ಭೀಕರ ಅಪಘಾತದಲ್ಲಿ ಸವದತ್ತಿ ಯಲ್ಲಮ್ಮದೇವಿಯ ದರ್ಶನಕ್ಕೆ ತೆರಳುತ್ತಿದ್ದ 6 ಜನ ಭಕ್ತರ ದುರ್ಮರಣ
ಬೆಳಗಾವಿ: ಸವದತ್ತಿ ಯಲ್ಲಮ್ಮ ದೇವಿಯ ದರ್ಶನಕ್ಕೆ ಹೋಗುವಾಗ ಚಾಲಕನ ಅಜಾಗ್ರತೆಯಿಂದ, ಬುಲೋರೊ ವಾಹನವೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ, ವಾಹನದಲ್ಲಿ ಸಂಚರಿಸುತ್ತಿದ್ದ ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಚುಂಚನೂರು ಗ್ರಾಮದ ಬಳಿ ಈ ಭೀಕರ ಅಪಘಾತ ಸಂಭವಿಸಿದ್ದು, ಈ ದುರಂತ ಘಟನೆಯಲ್ಲಿ ಇಬ್ಬರು ಬಾಲಕಿಯರು ಸೇರಿದಂತೆ ಒಟ್ಟು ಆರು ಜನ ಮೃತಪಟ್ಟಿದ್ದಾರೆ.
ಅಪಘಾತದಲ್ಲಿ ಮೃತರಾದವರಿಗೆ ಸರ್ಕಾರ 5 ಲಕ್ಷ ಪರಿಹಾರ ಘೋಷಿಸಿದೆ.
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಚುಂಚನೂರು ಸಮೀಪದ, ವಿಠಲ್ ರುಕ್ಮಿಣಿ ದೇವಸ್ಥಾನದ ಆಲದ ಮರಕ್ಕೆ, ಬುಲೋರೊ ವಾಹನ ಡಿಕ್ಕಿ ಹೊಡೆದು ಈ ಭೀಕರ ಅಪಘಾತ ಸಂಭವಿಸಿದೆ ಎಂದು ವರದಿ ಆಗಿದೆ.
ವಾಸ್ತವವಾಗಿ, ಪಾದಯಾತ್ರೆ ಮೂಲಕ ಹೊರಟಿದ್ದ ಭಕ್ತರನ್ನು ಬುಲೋರೋ ವಾಹನ ಚಾಲಕನೇ ಕರೆದು ವಾಹನದಲ್ಲಿ ಕೂರಿಸಿದ್ದಾನೆ. ಬುಲೋರೋ ವಾಹನದಲ್ಲಿ ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಹೊರಟಿದ್ದ ವೇಳೆ ಸಂಭವಿಸಿದ ಈ ಅಪಘಾತದಲ್ಲಿ, ಐದು ಜನ ಸ್ಥಳದಲ್ಲೇ ಮೃತಪಟ್ಟಿದ್ದರೆ, ಒಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಮೃತ ದುರ್ದೈವಿಗಳನ್ನು ರಾಮದುರ್ಗ ತಾಲೂಕಿನ ಹುಲಕುಂದ ಗ್ರಾಮಸ್ಥರು ಎಂದು ಗುರುತಿಸಲಾಗಿದೆ. ಹಣಮವ್ವ ಮೇಗಾಡಿ (25), ದೀಪಾ (31), ಸವಿತಾ (12), ಸುಪ್ರೀತಾ (11), ಮಾರುತಿ (43), ಇಂದ್ರವ್ವಾ (24) ಎಂದು ತಿಳಿದು ಬಂದಿದೆ.
ಅಪಘಾತದಲ್ಲಿ ಹಲವಾರು ಜನರಿಗೆ ಗಾಯಗಳಾಗಿದ್ದು ಅವರನ್ನು ಗೋಕಾಕ್ ಹಾಗೂ ಇನ್ನಿತರ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಕಟಕೊಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.