ಅಫ್ಗಾನಿಸ್ತಾನಕ್ಕೆ 3.1 ಕೋಟಿ ಡಾಲರ್ ಚೀನಾ ನೆರವು ಘೋಷಣೆ

ಬೀಜಿಂಗ್: ಅಫ್ಗಾನಿಸ್ತಾನಕ್ಕೆ 3.1 ಕೋಟಿ ಡಾಲರ್ (ಸುಮಾರು ₹220 ಕೋಟಿ) ನೆರವು ನೀಡುವುದಾಗಿ ಚೀನಾ ಘೋಷಿಸಿದೆ.
ಅಫ್ಗಾನಿಸ್ತಾನದ ಹಂಗಾಮಿ ಸರ್ಕಾರಕ್ಕೆ ಈ ಮೂಲಕ ಪರೋಕ್ಷ ಮಾನ್ಯತೆ ನೀಡಿದಂತಾಗಿದೆ. ಆ ದೇಶದಲ್ಲಿ ಸುವ್ಯವಸ್ಥೆ ಮರುಸ್ಥಾಪನೆ ಮತ್ತು ಅರಾಜಕತೆ ಕೊನೆಗೊಳಿಸಲು ಇದು ಅನಿವಾರ್ಯ ಎಂದು ಚೀನಾ ಹೇಳಿದೆ.
ಅಫ್ಗಾನಿಸ್ತಾನದ ನೆರೆಯ ದೇಶಗಳ ವಿದೇಶಾಂಗ ಸಚಿವರ ಸಭೆಯಲ್ಲಿ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಭಾಗವಹಿಸಿ, ನೆರವು ಪ್ರಕಟಿಸಿದರು. 3.1 ಕೋಟಿ ಡಾಲರ್ ಮೊತ್ತದ ಧಾನ್ಯಗಳು, ಔಷಧ, ಲಸಿಕೆ ಇತ್ಯಾದಿ ಒದಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಪಾಕಿಸ್ತಾನವು ಈ ಸಭೆಯನ್ನು ಸಂಘಟಿಸಿತ್ತು. ಇರಾನ್, ತಾಜಿಕಿಸ್ತಾನ, ತುರ್ಕಮೆನಿಸ್ತಾನ ಮತ್ತು ಉಜ್ಬೇಕಿಸ್ತಾನದ ವಿದೇಶಾಂಗ ಸಚಿವರು ಸಭೆಯಲ್ಲಿ ಇದ್ದರು. ರಷ್ಯಾವು ಈ ಸಭೆಯಲ್ಲಿ ಭಾಗವಹಿಸಿಲ್ಲ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.