ಅಪಘಾತದ ವೇಳೆ ಪಂತ್ ಗೆ ಸಹಾಯ ಮಾಡಿದವರಿಗೆ ಸರ್ಕಾರದಿಂದ ಗೌರವ

ಅಪಘಾತದ ವೇಳೆ ಪಂತ್ ಗೆ ಸಹಾಯ ಮಾಡಿದವರಿಗೆ ಸರ್ಕಾರದಿಂದ ಗೌರವ

ಹೊಸದಿಲ್ಲಿ: ಭಾರತ ತಂಡದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಅವರು ಶುಕ್ರವಾರ ಮುಂಜಾನೆ ರೂಕಿಯಲ್ಲಿ ನಡೆದ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಅಪಘಾತದ ರಭಸಕ್ಕೆ ರಿಷಭ್ ಪಂತ್ ಅವರ ಮರ್ಸಿಡಿಸ್ ಕಾರು ಸುಟ್ಟು ಕರಕಲಾಗಿದೆ.

ಹಮ್ಮದ್‌ಪುರ ಝಾಲ್ ಬಳಿ ರೂರ್ಕಿಯ ನರ್ಸನ್ ಗಡಿಯಲ್ಲಿ ಪಂತ್ ಅವರ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದಿತ್ತು. ಪಂತ್ ಅವರ ಕಾಲು, ಹಣೆ, ಬೆನ್ನು ಸೇರಿದಂತೆ ಹಲವೆಡೆ ಗಾಯಗಳಾಗಿದೆ.

ಕಾರು ಅಪಘಾತದ ವೇಳೆ ಕ್ರಿಕೆಟಿಗನಿಗೆ ಸಹಾಯ ಮಾಡಿದ ಜನರನ್ನು ಗುರುತಿಸಲಾಗುವುದು ಎಂದು ಉತ್ತರಾಖಂಡದ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಅಶೋಕ್ ಕುಮಾರ್ ಹೇಳಿದ್ದಾರೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಯೋಜನೆಯಡಿಯಲ್ಲಿ ಗೌರವಿಸಲಾಗುವುದು ಮತ್ತು ಬಹುಮಾನ ನೀಡಲಾಗುವುದು ಎಂದು ಘೋಷಿಸಿದರು.

'ರಸ್ತೆ ಅಪಘಾತದ ನಂತರ, ಗಾಯಾಳುವಿಗೆ ಮೊದಲ ಒಂದು ಗಂಟೆ ಅತ್ಯಂತ ಮುಖ್ಯ. ಇದು ಬಹಳ ನಿರ್ಣಾಯಕ ಅವಧಿ. ಆ ಒಂದು ಗಂಟೆಯೊಳಗೆ ಸಂತ್ರಸ್ತರಿಗೆ ಸರಿಯಾದ ಚಿಕಿತ್ಸೆ ಪಡೆಯುವುದು ಅವಶ್ಯಕ. ಸಾಮಾನ್ಯ ಜನರಲ್ಲಿ ಉತ್ತಮ ಸಾಮಾಜಿಕ ನಡವಳಿಕೆಯನ್ನು ಉತ್ತೇಜಿಸಲು 'ಉತ್ತಮ ಸಮರಿತನ್' ಯೋಜನೆ ಜಾರಿಗೊಳಿಸಲಾಗಿದೆ" ಎಂದು ಉತ್ತರಾಖಂಡ ಡಿಜಿಪಿ ಹೇಳಿದ್ದಾರೆ.

ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಅವರು ಕೂಡಾ ಕಾರು ಅಪಘಾತದ ನಂತರ ರಿಷಬ್ ಪಂತ್‌ಗೆ ಸಹಾಯ ಮಾಡಿದ ಹರಿಯಾಣ ರಸ್ತೆ ಸಾರಿಗೆ ಚಾಲಕನಿಗೆ ಧನ್ಯವಾದ ಅರ್ಪಿಸಿದ್ದಾರೆ. 'ರಿಷಭ್ ಪಂತ್ ಅವರನ್ನು ಸುಡುವ ಕಾರಿನಿಂದ ಹೊರಕ್ಕೆ ಕರೆದೊಯ್ದು ಬೆಡ್‌ಶೀಟ್‌ನಿಂದ ಸುತ್ತಿ ಆಂಬ್ಯುಲೆನ್ಸ್‌ಗೆ ಕರೆ ಮಾಡಿದ ಹರಿಯಾಣ ರೋಡ್‌ವೇಸ್ ಚಾಲಕ ಸುಶೀಲ್‌ ಕುಮಾರ್‌ ಗೆ ಕೃತಜ್ಞತೆಗಳು. ನಿಮ್ಮ ನಿಸ್ವಾರ್ಥ ಸೇವೆಗಾಗಿ ನಾನು ನಿಮಗೆ ತುಂಬಾ ಋಣಿಯಾಗಿದ್ದೇನೆ, ಸುಶೀಲ್ ಜಿ ರಿಯಲ್ ಹೀರೋ' ಎಂದು ಟ್ವೀಟ್ ಮಾಡಿದ್ದಾರೆ.