ಆಸ್ಟ್ರೇಲಿಯಾಗೆ ಮತ್ತೊಂದು ಅಗ್ನಿಪರೀಕ್ಷೆ: ದೆಹಲಿಯಲ್ಲಿ 36 ವರ್ಷಗಳಿಂದ ಟೆಸ್ಟ್ ಸೋತಿಲ್ಲ ಟೀಂ ಇಂಡಿಯಾ

ಆಸ್ಟ್ರೇಲಿಯಾಗೆ ಮತ್ತೊಂದು ಅಗ್ನಿಪರೀಕ್ಷೆ: ದೆಹಲಿಯಲ್ಲಿ 36 ವರ್ಷಗಳಿಂದ ಟೆಸ್ಟ್ ಸೋತಿಲ್ಲ ಟೀಂ ಇಂಡಿಯಾ

ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಆರಂಭಿಕ ಪಂದ್ಯದಲ್ಲಿ ಸೋತ ಆಸ್ಟ್ರೇಲಿಯಾ ತಂಡಕ್ಕೆ ಮತ್ತೊಂದು ದೊಡ್ಡ ಸವಾಲು ಎದುರಾಗಿದೆ. ಎರಡನೇ ಟೆಸ್ಟ್ ನಡೆಯುವ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣ ಮೊದಲ ದಿನದಿಂದಲೇ ಸ್ಪಿನ್ನರ್ ಗಳಿಗೆ ನೆರವು ನೀಡುವಂತಿದ್ದು, ಆಸ್ಟ್ರೇಲಿಯಾದ ನಿದ್ದೆಗೆಡಿಸಿದೆ.

ನಾಗ್ಪುರದಲ್ಲಿ ನಡೆದ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಮತ್ತು 132 ರನ್‌ಗಳಿಂದ ಸೋಲುವ ಮೂಲಕ ಆಸ್ಟ್ರೇಲಿಯಾ ಮುಖಭಂಗ ಅನುಭವಿಸಿದೆ. 5 ದಿನಗಳ ಬೆಂಗಳೂರಿನ ಆಲೂರಿನಲ್ಲಿ ಸ್ಪಿನ್ ವಿರುದ್ಧ ಆಡಲು ಆಸ್ಟ್ರೇಲಿಯಾ ಆಟಗಾರರು ವಿಶೇಷವಾದ ಅಭ್ಯಾಸ ಮಾಡಿದ್ದರು. ನಾಗ್ಪುರ ಪಿಚ್‌ ಬ್ಯಾಟಿಂಗ್ ಮಾಡಲು ತೀರಾ ಕಷ್ಟವಾದ ಪಿಚ್ ಆಗಿರಲಿಲ್ಲ ಆದರೆ ನಾವು ಉತ್ತಮ ಬ್ಯಾಟಿಂಗ್ ಮಾಡುವಲ್ಲಿ ಸೋತೆವು ಎಂದು ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮ್ಮಿನ್ಸ್ ಕೂಡ ಒಪ್ಪಿಕೊಂಡಿದ್ದಾರೆ.

ಮೊದಲನೇ ಟೆಸ್ಟ್ ಪಂದ್ಯ ಮೂರು ದಿನಗಳಲ್ಲೇ ಮುಗಿದಿರುವುದು ಎರಡನೇ ಟೆಸ್ಟ್ ಪಂದ್ಯಕ್ಕೆ ಸಿದ್ಧತೆ ಮಾಡಿಕೊಳ್ಳಲು ಎರಡೂ ತಂಡಗಳಿಗೆ ಎರಡು ದಿನ ಹೆಚ್ಚಿನ ಕಾಲಾವಕಾಶ ಸಿಕ್ಕಂತಾಗಿದೆ. ನಾಗ್ಪುರದಂತಹ ಪಿಚ್‌ನಲ್ಲೇ ಆಡಲು ಪರದಾಡಿದ ಆಸ್ಟ್ರೇಲಿಯಾ ತಂಡಕ್ಕೆ ದೆಹಲಿಯ ಪಿಚ್ ವರದಿ ನುಂಗಲಾರದ ತುತ್ತಾಗಿದೆ.

