ಸೆಂಟ್ರಲ್ ಮಾರುಕಟ್ಟೆಯಲ್ಲಿ ಬೀಫ್ ಸ್ಟಾಲ್: ಶಾಸಕ ವೇದವ್ಯಾಸ ಕಾಮತ್ ಕೆಂಡಾಮಂಡಲ

ಮಂಗಳೂರು, ನವೆಂಬರ್ 7: ಆರಂಭವಾಗುವ ಮೊದಲೇ ಮಂಗಳೂರಿನ ಪ್ರತಿಷ್ಠಿತ ಸೆಂಟ್ರಲ್ ಮಾರುಕಟ್ಟೆಯಲ್ಲಿ ಅಂಗಡಿಗಳು ಇಡುವ ಬಗ್ಗೆ ವಿವಾದಗಳು ಶುರುವಾಗಿದೆ. ಮಂಗಳೂರಿನಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಸೆಂಟ್ರಲ್ ಮಾರುಕಟ್ಟೆಯಲ್ಲಿ ಗೋಮಾಂಸದ ಅಂಗಡಿ ಇಡಲು ಮಂಗಳೂರು ಮಹಾನಗರ ಪಾಲಿಕೆ ಅವಕಾಶ ನೀಡಿರುವುದು ವಿವಾದ ಸೃಷ್ಟಿಸಿದೆ.
ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಗೋಹತ್ಯೆ ನಿಷೇಧ ಕಾಯಿದೆ ಜಾರಿ ತಂದಿರುವ ಬಿಜೆಪಿ ಸರ್ಕಾರ, ತಮ್ಮ ಆಡಳಿತದಲ್ಲಿರುವ ಮಹಾನಗರ ಪಾಲಿಕೆಯೇ ಮಂಗಳೂರು ಸೆಂಟ್ರಲ್ ಮಾರುಕಟ್ಟೆಯಲ್ಲಿ ಬೀಫ್ ಸ್ಟಾಲ್‌ಗೆ ಅವಕಾಶ ನೀಡಿರುವುದು ಪಕ್ಷಕ್ಕೆ ಇರುಸುಮುರುಸು ತಂದಿದೆ.
ಸ್ಮಾರ್ಟ್ ಸಿಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣ ಆಗಲಿರುವ ಮಂಗಳೂರಿನ ಸೆಂಟ್ರಲ್ ಮಾರುಕಟ್ಟೆಯಲ್ಲಿ ಒಂಭತ್ತು ಬೀಫ್ ಸ್ಟಾಲ್ ತೆರೆಯಲು ಮಂಗಳೂರು ಮಹಾನಗರ ಪಾಲಿಕೆ ಅನುಮತಿ ನೀಡಿದೆ. ಸೆಂಟ್ರಲ್ ಮಾರುಕಟ್ಟೆಯನಲ್ಲಿನ ಲೋವರ್ ಗ್ರೌಂಡ್ ಫ್ಲೋರ್‌ನಲ್ಲಿ ಬೀಫ್ ವ್ಯಾಪರಕ್ಕೆ ಅವಕಾಶ ನೀಡಲಾಗಿದ್ದು, ಸ್ಮಾರ್ಟ್ ಸಿಟಿಯ ಮಾರ್ಕೆಟ್‌ನ ನಕಾಶೆಯಲ್ಲಿ ಒಂಭತ್ತು ಬೀಫ್ ಸ್ಟಾಲ್‌ಗಳ ಉಲ್ಲೇಖ ಮಾಡಲಾಗಿದೆ.
