾಡಿದ್ದರು. ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಸಂಸದರನ್ನು ಪೊಲೀಸರು ವಶಕ್ಕೆ ಪಡೆದರು

ಮೋದಿ ಅವರೇ ನನ್ನ ಕುಟುಂಬವನ್ನು ನೀವು ಪರಿವಾರವಾದಿ ಎಂದು ಕರೆಯುತ್ತೀರಿ. ನನ್ನ ಕುಟುಂಬ ದೇಶಕ್ಕಾಗಿ ರಕ್ತ ನೀಡಿದೆ. ಅಂತಹ ಕುಟುಂಬವನ್ನು ಮುಗಿಸಲು ನೀವು ಹೊರಟಿದ್ದೀರಿ. ಒಬ್ಬ ಹುತಾತ್ಮ ಪ್ರಧಾನಿಯ ಮಗನನ್ನು ಬಿಜೆಪಿ ನಾಯಕರು 'ಮೀರ್‌ ಜಾಫರ್‌' ಎಂದು ಕರೆದಿದ್ದರು. ನೆಹರೂ ಹೆಸರು ಏಕೆ ಇಟ್ಟುಕೊಳ್ಳುವುದಿಲ್ಲ ಎಂದು ಪ್ರಶ್ನಿಸಿ ಸಂಸತ್ತಿನಲ್ಲೇ ಕಾಶ್ಮೀರಿ ಪಂಡಿತರಿಗೆ ನೀವು ಅಪಮಾನ ಮಾಡಿದ್ದಿರಿ. ಆದರೆ, ನಿಮಗ್ಯಾಕೆ ಯಾರೂ ಎರಡು ವರ್ಷ ಜೈಲುಶಿಕ್ಷೆ ನೀಡಲಿಲ್ಲ?
- ಪ್ರಿಯಾಂಕಾ ಗಾಂಧಿ ವಾದ್ರಾ, ಕಾಂಗ್ರೆಸ್‌ ನಾಯಕಿ

ಅಪರಾಧ ಹಿನ್ನೆಲೆಯವರು ಬಿಜೆಪಿಯ ಸಂಪುಟದಲ್ಲಿ ಸಚಿವರಾಗಿದ್ದಾರೆ. ವಿಪಕ್ಷಗಳ ನಾಯಕರನ್ನು ಅವರ ಭಾಷಣದ ಕಾರಣಕ್ಕೆ ಜೈಲಿಗೆ ಹಾಕಲಾಗುತ್ತಿದೆ.
- ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ

ನರೇಂದ್ರ ಮೋದಿ ನಾಯಕತ್ವದ ಈ ಸರ್ಕಾರವು, ಬ್ರಿಟಿಷ್ ಸರ್ಕಾರಕ್ಕಿಂತ ಅಪಾಯಕಾರಿ. ಇದು ಕಾಂಗ್ರೆಸ್‌ನ ಹೋರಾಟ ಮಾತ್ರವಲ್ಲ. ದೇಶದ ರಕ್ಷಣೆಗಾಗಿನ ಹೋರಾಟ
- ಅರವಿಂದ ಕೇಜ್ರಿವಾಲ್‌, ದೆಹಲಿ ಸಿ.ಎಂ

ರಾಹುಲ್ ಮೇಲ್ಮನವಿ ಸಲ್ಲಿಸುವ ಮುನ್ನವೇ ಅವರನ್ನು ಅನರ್ಹಗೊಳಿಸಿ, ಅವರ ಹಕ್ಕನ್ನು ಕಸಿದುಕೊಳ್ಳಲಾಗಿದೆ. ಬಿಜೆಪಿ ಇದಕ್ಕೇ ಕಾದಿತ್ತು ಎನಿಸುತ್ತಿದೆ
- ಎಂ.ಕೆ.ಸ್ಟಾಲಿನ್‌, ತಮಿಳುನಾಡು ಸಿ.ಎಂ

