ತಿರುಪತಿ ಬಾಲಜಿ ಪ್ರವಾಸ ಪ್ಯಾಕೇಜ್, ದರ, ಟಿಕೆಟ್ ಬುಕ್ಕಿಂಗ್ ಮಾಹಿತಿ ಇಲ್ಲಿದೆ
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿರುವ ತಿರುಪತಿಯು ಹಿಂದೂ ಧರ್ಮದವರಿಗೆ ಮಹತ್ವದ ದೇವಾಲಯವಿರುವ ಪಟ್ಟಣವಾಗಿದೆ. ವಿಷ್ಣುವಿಗೆ ಸಮರ್ಪಿತವಾಗಿರುವ ಶ್ರೀ ವೆಂಕಟೇಶ್ವರ ದೇವಸ್ಥಾನಕ್ಕೆ ಪ್ರತಿ ವರ್ಷ ಲಕ್ಷಾಂತರ ಭಕ್ತರು ತಿರುಪತಿ ದರ್ಶನಕ್ಕಾಗಿ ಭೇಟಿ ನೀಡುತ್ತಾರೆ.
ತಿರುಪತಿಯು ಅತೀ ಹೆಚ್ಚು ಭಕ್ತರು ಭೇಟಿ ನೀಡುವ ದೇವಾಲಯವಾಗಿದೆ. ಹಾಗೆಯೇ ಈ ಪಟ್ಟಣಕ್ಕೂ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಬರುತ್ತಾರೆ. ಪಟ್ಟಣ ಮತ್ತು ಅದರ ಸುತ್ತಮುತ್ತಲಿನ ಹಲವಾರು ದೇವಾಲಯಗಳು ಪ್ರಸಿದ್ಧವಾಗಿದೆ. ತಿರುಪತಿಯಿಂದ 5 ಕಿಮೀ ದೂರದಲ್ಲಿರುವ ಅತ್ಯಂತ ಹಳೆಯ ಪ್ರವಾಸಿ ಸ್ಥಳಗಳಲ್ಲಿ ತಿರುಚಾನೂರ್ ಕೂಡಾ ಒಂದಾಗಿದೆ. ಇದು ವೆಂಕಟೇಶ್ವರನ ಪ್ರೀತಿಯ ಪತ್ನಿ ಶ್ರೀ ಪದ್ಮಾವತಿ ದೇವಿಯ ವಾಸಸ್ಥಾನ ಎಂದು ನಂಬಲಾಗಿದೆ.
ತಿರುಚಾನೂರ್ ಪಟ್ಟಣವನ್ನು "ಅಲರ್ಮೆಲ್ಮಂಗಪುರಂ" ಅಥವಾ ಅಲಿಮೇಲುಮಂಗಪುರಂ ಎಂದೂ ಕರೆಯಲಾಗುತ್ತದೆ. ದೇವಾಲಯದ ದಂತಕಥೆಯ ಪ್ರಕಾರ, ಮಹಾಲಕ್ಷ್ಮಿ ದೇವಿಯು ಚಿನ್ನದ ಕಮಲದ ಮೇಲೆ ಪದ್ಮಾವತಿ ದೇವಿಯಾಗಿ ಕಾಣಿಸಿಕೊಂಡಿದ್ದಾರೆ. ಅದಕ್ಕಾಗಿಯೇ ಈ ಸ್ಥಳವು "ಅಲರ್ಮೇಲ್ಮಂಗಪುರಂ" ಎಂದು ಪ್ರಸಿದ್ಧವಾಗಿದೆ. ಇಂತಹ ಪವಿತ್ರ ಹಿನ್ನೆಲೆ ಹೊಂದಿರುವ ದೇವಾಲಯಕ್ಕೆ ನೀವು ಭೇಟಿ ನೀಡುವ ಅವಕಾಶವನ್ನು ಐಆರ್‌ಸಿಟಿಸಿ ನೀಡಿದೆ. ಅದುವೇ ಈ ಪ್ರವಾಸ ಪ್ಯಾಕೇಜ್ ಮೂಲಕವಾಗಿದೆ.