ಇಲ್ಲಿ ಮೊದಲನೇ ದಿನದಿಂದಲೇ ಸ್ಪಿನ್ನರ್ ಗಳಿಗೆ ಹೆಚ್ಚಿನ ನೆರವು ಸಿಗುತ್ತದೆ. ಮೊದಲ ಎರಡು ದಿನ ಬ್ಯಾಟಿಂಗ್‌ ಮಾಡಲು ಕೂಡ ಉತ್ತಮವಾಗಿರುತ್ತದೆ. ಆದರೆ ಮೂರನೇ ದಿನದ ನಂತರ ಇಲ್ಲಿ ಬ್ಯಾಟಿಂಗ್ ಮಾಡುವುದು ಸುಲಭವಲ್ಲ.


ಪಿಚ್ ವರದಿ ಹೇಳುವುದೇನು?

ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಸ್ಪಿನ್ನರ್‌ಗಳಿಗೆ ನೆರವು ನೀಡುತ್ತದೆ. ಆರಂಭದಲ್ಲಿ ಬ್ಯಾಟಿಂಗ್ ಮಾಡಲು ಕೂಡ ಸುಲಭವಾಗಿರುತ್ತದೆ. ಆರಂಭದಲ್ಲಿ ಬ್ಯಾಟರ್ ಗಳು ಸಂಯಮದಿಂದ ಬ್ಯಾಟಿಂಗ್ ಮಾಡಿದರೆ ನಂತರ ರನ್ ಗಳಿಸಬಹುದಾಗಿದೆ.

ಮೊದಲ ಇನ್ನಿಂಗ್ಸ್ ಸರಾಸರಿ ಮೊತ್ತ 342.4 ಆಗಿದೆ. ಆದರೆ 4ನೇ ಇನ್ನಿಂಗ್ಸ್‌ನಲ್ಲಿ ಸರಾಸರಿ ಮೊತ್ತ 165 ಆಗಿದ್ದು, ಕೊನೆಯ ದಿನಗಳಲ್ಲಿ ಇಲ್ಲಿ ಬ್ಯಾಟಿಂಗ್ ಮಾಡುವುದು ಎಷ್ಟು ಕಷ್ಟ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಅಶ್ವಿನ್ ಮತ್ತು ಜಡೇಜಾ ಮೊದಲನೇ ಟೆಸ್ಟ್‌ನಲ್ಲೇ ಆಸ್ಟ್ರೇಲಿಯಾ ಬ್ಯಾಟರ್ ಗಳನ್ನು ಕಾಡಿದ್ದಾರೆ, 2ನೇ ಟೆಸ್ಟ್‌ನಲ್ಲಿ ಅವರು ಮತ್ತಷ್ಟು ಮಾರಕವಾಗುವ

36 ವರ್ಷಗಳಿಂದ ಭಾರತ ತಂಡದ ಪ್ರಾಬಲ್ಯ

ಭಾರತ ತಂಡಕ್ಕೆ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣ ಭದ್ರಕೋಟೆಯಂತಾಗಿದೆ. ಕಳೆದ 36 ವರ್ಷಗಳಿಂದ ಭಾರತ ಇಲ್ಲಿ ಟೆಸ್ಟ್ ಪಂದ್ಯವನ್ನು ಸೋತಿಲ್ಲ. 1987ರಲ್ಲಿ ಭಾರತ ಇಲ್ಲಿ ಕೊನೆಯದಾಗಿ ವೆಸ್ಟ್ ಇಂಡೀಸ್ ವಿರುದ್ಧ ಸೋಲನುಭವಿಸಿತ್ತು.