‌ಈ ಅನರ್ಹತೆಯು, ಪ್ರಜಾಪ್ರಭುತ್ವದ ಮೇಲಿನ ಹಿಂಸಾತ್ಮಕ ದಾಳಿಯಾಗಿದೆ. ಪ್ರಜಾಪ್ರಭುತ್ವದ ಮೇಲೆ ಬಿಜೆಪಿ ನಡೆಸುತ್ತಿರುವ ದಾಳಿಗಳಲ್ಲಿ ಇದು ಹೊಸ ಅಧ್ಯಾಯವಷ್ಟೆ.
- ಪಿಣರಾಯಿ ವಿಜಯನ್‌, ಕೇರಳ ಸಿ.ಎಂಮಾನಹಾನಿಯ ಕಾರಣಕ್ಕೆ ಅನರ್ಹರಾಗುವುದಾದರೆ, ಸಂಸತ್ತಿನ ಶೇ 70ರಷ್ಟು ಮಂದಿ ಅದಕ್ಕೆ ಅರ್ಹರು. ಅವರಲ್ಲಿ ಬಹುತೇಕ ಮಂದಿ ಬಿಜೆಪಿ ಸಂಸದರು.
- ಡ್ಯಾನಿಷ್‌ ಅಲಿ, ಬಿಎಸ್‌ಪಿ ಸಂಸಇದು ಪ್ರಜಾಪ್ರಭುತ್ವದ ಕಗ್ಗೊಲೆ. ನಿರಂಕುಶ ಅಧಿಕಾರದ ಅಂತ್ಯ ಇಲ್ಲಿಂದಲೇ ಆರಂಭವಾಗಲಿದೆ. ಈ ಹೋರಾಟಕ್ಕೆ ಈಗ ಒಂದು ದಿಕ್ಕು ಬೇಕಷ್ಟೆ.
- ಉದ್ಧವ್ ಠಾಕ್ರೆ, ಶಿವಸೇನಾ (ಉದ್ಧವ್ ಬಣ) ಮುಖ್ಯಸ್ಥ

ಬಿಜೆಪಿಯ ಪಾಪದ ಕೊಡ ತುಂಬಿದೆ. ತನ್ನ ನಾಶದ ಶವ ಪೆಟ್ಟಿಗೆಗೆ ತಾನೇ ಕೊನೆಯ ಮೊಳೆ ಬಡಿದಿದೆ. ಈ ಫ್ಯಾಸಿಸ್ಟ್ ನಡವಳಿಕೆಗೆ ಹೆದರುವ, ಹಿಂಜರಿಯುವ ಪ್ರಶ್ನೆಯೇ ಇಲ್ಲ. ಈ ಅನ್ಯಾಯದ ವಿರುದ್ದ ನ್ಯಾಯಾಲಯ ಮತ್ತು ಬೀದಿಗಳಲ್ಲಿ ಹೋರಾಟ ಮಾಡುತ್ತೇವೆ. ನರೇಂದ್ರ ಮೋದಿ, ಬಿಜೆಪಿ ಮತ್ತು ಎನ್‌ಡಿಎ ಸರ್ಕಾರದ ವಿರುದ್ಧ ಮಾತನಾಡುವ ಎಲ್ಲರಿಗೂ ಎಚ್ಚರಿಕೆಯ ರೂಪದಲ್ಲಿ ರಾಹುಲ್ ಗಾಂಧಿಯವರ ಬಗ್ಗೆ ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡಿದೆ.
- ಸಿದ್ದರಾಮಯ್ಯ, ವಿಧಾನಸಭೆ ವಿರೋಧ ಪಕ್ಷದ ನಾಯಕ

ಸುಗ್ರೀವಾಜ್ಞೆ ಹರಿದು ಹಾಕಿದ್ದ ರಾಹುಲ್‌ ಗಾಂಧಿ

ಎರಡು ವರ್ಷ ಜೈಲುಶಿಕ್ಷೆಗೆ ಗುರಿಯಾದ ಜನಪ್ರತಿನಿಧಿಗಳ ಸದಸ್ಯತ್ವವನ್ನು ಅನರ್ಹಗೊಳಿಸುವುದರಿಂದ ರಕ್ಷಿಸಲು ಯುಪಿಎ-2 ಸರ್ಕಾರವು 2013ರಲ್ಲಿ ತರಲು ಹೊರಟಿದ್ದ ಸುಗ್ರೀವಾಜ್ಞೆಯ ಪ್ರತಿಯನ್ನು ಸ್ವತಃ ರಾಹುಲ್‌ ಗಾಂಧಿ ಸಾರ್ವಜನಿಕವಾಗಿ ಹರಿದುಹಾಕಿದ್ದರು. ಆ ಸುಗ್ರೀವಾಜ್ಞೆ ಅಸಂಬದ್ಧ ಎಂದು ಹೇಳಿದ್ದರು. ಈಗ ಮಾನಹಾನಿ ಪ್ರಕರಣದಲ್ಲಿ ರಾಹುಲ್‌ ಅವರಿಗೆ ಎರಡು ವರ್ಷ ಜೈಲುಶಿಕ್ಷೆ ಘೋಷಣೆಯಾಗಿದೆ. ಕಾನೂನಿನ ಪ್ರಕಾರ, ಅವರ ಸದಸ್ಯತ್ವ ಅನರ್ಹವಾಗಿದೆ. ರಾಹುಲ್‌ ಅಂದು ಸುಗ್ರೀವಾಜ್ಞೆಗೆ ವಿರೋಧ ವ್ಯಕ್ತಪಡಿಸದೇ ಇದ್ದು, ಅದು ಜಾರಿಯಾಗಿದ್ದಿದ್ದರೆ ಈಗ ರಾಹುಲ್‌ ಅವರ ಸದಸ್ಯತ್ವ
ರದ್ದಾಗುತ್ತಿರಲಿಲ್ಲ.