ಮುಂದಿನ ಹದಿನೆಂಟು ತಿಂಗಳಿನಲ್ಲಿ 114 ಕೋಟಿ ರೂಪಾಯಿ ವೆಚ್ಚದಲ್ಲಿ ಮಂಗಳೂರಿನ ಸೆಂಟ್ರಲ್ ಮಾರುಕಟ್ಟೆ ನಿರ್ಮಾಣ ಆಗಲಿದೆ. ಹೀಗಾಗಿ ಮಂಗಳೂರು ಮಹಾನಗರ ಪಾಲಿಕೆಯಿಂದ ಸೆಂಟ್ರಲ್ ಮಾರುಕಟ್ಟೆಯ ಅಂಗಡಿಗಳ ಏಲಂ ಪ್ರಕ್ರಿಯೆ ಮಾಡಲಾಗಿದೆ. ಏಲಂ ಪ್ರಕ್ರಿಯೆಯಲ್ಲಿ ಬಿಜೆಪಿ ಆಡಳಿತ ಇರುವ ಮಂಗಳೂರು ಮಹಾನಗರ ಪಾಲಿಕೆಯು ಬೀಫ್ ಸ್ಟಾಲ್‌ಗೆ ಅವಕಾಶ ನೀಡಿರುವ ನಿರ್ಧಾರ ವಿವಾದ ಸೃಷ್ಟಿಸಿದೆ.
ಮಹಾನಗರ ಪಾಲಿಕೆ ನಿರ್ಧಾರದ ಬಗ್ಗೆ ಹಿಂದೂ ಸಂಘಟನೆಗಳ ಆಕ್ರೋಶ ವ್ಯಕ್ತಪಡಿಸಿದೆ. ಪಾಲಿಕೆ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ವಿಶ್ವ ಹಿಂದೂ ಪರಿಷತ್ ನೀಡಿದೆ. ಸೆಂಟ್ರಲ್ ಮಾರುಕಟ್ಟೆಯಲ್ಲಿ ಕೋಳಿ ಹಾಗೂ ಕುರಿ ಮಾಂಸದ ಸ್ಟಾಲ್ ನಡುವೆ ಬೀಫ್ ಸ್ಟಾಲ್‌ಗೆ ಅವಕಾಶ ನೀಡಿರುವುದು ಸರಿಯಲ್ಲ. ಪಾಲಿಕೆ ಕೂಡಲೇ ಈ ಅವಕಾಶವನ್ನು ರದ್ದುಗೊಳಿಸಬೇಕು. ಇಲ್ಲವಾದಲ್ಲಿ ನೇರ ಹೋರಾಟಕ್ಕೆ ಮುಂದಾಗುವ ಎಚ್ಚರಿಕೆಯನ್ನು ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ವೆಲ್ ನೀಡಿದ್ದಾರೆ.ವಿಷಯ ದೊಡ್ಡ ವಿವಾದವಾಗುತ್ತಿದ್ದಂತೆಯೇ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್, ಸ್ಮಾರ್ಟ್ ಸಿಟಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸೆಂಟ್ರಲ್ ಮಾರುಕಟ್ಟೆಯಲ್ಲಿ ಪ್ರಾಸ್ತಾಪಿತ ಬೀಫ್ ಸ್ಟಾಲ್‌ಗಳನ್ನು ಕೂಡಲೇ ತೆಗೆದು, ನೂತನ ನೀಲನಕ್ಷೆ ಮಾಡುವಂತೆ ಸೂಚಿಸಿದ್ದಾರೆ. ಅಲ್ಲದೆ ಈ ಪ್ರಕ್ರಿಯೆ ತ್ವರಿತಗತಿಯಲ್ಲಿ ನಡೆಯದಿದ್ದಲ್ಲಿ ಸೆಂಟ್ರಲ್ ಮಾರುಕಟ್ಟೆಯ ಶಂಕುಸ್ಥಾಪನೆಯನ್ನು ಮಾಡುವುದಿಲ್ಲ ಎನ್ನುವ ಎಚ್ಚರಿಕೆಯನ್ನು ಶಾಸಕ ವೇದವ್ಯಾಸ ಕಾಮತ್ ಅಧಿಕಾರಿಗಳಿಗೆ ನೀಡಿದ್ದಾರೆ.