ಓದಿದ್ದು 8ನೇ ತರಗತಿ ಆದ್ರೆ ವೈದ್ಯೆಯನ್ನೇ ಪಟಾಯಿಸಿದ ಈತನ ಹಿಸ್ಟರಿ ನೋಡಿ ದಂಗಾದ ಪೊಲೀಸರು!

ನವದೆಹಲಿ: ಓದಿದ್ದು ಕೇವಲ 8ನೇ ತರಗತಿ. ಆದರೆ, ಐಪಿಎಸ್ ಅಧಿಕಾರಿ ಎಂಬ ವೇಷ ಧರಿಸಿಕೊಂಡು ಸುಮಾರು ಒಂದು ಡಜನ್ ಮಹಿಳೆಯರಿಗೆ ವಂಚನೆ ಮಾಡಿ, ಲಕ್ಷಾಂತರ ರೂಪಾಯಿ ಪಂಗನಾಮ ಹಾಕಿ ನಕಲಿ ಅಧಿಕಾರಿಯನ್ನು ದೆಹಲಿ ಪೊಲೀಸರು ಖೆಡ್ಡಾಗೆ ಕೆಡವಿದ್ದಾರೆ.
ವಂಚಕನನ್ನು ವಿಕಾಸ್ ಗೌತಮ್ ಎಂದು ಗುರುತಿಸಲಾಗಿದೆ. ವಿಕಾಸ್ ಯಾದವ್ ಹೆಸರಿನಲ್ಲಿ ಟ್ವಿಟರ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ನಕಲಿ ಪ್ರೊಫೈಲ್ ಸೃಷ್ಟಿಸಿ ಯುವತಿಯರಿಗೆ ಬಲೆ ಬೀಸಿ, ವಂಚನೆ ಮಾಡುವುದೇ ಈತನ ಕೆಲಸವಾಗಿತ್ತು. ಅಲ್ಲದೆ, ತಾನು ಸರ್ಕಾರಿ ಅಧಿಕಾರಿ ಎಂಬುದನ್ನು ನಂಬಿಸಲು ಕೆಂಪುಗೂಟದ ಸರ್ಕಾರಿ ಕಾರಿನ ಮುಂದೆ ನಿಂತು ಕ್ಯಾಮೆರಾಗೆ ಪೋಸ್ ನೀಡಿರುವ ಫೋಟೋವನ್ನು ಪ್ರೊಫೈಲ್ ಫೋಟೋವಾಗಿ ಬಳಸಿದ್ದ.
ದೆಹಲಿಯ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ವೈದ್ಯಗೆ ಈತ ವಂಚಿಸಿದ್ದ. ಇಬ್ಬರು ಆನ್ಲೈನ್ನಲ್ಲಿ ಚಾಟಿಂಗ್ ಆರಂಭಿಸಿದ್ದರು. ವೈದ್ಯಯ ಸಂಪೂರ್ಣ ನಂಬಿಕೆ ಗಳಿಸಿದ ಆರೋಪಿ, ಒಂದು ದಿನ ವೈದ್ಯಯ ಬಳಿ ಬ್ಯಾಂಕ್ ಮಾಹಿತಿ ಪಡೆದು 25 ಸಾವಿರ ರೂಪಾಯಿ ಹಣ ತೆಗೆದುಕೊಂಡಿದ್ದ. ಯಾವಾಗ ಆತ ನಕಲಿ ಅಧಿಕಾರಿ ಹಾಗೂ ವಂಚಕ ಎಂಬುದು ಗೊತ್ತಾಯಿತು ಆಕೆ ಪೊಲೀಸ್ ಠಾಣೆಯ ಮೆಟ್ಟಿಲೇರಲು ನಿರ್ಧರಿಸಿದಳು. ಆದರೆ, ಆತ ನನಗೆ ರಾಜಕಾರಣಿಗಳ ಸಂಪರ್ಕವಿದೆ ಎಂದು ಹೇಳಿ ವೈದ್ಯೆಗೆ ಬೆದರಿಕೆ ಹಾಕಿದ್ದ.
ಯಾವುದೇ ಬೆದರಿಕೆ ಜಗ್ಗದೆ ವೈದ್ಯ ದೂರು ನೀಡಿದ್ದಳು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಬಳಸಿ, ಆರೋಪಿಯನ್ನು ಬಂಧಿಸಿದರು. ವಿಚಾರಣೆ ವೇಳೆ ಆತ ಐಪಿಎಸ್ ಅಧಿಕಾರಿ ವೇಷದಲ್ಲಿ ಸುಮಾರು ಒಂದು ಡಜನ್ ಮಹಿಳೆಯರಿಗೆ ವಂಚಿಸಿದ್ದು, ಲಕ್ಷಾಂತರ ರೂಪಾಯಿ ಹಣ ಸುಲಿಗೆ ಮಾಡಿದ್ದಾನೆ ಎಂದು ತಿಳಿದುಬಂದಿದೆ ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಅಂದಹಾಗೆ ಆರೋಪಿ ವಿಕಾಸ್ ಗೌತಮ್ ಮಧ್ಯ ಪ್ರದೇಶದ ಗ್ವಾಲಿಯರ್ ನಿವಾಸಿ. 8ನೇ ತರಗತಿ ಪಾಸ್ ಮಾಡಿದ ಬಳಿಕ ಐಟಿಐನಲ್ಲಿ ವೆಲ್ಡಿಂಗ್ ಕೋರ್ಸ್ ಮಾಡಿದ್ದ ಎಂದು ದೆಹಲಿ ಪೊಲೀಸ್ ಅಧಿಕಾರಿ ಹರೀಂದರ್ ಸಿಂಗ್ ತಿಳಿಸಿದ್ದಾರೆ.
ವಿಕಾಸ್ ಗೌತಮ್, ರಾಷ್ಟ್ರ ರಾಜಧಾನಿಯ ನಾಗರಿಕ ಸೇವಾ ಪರೀಕ್ಷಾ ಕೋಚಿಂಗ್ ಕೇಂದ್ರಗಳ ಪ್ರಮುಖ ಕೇಂದ್ರವಾದ ಉತ್ತರ ದೆಹಲಿಯ ಮುಖರ್ಜಿ ನಗರದ ರೆಸ್ಟೋರೆಂಟ್‌ನಲ್ಲಿಯೂ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ತಾನು ಕೆಲಸ ಮಾಡುತ್ತಿದ್ದ ಪ್ರದೇಶದಲ್ಲಿ ನಾಗರಿಕ ಸೇವೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದ್ದು, ಬಹುಶಃ ಅವರನ್ನು ನೋಡಿ ಪ್ರಭಾವಗೊಂಡು ಅಲ್ಲಿಂದ ಐಪಿಎಸ್ ಅಧಿಕಾರಿಯಂತೆ ನಟಿಸುವ ಆಲೋಚನೆ ಮಾಡಿದನು ಎಂದು ತಿಳಿದುಬಂದಿದೆ.