'ಚುನಾಯಿತ ಜನಪ್ರತಿನಿಧಿಗಳಾದ ಸಂಸದರು (ರಾಜ್ಯಸಭೆ ಸದಸ್ಯರೂ ಸೇರಿ) ಮತ್ತು ಶಾಸಕರಿಗೆ (ವಿಧಾನ ಪರಿಷತ್‌ ಸದಸ್ಯರೂ ಸೇರಿ) ಯಾವುದೇ ಕ್ರಿಮಿನಲ್‌ ಪ್ರಕರಣಗಳಲ್ಲಿ ಎರಡು ವರ್ಷ ಶಿಕ್ಷೆಯಾದರೂ ತಕ್ಷಣವೇ ಅವರ ಸದಸ್ಯತ್ವ ಅನರ್ಹವಾಗುವುದಿಲ್ಲ. ಅನರ್ಹತೆ ಜಾರಿಗೆ ಮೂರು ತಿಂಗಳವರೆಗೆ ಸಮಯಾವಕಾಶವಿದೆ. ತಪ್ಪಿತಸ್ಥ ಎಂದು ಪ್ರಕಟವಾದ ತೀರ್ಪಿನ ವಿರುದ್ಧ ಉನ್ನತ ನ್ಯಾಯಾಲಯಗಳಲ್ಲಿ ಮನವಿ ಸಲ್ಲಿಸಲು ಅವಕಾಶವಿದ್ದು, ತೀರ್ಪು
ಪ್ರಕಟವಾಗುವವರೆಗೂ ಅನರ್ಹತೆ ಜಾರಿಯಾಗುವುದಿಲ್ಲ' ಎಂದು 1951 ಜನಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್‌ 8(4) ಹೇಳುತ್ತದೆ.

ಈ ಕಾಯ್ದೆಯ 8(4)ನೇ ಸೆಕ್ಷನ್‌ ನೀಡುವ ರಕ್ಷಣೆಯನ್ನು, ಲಿಲ್ಲಿ ಥಾಮಸ್‌ ಮತ್ತು ಲೋಕ ಪ್ರಹಾರಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನಿಷ್ಕ್ರಿಯಗೊಳಿಸಿ 2013ರಲ್ಲಿ ಆದೇಶ ನೀಡಿತ್ತು. 'ಶಿಕ್ಷೆ ಪ್ರಕಟವಾದ ಕೂಡಲೇ ಜನಪ್ರತಿನಿಧಿಗಳ ಸದಸ್ಯತ್ವ ಅನರ್ಹವಾಗುತ್ತದೆ' ಎಂದು ಸುಪ್ರೀಂ ಕೋರ್ಟ್‌ ಹೇಳಿತ್ತು.

