ತಮ್ಮ ದೂರಿಗೇ ತಡೆಯಾಜ್ಞೆ ತಂದಿದ್ದ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ

ನವದೆಹಲಿ: ರಾಹುಲ್ ಅವರು ಕೋಲಾರದಲ್ಲಿ ನೀಡಿದ್ದ ಹೇಳಿಕೆ ವಿರುದ್ಧ ಗುಜರಾತಿನ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಅವರು 2019ರಲ್ಲಿ ದೂರು ದಾಖಲಿಸಿದ್ದರು.
ದೂರಿನ ಅನ್ವಯ ಪ್ರಕರಣ ದಾಖಲಾಗಿ, ಸೂರತ್‌ನ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾಗಿತ್ತು.
2021ರಲ್ಲಿ ಪೂರ್ಣೇಶ್ ಮೋದಿ ಅವರು, 'ರಾಹುಲ್ ಅವರ ಹೇಳಿಕೆ ಇರುವ ವಿಡಿಯೊಗಳನ್ನು ನ್ಯಾಯಾಲಯದಲ್ಲಿ ತೋರಿಸಬೇಕು. ಆ ಹೇಳಿಕೆಗಳ ಬಗ್ಗೆ ರಾಹುಲ್ ಸ್ಪಷ್ಟನೆ ನೀಡಬೇಕು' ಎಂದು ಕೋರಿದ್ದರು. ಈ ಕೋರಿಕೆಯನ್ನು ಅಂದಿನ ನ್ಯಾಯಾಧೀಶರು ವಜಾ ಮಾಡಿದ್ದರು. ಅದರ ಬೆನ್ನಲ್ಲೇ ಪೂರ್ಣೇಶ್ ಮೋದಿ ಅವರು ಗುಜರಾತ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. 'ಸಾಕ್ಷ್ಯ ಸಂಗ್ರಹಕ್ಕೆ ಸಮಯಾವಕಾಶ ಬೇಕು. ಇದಕ್ಕಾಗಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಗೆ ತಡೆ ನೀಡಬೇಕು' ಎಂದು ಕೋರಿದ್ದರು. ಅವರ ಕೋರಿಕೆಯನ್ನು ಮಾನ್ಯ ಮಾಡಿದ್ದ ಹೈಕೋರ್ಟ್, ವಿಚಾರಣೆಗೆ ತಡೆ ನೀಡಿತ್ತು.
2021ರಲ್ಲಿ ಸೂರತ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿದ್ದ ನ್ಯಾಯಾಧೀಶರು ಈಚೆಗಷ್ಟೇ ವರ್ಗಾವಣೆಯಾಗಿದ್ದರು. ತಿಂಗಳ ಹಿಂದಷ್ಟೇ ಮತ್ತೆ ಹೈಕೋರ್ಟ್ ಮೊರೆ ಹೋಗಿದ್ದ ಪೂರ್ಣೇಶ್ ಮೋದಿ, 'ಸಾಕ್ಷ್ಯ ದೊರೆತಿದೆ. ವಿಚಾರಣೆ ಆರಂಭಕ್ಕೆ ಅನುಮತಿ ನೀಡಿ. ತಡೆಯಾಜ್ಞೆ ತೆರವು ಮಾಡಿ' ಎಂದು ಕೋರಿದ್ದರು.
ತಡೆಯಾಜ್ಞೆಯನ್ನು ಹೈಕೋರ್ಟ್ ತೆರವು ಮಾಡಿತ್ತು.