ಕಾಶ್ಮೀರ ಕಾಮೆಂಟ್ : ಸಿದ್ದು ಸಲಹೆಗಾರ ಮಾಲ್ವಿಂದರ್ ಸಿಂಗ್ ಮಾಲಿ ರಾಜೀನಾಮೆ

ಕಾಶ್ಮೀರ ಕಾಮೆಂಟ್ : ಸಿದ್ದು ಸಲಹೆಗಾರ ಮಾಲ್ವಿಂದರ್ ಸಿಂಗ್ ಮಾಲಿ ರಾಜೀನಾಮೆ
ಪಂಜಾಬ್ ಕಾಂಗ್ರೆಸ್ ಘಟಕದ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರ ಸಲಹೆಗಾರರಾದ ಮಾಲ್ವಿಂದರ್ ಸಿಂಗ್ ಮಾಲಿ ಅವರು ತಮ್ಮ ಸ್ಥಾನ ತ್ಯಜಿಸುತ್ತಿರುವುದಾಗಿ ಶುಕ್ರವಾರ ಹೇಳಿದ್ದಾರೆ.
ಮಾಲಿ ಮತ್ತು ಸಿಧು ಅವರ ಮತ್ತೊಬ್ಬ ಸಲಹೆಗಾರ ಪ್ಯಾರೆ ಲಾಲ್ ಗರ್ಗ್ ಅವರು ವಾರಾಂತ್ಯದಲ್ಲಿ ಮಾಡಿದ ವಿವಾದಾತ್ಮಕ ಟೀಕೆಗಳಿಂದ ಚರ್ಚೆಗೆ ಗ್ರಾಸವಾಗಿದ್ದರು. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸುವ ವಿಚಾರದಲ್ಲಿ ಮಾಲಿ ಹೇಳಿಕೆ ನೀಡಿದ್ದರು. ಭಾರತ ಮತ್ತು ಪಾಕಿಸ್ತಾನ ದೇಶಗಳು ಕಾಶ್ಮೀರವನ್ನು ಅಕ್ರಮವಾಗಿ ವಶಪಡಿಸಿಕೊಂಡಿವೆ ಎಂದು ಮಾಲಿ ಫೇಸ್‌ಬುಕ್‌ನಲ್ಲಿ ಬರೆದಿದ್ದರು. ಕಾಶ್ಮೀರವು ಭಾರತದ ಒಂದು ಭಾಗವಾಗಿದ್ದರೆ, 370 ಮತ್ತು 35 ಎ ಕಲಂಗಳನ್ನು ಹೊಂದಿರಬೇಕಾದ ಅಗತ್ಯವೇನು ಎಂದು ಅವರು ಹೇಳಿದ್ದರು. ದಿವಂಗತ ಪ್ರಧಾನಿ ಇಂದಿರಾಗಾಂಧಿ ಗನ್ ಹಿಡಿದುಕೊಂಡು ತಲೆಬುರುಡೆಗಳ ರಾಶಿಯ ಬಳಿ ನಿಂತು ತೋರಿಸುತ್ತಿರುವ ಕಾರ್ಟೂನ್ ಅನ್ನು ಮಾಲಿ ಕೂಡ ಪೋಸ್ಟ್ ಮಾಡಿದ್ದರು. ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಮಾಲಿ ಹಾಗೂ ಗರ್ಗ ಅವರನ್ನುಈ ವಿಚಾರಕ್ಕಾಗಿ ತೀವ್ರವಾಗಿ ತರಾಟೆಗೆ ತೆಗದುಕೊಂಡಿದ್ದರು.
ಈ ಹೇಳಿಕೆಗಳು ಹಿನ್ನಡೆಗೆ ಕಾರಣವಾದವು,ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರಿಬ್ಬರ ಕಾಮೆಂಟ್‌ಗಳನ್ನು ಅಪಾಯಕಾರಿ ಎಂದು ಹೇಳಿದ್ದಾರೆ.
ಬುಧವಾರ, ಪಂಜಾಬ್‌ನ ಕಾಂಗ್ರೆಸ್ ಉಸ್ತುವಾರಿ ಹರೀಶ್ ರಾವತ್ ಅವರು ಮಾಲಿ ಮತ್ತು ಗರ್ಗ್ ಅವರನ್ನು ತಮ್ಮ ಹುದ್ದೆಗಳಿಂದ ತೆಗೆದುಹಾಕುವಂತೆ ಸಿದ್ದುಗೆ ಕೇಳಿದ್ದರು. “ನಾವು ನವಜೋತ್ ಸಿಂಗ್ ಸಿಧು ಅವರ ಸಲಹೆಗಾರರ ಮೇಲೆ ನಿಯಂತ್ರಣ ಇಟ್ಟುಕೊಳ್ಳುವಂತೆ ಕೇಳಿದ್ದೇವೆ … ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿ ಯಾವುದೇ ಟೀಕೆ ಸ್ವೀಕಾರಾರ್ಹವಲ್ಲ” ಎಂದು ರಾವತ್ ಹೇಳಿದ್ದರು.