ಯುಪಿಎ ಮಿತ್ರಪಕ್ಷಗಳಲ್ಲಿ ಒಂದಾಗಿದ್ದ ಆರ್‌ಜೆಡಿಯ ಮುಖ್ಯಸ್ಥ ಲಾಲು ಪ್ರಸಾದ್ ಅವರ ಸದಸ್ಯತ್ವ ಅನರ್ಹವಾಗಬೇಕಿತ್ತು. ಅದೇ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ನ ತೀರ್ಪನ್ನು ನಿಷ್ಕ್ರಿಯಗೊಳಿಸುವಂತಹ ಸುಗ್ರೀವಾಜ್ಞೆಯನ್ನು ಸರ್ಕಾರವು ತರಲು ಹೊರಟಿತ್ತು. ಸುಗ್ರೀವಾಜ್ಞೆಗೆ ರಾಷ್ಟ್ರಪತಿಯ ಅಂಕಿತವಷ್ಟೇ ಬೀಳಬೇಕಿತ್ತು. ಆ ಸಂದರ್ಭದಲ್ಲಿ ದೆಹಲಿ ಪ್ರೆಸ್‌ಕ್ಲಬ್‌ನಲ್ಲಿ ಕಾಂಗ್ರೆಸ್‌ ನಾಯಕರೊಂದಿಗೆ ನಡೆಯುತ್ತಿದ್ದ ಸಂವಾದಕ್ಕೆ ರಾಹುಲ್ ಗಾಂಧಿ ದಿಢೀರ್ ಭೇಟಿ ನೀಡಿದ್ದರು.

'ಇಂತಹ ವಿಚಾರದಲ್ಲಿ ಸರ್ಕಾರ ಮಾಡಿದ್ದು ಸರಿಯಲ್ಲ. ಇದು ಶುದ್ಧ ಅಸಂಬದ್ಧ. ಇಂಥ ಸಣ್ಣ ವಿಷಯದಲ್ಲಿ ರಾಜಿಯಾದರೆ, ಮುಂದೆ ಎಲ್ಲಾ ವಿಷಯದಲ್ಲೂ ಬಾಗುತ್ತಲೇ ಹೋಗಬೇಕಾಗುತ್ತದೆ' ಎಂದು ಹೇಳಿದ್ದರು. ಸುಗ್ರೀವಾಜ್ಞೆಯ ಪ್ರತಿಯನ್ನು ಹರಿದುಹಾಕಿದ್ದರು. ನಂತರ ಸರ್ಕಾರವು
ಸುಗ್ರೀವಾಜ್ಞೆಯನ್ನು ವಾಪಸ್‌ ಪಡೆದಿತ್ತು.

2013ರಲ್ಲಿ ರಾಹುಲ್‌ ಅವರ ಕಾರಣದಿಂದಲೇ ಉಳಿದುಕೊಂಡಿದ್ದ ಕಾನೂನು, ಈಗ ರಾಹುಲ್‌ ವಿರುದ್ಧವೇ ಬಳಕೆಯಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.

'ನೀರವ್ ಮೋದಿ, ಲಲಿತ್ ಮೋದಿ ಕಳ್ಳರಲ್ಲವೇ?'.

ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ಪಕ್ಷಗಳ ನಾಯಕರು ಕೇಳುತ್ತಿರುವ ಪ್ರಶ್ನೆ ಇದು.

ಲೋಕಸಭೆ ಸದಸ್ಯತ್ವದಿಂದ ರಾಹುಲ್‌ ಗಾಂಧಿ ಅವರನ್ನು ಅಮಾನತು ಮಾಡಿದ ಆದೇಶ ಹೊರಬಿದ್ದ ಕೂಡಲೇ, ವಿವಿಧ ವಿರೋಧ ಪಕ್ಷಗಳ ನಾಯಕರು ಈ ಕ್ರಮವನ್ನು ಖಂಡಿಸಿ ಟ್ವೀಟ್‌ ಮಾಡಿದ್ದಾರೆ. ಜತೆಗೆ, ಟ್ವಿಟರ್‌ ಮತ್ತು ಫೇಸ್‌ಬುಕ್‌ನಲ್ಲಿ "ललित मोदी" (ಲಲಿತ್ ಮೋದಿ) ಮತ್ತು "नीरव मोदी" (ನೀರವ್ ಮೋದಿ) ಹೆಸರನ್ನು ಬಳಸಿ ಟ್ವೀಟ್‌ ಮತ್ತು ಪೋಸ್ಟ್‌ ಮಾಡುತ್ತಿದ್ದಾರೆ. ಎರಡೂ ಹೆಸರುಗಳು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್‌ನಲ್ಲಿವೆ.

