ಕನ್ನಡದಲ್ಲೇ ಇಂಜಿನಿಯರಿಂಗ್ ಬೋಧಿಸಲು `VTU' ಸಿದ್ಧತೆ!

ನವದೆಹಲಿ : ಇದುವರೆಗೆ ಇಂಜಿನಿಯರಿಂಗ್ ಅಂದ್ರೆ ಸಾಕು , ಇಂಗ್ಲೀಷ್ ಸೇರಿದಂತೆ ಇತರ ಕೆಲ ಭಾಷೆಗಳಲ್ಲಿ ಮಾತ್ರವೇ ಕಲಿಕೆಗೆ ಅವಕಾಶ ಎನ್ನುವಂತೆ ಆಗಿತ್ತು . ಆದ್ರೇ ಇದೀಗ ಕನ್ನಡದಲ್ಲಿಯೂ ನೀವು ಇಂಜಿನಿಯರಿಂಗ್ ಕೋರ್ಸ್ , ಪರೀಕ್ಷೆ ಬರೆಯಬಹುದಾಗಿದೆ . ಈ ಮೂಲಕ ಕನ್ನಡ ವಿದ್ಯಾರ್ಥಿಗಳಿಗೆ ಸಿಹಿಸುದ್ದಿಯನ್ನು ಕೇಂದ್ರ ಸರ್ಕಾರ ನೀಡಿದೆ .
ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ(AICTE) 2020-21ನೇ ಶೈಕ್ಷಣಿಕ ಸಾಲಿನಿಂದ ಕನ್ನಡ ಸೇರಿದಂತೆ ಏಳು ಪ್ರಾದೇಶಿಕ ಭಾಷೆಗಳಲ್ಲೂ ಇಂಜಿನಿಯರಿಂಗ್ ಶಿಕ್ಷಣ ನೀಡಲು ಸೂಚನೆ ನೀಡಿದೆ. ಎಐಸಿಟಿಇ ಸೂಚನೆ ನೀಡುತ್ತಿದ್ದಂತೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಕನ್ನಡದಲ್ಲಿ ಇಂಜಿನಿಯರಿಂಗ್ ಮಾಡಲು ಅವಕಾಶ ಕಲ್ಪಿಸುತ್ತಿದೆ.ವಿಟಿಯು ಕನ್ನಡದಲ್ಲಿ ಇಂಜಿನಿಯರಿಂಗ್ ಕೋರ್ಸ್ ಬೋಧನೆ ಮಾಡುವುದಕ್ಕಾಗಿ ಪಠ್ಯಕ್ರಮ ಸಿದ್ಧಪಡಿಸಿಕೊಳ್ಳುತ್ತಿದೆ.
ಎಐಸಿಟಿಇ ತೀರ್ಮಾನದಂತೆ 2021-22ನೇ ಸಾಲಿನಿಂದ ವಿಟಿಯು ತನ್ನ ಅಧೀನದ ಅರ್ಹ ಎಂಜಿನಿಯರಿಂಗ್ ಸಂಸ್ಥೆಗಳಲ್ಲಿ ಕನ್ನಡದಲ್ಲಿ ಪದವಿ ಶಿಕ್ಷಣ ಆರಂಭಿಸಲು ನಿರ್ಧರಿಸಿದೆ.
ವಿಟಿಯು ಇಂಜಿನಿಯರಿಂಗ್ ಶಿಕ್ಷಣ ನೀಡಲು ಬೇಕಾದ ಪಠ್ಯಪುಸ್ತಕ ರಚಿಸಬೇಕಾಗಿದೆ. ಆಂಗ್ಲ ಭಾಷೆಯಲ್ಲಿರುವ ಪಠ್ಯಪುಸ್ತಕವನ್ನು ಕನ್ನಡಕ್ಕೆ ಅನುವಾದ ಮಾಡಬೇಕಿದೆ. ಇದಕ್ಕಾಗಿ ವಿಟಿಯು ವಿಷಯ ತಜ್ಞರ ಸಮಿತಿ ರಚಿಸಿದ್ದು, ಸಮಿತಿಯು ಅನುವಾದ ಕಾರ್ಯವನ್ನು ಕೈಗೆತ್ತಿಕೊಂಡಿದೆ ಎನ್ನಲಾಗಿದೆ.
ಇನ್ನೂ ಕನ್ನಡ ಭಾಷೆಯಲ್ಲಿ ಇಂಜಿನಿಯರಿಂಗ್ ಕೋರ್ಸ್ ಮಾಡೋದಕ್ಕೆ ಅಷ್ಟೇ ಅಲ್ಲದೇ, ಹಿಂದಿ, ತಮಿಳು, ಮಲಯಾಳಂ, ಗುಜರಾತಿ, ಬಂಗಾಳಿ ಸೇರಿದಂತೆ 7 ಭಾರತೀಯ ಪ್ರಾದೇಶಿಕ ಭಾಷೆಗಳಲ್ಲಿ ಕೋರ್ಸ್ ವ್ಯಾಸಂಗ ಮಾಡಲು ಅವಕಾಶ ನೀಡಿದೆ. ಹೀಗಾಗಿ ಇಂಜಿನಿಯರಿಂಗ್ ವ್ಯಾಸಂಗ ಮಾಡೋದಕ್ಕೆ ಬಯಸುವಂತ ಗ್ರಾಮೀಣ ವಿದ್ಯಾರ್ಥಿಗಳಿಗೆ ಇದರಿಂದ ಅನುಕೂಲ ಆಗಲಿದೆ.