1987 ರ ನಂತರ ಇಲ್ಲಿ 12 ಟೆಸ್ಟ್ ಪಂದ್ಯಗಳು ನಡೆದಿದ್ದು, ಅದರಲ್ಲಿ 10 ಟೆಸ್ಟ್ ಪಂದ್ಯಗಳಲ್ಲಿ ಭಾರತ ಗೆಲುವು ಸಾಧಿಸಿದ್ದು, ಉಳಿದ ಎರಡು ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿವೆ. 2017ರ ಡಿಸೆಂಬರ್ ತಿಂಗಳಿನಲ್ಲಿ ಭಾರತ ಇಲ್ಲಿ ಕೊನೆಯ ಟೆಸ್ಟ್ ಪಂದ್ಯವನ್ನು ಶ್ರೀಲಂಕಾ ವಿರುದ್ಧ ಆಡಿತ್ತು. ಆ ಪಂದ್ಯ ಡ್ರಾನಲ್ಲಿ ಅಂತ್ಯವಾಗಿತ್ತು.

ಎರಡನೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ತಂಡದಲ್ಲಿ ಬದಲಾವಣೆ

ಮೊದಲನೇ ಪಂದ್ಯದಲ್ಲಿ ಸೋಲನುಭವಿಸಿರುವ ಆಸ್ಟ್ರೇಲಿಯಾ ಎರಡನೇ ಟೆಸ್ಟ್‌ನಲ್ಲಿ ಪ್ರಮುಖ ಬದಲಾವಣೆ ಮಾಡಲಿದೆ. ಪ್ರಮುಖ ವೇಗಿಗಳಾದ ಮಿಚೆಲ್ ಸ್ಟಾರ್ಕ್ ಮತ್ತು ಜೋಶ್ ಹೇಜಲ್‌ವುಡ್ ಎರಡನೇ ಟೆಸ್ಟ್‌ನಲ್ಲಿ ತಂಡಕ್ಕೆ ಮರಳುವ ಸಾಧ್ಯತೆ ಇದೆ.

ಗಾಯದ ಸಮಸ್ಯೆಯಿಂದಾಗಿ ಈ ಇಬ್ಬರೂ ವೇಗಿಗಳು ಮೊದಲನೇ ಪಂದ್ಯಕ್ಕೆ ಅಲಭ್ಯರಾಗಿದ್ದರು. ಇನ್ನು ಆಲ್‌ರೌಂಡರ್ ಕ್ಯಾಮೆರೂನ್ ಗ್ರೀನ್ ಕೂಡ ಎರಡನೇ ಟೆಸ್ಟ್‌ ವೇಳೆಗೆ ಫಿಟ್ ಆಗುವ ಸಾಧ್ಯತೆ ಇದ್ದು, ಕಣಕ್ಕಿಳಿಯುವ ಅವಕಾಶ ಇದೆ.

ಮೊದಲನೇ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಳ್ಳಲು ಆಸ್ಟ್ರೇಲಿಯಾ ರಣತಂತ್ರ ರೂಪಿಸುತ್ತಿದೆ. ಭಾರತದ ಪ್ರಮುಖ ಬ್ಯಾಟರ್ ಗಳು ಎರಡನೇ ಪಂದ್ಯದಲ್ಲಿ ಬ್ಯಾಟಿಂಗ್ ಸುಧಾರಣೆ ಮಾಡಿಕೊಳ್ಳಬೇಕಿದೆ. ಕೊಹ್ಲಿ, ಕೆಎಲ್ ರಾಹುಲ್, ಪೂಜಾರ, ಸೂರ್ಯಕುಮಾರ್ ಯಾದವ್ ಮೊದಲನೇ ಟೆಸ್ಟ್‌ನಲ್ಲಿ ರನ್ ಗಳಿಸುವಲ್ಲಿ ವಿಫಲರಾಗಿದ್ದರು.