ಗಡಿಯಲ್ಲಿ ಭದ್ರತಾ ಲೋಪದ ಕುರಿತು ಪ್ರಧಾನಿ ಮೋದಿ ಉತ್ತರಿಸುವರೇ? - ರಾಹುಲ್ ಗಾಂಧಿ

ಗಡಿಯಲ್ಲಿ ಭದ್ರತಾ ಲೋಪದ ಕುರಿತು ಪ್ರಧಾನಿ ಮೋದಿ ಉತ್ತರಿಸುವರೇ? - ರಾಹುಲ್ ಗಾಂಧಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಪಂಜಾಬ್ ಭೇಟಿ ಸಂದರ್ಭದಲ್ಲಿ ಉಂಟಾದ ಭದ್ರತಾ ಲೋಪದ ವಿಷಯವನ್ನೇ ಬಿಜೆಪಿಯು ಕಾಂಗ್ರೆಸ್ ವಿರುದ್ಧ ಪ್ರಧಾನ ಅಸ್ತ್ರವಾಗಿಸಿದೆ.

ಇದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಭಾರತ-ಚೀನಾ ಗಡಿಯಲ್ಲಿ ಉಂಟಾಗಿರುವ ರಾಷ್ಟ್ರೀಯ ಭದ್ರತಾ ಲೋಪದ ಕುರಿತು ಪ್ರಧಾನಿ ಮೋದಿ ಉತ್ತರಿಸುವರೇ ಎಂದು ಪ್ರಶ್ನಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, 'ನಮ್ಮ ಗಡಿಯಲ್ಲಿ ಭಾರೀ ರಾಷ್ಟ್ರೀಯ ಭದ್ರತಾ ಲೋಪ ಉಂಟಾಗಿದೆ. ಈ ಕುರಿತು ಪ್ರಧಾನಿ ಎಂದಾದರೂ ಪ್ರತಿಕ್ರಿಯಿಸುವರೇ' ಎಂದು ಹೇಳಿದ್ದಾರೆ.

ಪೂರ್ವ ಲಡಾಖ್‌ನ ಪಾಂಗಾಂಗ್ ಸರೋವರದ ಎರಡೂ ಬದಿಗಳಲ್ಲಿ ಚೀನಾ ಸೇತುವೆಯನ್ನು ನಿರ್ಮಿಸುತ್ತಿರುವ ಮಾಹಿತಿಯು ಉಪಗ್ರಹ ಚಿತ್ರದಲ್ಲಿ ಸೆರೆಯಾಗಿದೆ ಎಂದು ಮೂಲಗಳು ತಿಳಿಸಿದ್ದವು.

ಈ ಕುರಿತು ಗುರುವಾರ ಸ್ಪಷ್ಟನೆ ನೀಡಿರುವ ಸರ್ಕಾರವು, ಪಾಂಗಾಂಗ್ ಸರೋವರದ ಚೀನಾ ಬದಿಯಲ್ಲಿ ಸೇತುವೆ ನಿರ್ಮಿಸಲಾಗುತ್ತಿದೆ. ಈ ಕುರಿತು ಸರ್ಕಾರವು ಪರಿಸ್ಥಿತಿಯನ್ನು ಅವಲೋಕಿಸುತ್ತಿದೆ ಎಂದು ಹೇಳಿತ್ತು.

ರಾಷ್ಟ್ರೀಯ ಭದ್ರತಾ ಹಿತಾಸಕ್ತಿಯನ್ನು ಕಾಪಾಡಲು ಬೇಕಾದ ಎಲ್ಲ ಅಗತ್ಯ ಕ್ರಮಗಳನ್ನು ಸರ್ಕಾರವು ಕೈಗೊಳ್ಳುತ್ತಿದೆ. ಇದರ ಭಾಗವಾಗಿ, ಸರ್ಕಾರವು ಕಳೆದ ಏಳು ವರ್ಷಗಳ ಮೂಲ ಸೌಕರ್ಯಗಳ ಅಭಿವೃದ್ಧಿಗಾಗಿ ಬಜೆಟ್ ಗಣನೀಯವಾಗಿ ಹೆಚ್ಚಿಸಿದೆ. ಹಿಂದೆಂದಿಗಿಂತಲೂ ಹೆಚ್ಚಿನ ರಸ್ತೆ ಹಾಗೂ ಸೇತುವೆ ನಿರ್ಮಾಣವನ್ನು ಪೂರ್ಣಗೊಳಿಸಲಾಗಿದೆ. ಇವೆಲ್ಲವೂ ಸ್ಥಳೀಯ ಜನರಿಗೆ ಸಂಪರ್ಕದ ಜೊತೆಗೆ ಸೇನೆಗೆ ಹೆಚ್ಚಿನ ಬಲವನ್ನು ಒದಗಿಸಲಿದೆ ಎಂದು ವಿದೇಶಾಂಗ ವ್ಯವಹಾರಗಳ ವಕ್ತಾರರು ತಿಳಿಸಿದ್ದಾರೆ.

ಸುಮಾರು 60 ವರ್ಷಗಳಿಂದ ಚೀನಾ ಅಕ್ರಮವಾಗಿ ವಶದಲ್ಲಿರಿಸಿರುವ ಈ ಪ್ರದೇಶದಲ್ಲಿ ಸೇತುವೆ ನಿರ್ಮಿಸಲಾಗುತ್ತಿದೆ. ಇದು ವಾಸ್ತವ ಗಡಿ ನಿಯಂತ್ರಣ ರೇಖೆಯ (ಎಲ್‌ಎಸಿ) ಬಳಿ ಚೀನಾದ ತ್ವರಿತ ಕಾರ್ಯಾಚರಣೆಗೆ ನೆರವಾಗಲಿದೆ ಎಂದು ಸೇನಾ ತಜ್ಞರು ತಿಳಿಸಿದ್ದಾರೆ.