ಚೀನಾದಿಂದ ಮತ್ತೊಂದು ಮಾರಕ ವೈರಸ್ ತಯಾರಿಕೆ?: ಪಾಕಿಸ್ತಾನದ ರಾವಲ್ಪಿಂಡಿ ಸಮೀಪ ರಹಸ್ಯ ಪ್ರಯೋಗಾಲಯ

ನವದೆಹಲಿ: ಕೋವಿಡ್ ವೈರಸ್ಗಿಂತಲೂ ಹೆಚ್ಚು ಮಾರಕವಾದ ವೈರಸ್ಅನ್ನು ಪಾಕಿಸ್ತಾನದಲ್ಲಿ ಚೀನಾ ಸೃಷ್ಟಿಸುತ್ತಿದೆ ಎಂಬ ಕಳವಳಕಾರಿ ಅಂಶ ಬಹಿರಂಗವಾಗಿದೆ.
ಕೋವಿಡ್ ಮತ್ತು ಅದರ ಪ್ರಭೇದಗಳು ಇನ್ನೂ ಜಗತ್ತನ್ನು ಕಾಡುತ್ತಿರುವುದರ ನಡುವೆಯೇ, ಪಾಕಿಸ್ತಾನ ಮತ್ತು ಚೀನಾ ರಾವಲ್ಪಿಂಡಿ ಸಮೀಪದ ರಹಸ್ಯ ಪ್ರಯೋಗಾಲಯವೊಂದರಲ್ಲಿ ಜೈವಿಕಾಸ್ತ್ರದ ಸಂಶೋಧನೆಯನ್ನು ಮುಂದುವರಿಸಿದೆ ಎನ್ನಲಾಗಿದೆ.
ಕುಖ್ಯಾತ ವುಹಾನ್ ವೈರಾಣು ಸಂಸ್ಥೆ ಮತ್ತು ಪಾಕ್ ಸೇನೆ ನಡೆಸುವ ರಕ್ಷಣಾ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ (ಡಿಎಸ್ಟಿಒ) ಮಾರಕ ವೈರಸ್ ಸಂಶೋಧಿಸಲು ಅತ್ಯಂತ ಸುಧಾರಿತ ವೈಜ್ಞಾನಿಕ ಮೂಲಸೌಕರ್ಯವನ್ನು ಪಾಕ್ನಲ್ಲಿ ಸ್ಥಾಪಿಸಿದೆ ಎಂದು 'ಜಿಯೋ-ಪೊಲಿಟಿಕಾ' ವರದಿ ಮಾಡಿದೆ. ಆ ಸ್ಥಳವನ್ನು ರಹಸ್ಯವಾಗಿಡಾಗಿದ್ದು ಬಿಗಿ ಭದ್ರತೆ ಒದಗಿಸಲಾಗಿದೆ ಎಂದು ವರದಿ ಹೇಳಿದೆ.
5 ಕೋಟಿ ಲಸಿಕೆ ಅವಧಿ ಶೀಘ್ರ ಮುಕ್ತಾಯ
ಭಾರತ್ ಬಯೋಟೆಕ್ ಕಂಪನಿ ಉತ್ಪಾದಿಸಿರುವ ಕರೊನಾ-ನಿರೋಧಕ ಕೊವ್ಯಾಕ್ಸಿನ್ ಲಸಿಕೆಯ ಸುಮಾರು 50 ಕೋಟಿ ಡೋಸ್ನ ಬಳಕೆ ಅವಧಿ 2023ರ ಆರಂಭದ ವೇಳೆಗೆ ಮುಕ್ತಾಯವಾಗಲಿದೆ (ಎಕ್ಸ್ಪೈರಿ). ಲಸಿಕೆಯನ್ನು ಸಂಬಂಧಪಟ್ಟವರು ಪಡೆಯದಿದ್ದುದೇ ಇದಕ್ಕೆ ಕಾರಣವಾಗಿದೆ. ಇದರಿಂದ ಕಂಪನಿಗೆ ನಷ್ಟವಾಗಲಿದೆ ಎಂದು ಭಾರತ್ ಬಯೋಟೆಕ್ ಮೂಲಗಳು ತಿಳಿಸಿವೆ.
2 ಡೋಸ್ಗಳ ಈ ಲಸಿಕೆಗೆ ಬೇಡಿಕೆ ಕುಸಿದ ಕಾರಣ ಈ ವರ್ಷಾರಂಭದಲ್ಲೇ ಅದರ ಉತ್ಪಾದನೆಯನ್ನು ನಿಲ್ಲಿಸಲು ಆರಂಭಿಸಲಾಗಿತ್ತು. ಪ್ರತಿ ವರ್ಷ 100 ಕೋಟಿ ಡೋಸ್ ಲಸಿಕೆ ಉತ್ಪಾದಿಸುವ ಸಾಮರ್ಥ್ಯವನ್ನು ಬಯೋಟೆಕ್ 2021ರ ಆರಂಭದಲ್ಲೇ ಗಳಿಸಿಕೊಂಡಿತ್ತು. ಭಾರತ್ ಬಯೋಟೆಕ್ ಬಳಿ ಈಗ ಸಗಟು ರೂಪದಲ್ಲಿ 20 ಕೋಟಿ ಡೋಸ್ ಹಾಗೂ ವಯಲ್ ರೂಪದಲ್ಲಿ ಬಳಕೆಗೆ ಸಿದ್ಧವಿರುವ 5 ಕೋಟಿ ಡೋಸ್ ಲಸಿಕೆ ಇದೆ.
ವಯಲ್ ರೂಪದ ಲಸಿಕೆ ಮುಂದಿನ ವರ್ಷದ ಆರಂಭದಲ್ಲಿ ಎಕ್ಸ್ಪೈರ್ ಆಗಲಿದೆ. ಆದರೆ ಇದರಿಂದ ಕಂಪನಿಗೆ ಆಗಲಿರುವ ನಷ್ಟದ ಮೊತ್ತ ಎಷ್ಟೆಂಬುದು ಇನ್ನೂ ದೃಢಪಟ್ಟಿಲ್ಲ. ದೇಶದಾದ್ಯಂತ ಇದುವರೆಗೆ ಕೊವ್ಯಾಕ್ಸಿನ್ ಸಹಿತ ವಿವಿಧ ವ್ಯಾಕ್ಸಿನ್ಗಳ 219.71 ಕೋಟಿ ಡೋಸ್ ಹಾಕಲಾಗಿದೆ. ಜಗತ್ತಿನಾದ್ಯಂತ ಸಾಂಕ್ರಾಮಿಕತೆ ತಗ್ಗುತ್ತಿರುವುದರಿಂದ ವಿದೇಶಗಳು ಲಸಿಕೆ ಖರೀದಿಸುವುದನ್ನು ನಿಲ್ಲಿಸಿರುವುದು ಉತ್ಪಾದಕರಿಗೆ ಸಮಸ್ಯೆಯಾಗಿ ಪರಿಣಮಿಸಿದೆ.