'ನೀರವ್ ಮೋದಿ ಕಳ್ಳನಲ್ಲವೇ? ಲಲಿತ್ ಮೋದಿ ಕಳ್ಳನಲ್ಲವೇ? ಇವರನ್ನು ರಕ್ಷಿಸಲು ಬಿಜೆಪಿ ಮುಂದಾಗುತ್ತಿರುವುದೇಕೆ? ಕಳ್ಳರನ್ನು ಕಳ್ಳರು ಎಂದು ಕರೆಯಲು ಇವರ ಆಕ್ಷೇಪವೇಕೆ? ಅದಾನಿ ವಿಚಾರದಿಂದ ಗಮನ ಬೇರೆಡೆಗೆ ಸೆಳೆಯಲೆಂದೇ ಇದನ್ನೆಲ್ಲಾ ಮಾಡಲಾಗುತ್ತಿದೆ. ಆದರೆ ಅದು ಸಾಧ್ಯವಾಗುವುದಿಲ್ಲ' ಎಂದು ಕಾಂಗ್ರೆಸ್‌ ವಕ್ತಾರೆ ಸುಪ್ರಿಯಾ ಶ್ರೀನಾತೆ ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ.

ರಾಹುಲ್‌ ಎಲ್ಲ ಮೋದಿಗಳೂ ಕಳ್ಳರು ಎಂದಿರಲಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಭೂಷಣ್ ಟ್ವೀಟ್‌ ಮಾಡಿದ್ದಾರೆ. 'ರಾಹುಲ್ ಗಾಂಧಿ ಅವರು ನೀರವ್ ಮೋದಿ, ಲಲಿತ್ ಮೋದಿ, ಮೆಹುಲ್ ಚೋಕ್ಸಿಯನ್ನು ಕಳ್ಳರು ಎಂದಿದ್ದರು. ರಾಹುಲ್‌, 'ಎಲ್ಲಾ ಕಳ್ಳರ ಹೆಸರಿನಲ್ಲಿ ಮೋದಿ ಉಪನಾಮ ಏಕೆ ಇದೆ' ಎಂದು ಕೇಳಿದ್ದರು. 'ಎಲ್ಲಾ ಮೋದಿಗಳೂ ಕಳ್ಳರು' ಎಂದಿರಲಿಲ್ಲ. ಆದರೂ ಯಾವುದೋ ಮೋದಿಯ ಮಾನಕ್ಕೆ ಹಾನಿಯಾಗಿದೆ ಎಂದು ರಾಹುಲ್ ವಿರುದ್ಧ ದೂರು ನೀಡಲಾಗಿದೆ ಮತ್ತು ಎರಡು ವರ್ಷ ಜೈಲುಶಿಕ್ಷೆ ನೀಡಲಾಗಿದೆ. ಅವರ ಸಂಸದನ ಸ್ಥಾನವನ್ನೂ ತೆರವು ಮಾಡಲಾಗಿದೆ. ಇದು ಭಾರತದ ಪ್ರಜಾಪ್ರಭುತ್ವದ ಇಂದಿನ ಸ್ಥಿತಿ' ಎಂದು ಅವರು ಟ್ವೀಟ್‌
ಮಾಡಿದ್ದಾರೆ.

'ಮೋದಿ ಸರ್ಕಾರದ ಆತ್ಮೀಯ ಮೋದಿ ಸೋದರರಾದ ನೀರವ್ ಮೋದಿ-ಲಲಿತ್ ಮೋದಿ, ವಿಜಯ್‌ ಮಲ್ಯ, ಮೆಹುಲ್ ಚೋಕ್ಸಿ ದೇಶದ ಬಡಜನರ ಹಣ ದೋಚಿ ವಿದೇಶಕ್ಕೆ ಓಡಿಹೋಗಿದ್ದಾರೆ. ತನಿಖಾ ಸಂಸ್ಥೆಗಳಿಗೆ ಈ ಜನರು ಕಾಣುವುದಿಲ್ಲ. ಸರ್ಕಾರವನ್ನು ಪ್ರಶ್ನಿಸುವವರಷ್ಟೇ ಈ ಸಂಸ್ಥೆಗಳಿಗೆ ಕಾಣುತ್ತಾರೆ' ಎಂದು ಆರ್‌ಜೆಡಿ ಟ್ವೀಟ್‌ ಮಾಡಿದೆ.