ತಿರುಪತಿ ಬಾಲಜಿ ಪ್ರವಾಸ ಪ್ಯಾಕೇಜ್ ಬಗ್ಗೆ ಮಾಹಿತಿ
ತಿರುಪತಿ ಬಾಲಕಿ ದರ್ಶನ ಎರಡು ರಾತ್ರಿ/ ಮೂರು ದಿನಗಳ ಪ್ಯಾಕೇಜ್ ಆಗಿದೆ. ತಿರುಮಲ, ಕಲಹಾಸ್ತಿ ದೇವಾಲಯ, ಪದ್ಮಾವತಿ ದೇವಾಲಯ ಪ್ಯಾಕೇಜ್‌ನ ಸ್ಥಳವಾಗಿದೆ. ತ್ರಿವಾಡ್ರಮ್ ಸೆಂಟ್ರಲ್, ಕೊಲ್ಲಂ, ಕೊಟ್ಟಯಂ, ಎರ್ನಾಕುಲಂ ಟೌನ್, ಆಲುವ, ತ್ರಿಶೂರ್, ಶೋರನೂರ್, ಒಟ್ಟಪ್ಪಲಂ, ಪಾಲಕ್ಕಾಡ್, ಕೋಯಂಬುತ್ತೂರ್, ಇರೋಡ್ ಬೋರ್ಡಿಂಗ್ ಸ್ಟೇಷನ್‌ಗಳಾಗಿದೆ. 31.03.2023ರಂದು ಪ್ರವಾಸ ಆರಂಭವಾಗಲಿದೆ. 69 ಆಸನಗಳ ಸ್ಪೀಪರ್ ಕ್ಲಾಸ್ ರೈಲು ಇದಾಗಿದೆ. ಪ್ರತಿ ವ್ಯಕ್ತಿಗೆ 5,920 ರೂಪಾಯಿಯಿಂದ 8,770 ರೂಪಾಯಿವರೆಗೆ ಟಿಕೆಟ್ ದರವಿದೆ. ವಿಮಾ ಸುರಕ್ಷತೆಯೂ ಸೇರಿರುತ್ತದೆ.
ಪ್ಯಾಕೇಜ್ ಹೆಸರು: ತಿರುಪತಿ ಬಾಲಜಿ ದರ್ಶನ
ಒಟ್ಟು ದಿನಗಳು: ಎರಡು ರಾತ್ರಿ ಮೂರು ದಿನ
ಸ್ಥಳ: ತಿರುಮಲ, ಕಲಹಾಸ್ತಿ ದೇವಾಲಯ, ಪದ್ಮಾವತಿ ದೇವಾಲಯ
ಪ್ರವಾಸ: ರೈಲು ಸಂಖ್ಯೆ 17229 (ಆರಂಭ) ಮತ್ತು ರೈಲು ಸಂಖ್ಯೆ 17230 (ವಾಪಾಸ್)
ಸಿಂಗಲ್ : 8,770 ರೂಪಾಯಿ
ಡಬಲ್ : 7,100 ರೂಪಾಯಿ
ಟ್ರಿಪಲ್: 7,000 ರೂಪಾಯಿ
ಶ್ರೀಮಂತಿಕೆಗೆ ಹೆಸರಾದ ದೇವಾಲಯ
ತಿರುಮಲ ಬೆಟ್ಟದಲ್ಲಿನ ವೆಂಕಟೇಶ್ವರ ಸ್ವಾಮಿ ದೇವಾಲಯವು ವಿಶ್ವದ ಶ್ರೀಮಂತ ಹಿಂದೂ ದೇವಾಲಯಗಳಲ್ಲಿ ಒಂದಾಗಿದೆ. ಶ್ರೀಮಂತಿಕೆಗೆ ಹಾಗೂ ಭಾರೀ ಹುಂಡಿ ಹಣ ಸಂಗ್ರಹದ ಮೂಲಕವೇ ಹೆಸರುವಾಸಿಯಾದ ಈ ದೇವಾಲಯದಲ್ಲಿ 2022ರಲ್ಲಿ ಹುಂಡಿ ಸಂಗ್ರಹವು ಭಾರೀ ಪ್ರಮಾಣದಲ್ಲಿ ಆಗಿದೆ. ವಿಶ್ವದ ಅತೀ ಶ್ರೀಮಂತ ದೇವಾಲಯಗಳಲ್ಲಿ ಒಂದಾದ ತಿರುಮಲ ತಿರುಪತಿ ದೇವಾಲಯದಲ್ಲಿ 2022ರಲ್ಲಿ 1450 ಕೋಟಿ ರೂಪಾಯಿ ಹುಂಡಿಗೆ ಭಕ್ತರು ಹಾಕಿದ ಕಾಣಿಕೆಯ ಮೂಲಕ ಸಂಗ್ರಹವಾಗಿದೆ. 2022ರಲ್ಲಿ ತಿರುಮಲ ದೇವಾಲಯಕ್ಕೆ ಬರೋಬ್ಬರಿ 2.37 ಕೋಟಿ ಭಕ್ತರು ಆಗಮಿಸಿದ್ದಾರೆ.
2021ರಲ್ಲಿ ದೇವಾಲಯಕ್ಕೆ ಹುಂಡಿಗೆ ಭಕ್ತರು ಹಾಕಿದ ಹಣದ ಮೂಲಕ ಸುಮಾರು 853.41 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿತ್ತು. ಹಾಗೆಯೇ ಸುಮಾರು 1.04 ಕೋಟಿ ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದರು. ಆದರೆ ಈ ವರ್ಷ ಭಕ್ತರ ಸಂಖ್ಯೆಯು ದುಪ್ಪಟ್ಟಾಗಿದೆ. ಹುಂಡಿ ಸಂಗ್ರಹವೂ ಕೂಡಾ ಅಧಿಕವಾಗಿದೆ.