ಶಿಕ್ಷೆ ಬೇರೆ, ತೀರ್ಪು ಬೇರೆ

ಜನಪ್ರಾತಿನಿಧ್ಯ ಕಾಯ್ದೆಯ ಕಲಂ 4ರ ಅನುಸಾರ ಶಿಕ್ಷೆ ಪ್ರಕಟವಾದ ಕೂಡಲೇ ಅನರ್ಹತೆ ಜಾರಿಗೆ ಬರುತ್ತದೆ. ಇದು ಲಿಲ್ಲಿ ಥಾಮಸ್ ಪ್ರಕರಣದಲ್ಲಿ ತೀರ್ಮಾನವಾಗಿದೆ. ತೀರ್ಪು ಮತ್ತು ಶಿಕ್ಷೆ ಬೇರೆ ಬೇರೆ. ಅಪರಾಧಿ ರಾಹುಲ್‌ ಗಾಂಧಿ ಈ ಪ್ರಕರಣದಲ್ಲಿ ಶಿಕ್ಷೆ
ಮತ್ತು ತೀರ್ಪು ಎರಡಕ್ಕೂ ತಡೆ ಕೋರಿ ಮೇಲ್ಮನವಿ ಸಲ್ಲಿಸಬೇಕು. ಕೋರ್ಟ್ ಎರಡಕ್ಕೂ ತಡೆ ಆದೇಶ ಕೊಟ್ಟರೆ ಅವರು ಅನರ್ಹತೆಯಿಂದ ಪಾರಾಗಬಹುದು. ಅನರ್ಹತೆ ಪರಾಮರ್ಶೆಯ ಹಕ್ಕು ರಾಷ್ಟ್ರಪತಿ ಅವರಿಗೆ ಇದ್ದು ಇದನ್ನು ರಾಹುಲ್‌ ಗಾಂಧಿ, ರಾಷ್ಟ್ರಪತಿ ಅವರಿಗೆ ಮನವಿ ಮಾಡಿ ಕೇಳಬಹುದು.

- ಅಶೋಕ ಹಾರನಹಳ್ಳಿ, ಹಿರಿಯ ವಕೀಲರು, ಹೈಕೋರ್ಟ್‌

'ಶಿಕ್ಷೆ ನ್ಯಾಯೋಚಿತವಾಗಿದೆ'

ಸಂಸದ ರಾಹುಲ್‌ ಗಾಂಧಿ ಅವರಿಗೆ ಗುಜರಾತ್‌ನ ನ್ಯಾಯಾಲಯವು 2019ರಲ್ಲಿ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯಲ್ಲಿ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿರುವುದು ಸರಿಯಾಗಿಯೇ ಇದೆ. ಅಪರಾಧಿ ರಾಹುಲ್ ಗಾಂಧಿ ಹೇಳಿಕೆ ಮುಗ್ಧತೆಯಿಂದ ಕೂಡಿದೆಯೆಂದು ಭಾವಿಸಲು ಸಾಧ್ಯವಿಲ್ಲ. ಅದು ಮೋದಿ ಹೆಸರಿನವರನ್ನು ಅವಮಾನಿಸುವ ಉದ್ದೇಶದಿಂದಲೇ ಕೂಡಿರುವ ಕಾರಣ, ಅವರಿಗೆ ನ್ಯಾಯಾಲಯ ನೀಡಿರುವ ಶಿಕ್ಷೆ ನ್ಯಾಯೋಚಿತವಾಗಿದೆ ಎಂದು
ನಿಸ್ಸಂದಿಗ್ಧವಾಗಿ ಹೇಳಬಹುದು.

ರಾಹುಲ್ ಗಾಂಧಿ ಕೆಲವು ಆರೋಪಿಗಳ ಹೆಸರುಗಳನ್ನು ಉಚ್ಚರಿಸಿ, ಆ ಹೆಸರುಗಳಲ್ಲಿನ ಮೋದಿ ಎಂಬ ಎರಡಕ್ಷರಗಳನ್ನು ನೇರವಾಗಿ ಗಮನದಲ್ಲಿರಿಸಿಕೊಂಡು ಅದನ್ನು ಪ್ರಧಾನಿಯ ಹೆಸರಿಗೂ ಅನ್ವಯಿಸಿದ್ದಾರೆ. ‍ಪ್ರಧಾನಿಯವರನ್ನು ಉದ್ದೇಶಪೂರ್ವಕವಾಗಿ ಅವಹೇಳನ, ನಗೆಪಾಟಲು ಮಾಡುವ ಅದಕ್ಕೂ ಮೀರಿದಂತೆ ಅವಮಾನ ಮಾಡುವುದನ್ನು ಗುರಿಯಾಗಿರಿಸಿಕೊಂಡಿದ್ದಾರೆ.

ಸಿ.ಎಚ್. ಹನುಮಂತರಾಯ, ಹಿರಿಯ ವಕೀಲ, ಹೈಕೋರ್ಟ್‌