ವಿಜೃಂಭಣೆಯಿಂದ ಆಚರಿಸುವ ಶ್ರೀ ವೀರಭದ್ರದೇವರ ರಥೋತ್ಸವ

ವಿಜೃಂಭಣೆಯಿಂದ ಆಚರಿಸುವ ಶ್ರೀ ವೀರಭದ್ರದೇವರ ರಥೋತ್ಸವ

 ಸವಣೂರ:  ದಕ್ಷಬ್ರಹ್ಮನನ್ನು ಸಂಹಾರ ಮಾಡಲು ರುದ್ರದೇವನ ಉಗ್ರರೂಪದಿಂದ ಉದ್ಭವಿಸಿದ ಶ್ರೀ ವೀರಭದ್ರದೇವರ ಜಾಗ್ರತ ಸ್ಥಾನವಾಗಿರುವ ಹಾವೇರಿ ಜಿಲ್ಲೆ ಸವಣೂರ ತಾಲೂಕಿನ ಕಾರಡಗಿ ಗ್ರಾಮದ ಶ್ರೀ ವೀರಭದ್ರೇಶ್ವರ ಧರ್ಮಕ್ಷೇತ್ರದ ಜಾತ್ರಾ ಮಹೋತ್ಸವವು ಏ.15ರಿಂದ 17ರವರೆಗೆ ಜರುಗಲಿದೆ.
ಶರಣರು ಅನುಷ್ಠಾನ ಮಾಡಿದ ಧರ್ಮಜಾಗ್ರತ ಸ್ಥಳ, ಹಿಂದು- ಮುಸ್ಲಿಂ ಸಮಾಜದವರ ಭಾವೈಕ್ಯ ತಾಣವೆಂದೇ ಶ್ರೀ ಕ್ಷೇತ್ರವು ಪ್ರಸಿದ್ಧಿ ಹೊಂದಿದೆ. 
ದೇವಸ್ಥಾನದಲ್ಲಿರುವ ಶ್ರೀ ವೀರಭದ್ರೇಶ್ವರ ದೇವರ ಮೂರ್ತಿ ಉದ್ಭವ ಮೂರ್ತಿಯಾಗಿದೆ. ಅದಕ್ಕೆ ಗದ್ದುಗೆ ನಿರ್ಮಿಸಿ ಮುಖದ ಭಾಗವನ್ನು ಮಾತ್ರ ಉಳಿಸಲಾಗಿದೆ. ದೇವಸ್ಥಾನವು ನಯನ ಮನೋಹರವಾಗಿದ್ದು, ಪ್ರಶಾಂತ ವಾತಾವರಣದಲ್ಲಿರುವ ದೇವಾಲಯಕ್ಕೆ ಆಗಮಿಸುವ ಭಕ್ತರ ಕಷ್ಟ, ನೋವುಗಳನ್ನು ಮರೆಸುವ ಶಕ್ತಿ ಇಲ್ಲಿದೆ ಎಂದು ಹಿರಿಯರು ಹೇಳುತ್ತಾರೆ.

ದವನದ ಹುಣ್ಣಿಮೆ ದಿನ ಏ. 16ರಂದು ಶ್ರೀಕ್ಷೇತ್ರದ ದೇವರ ದೊಡ್ಡ ಜಾತ್ರೆ ಅಂಗವಾಗಿ ಸುಕ್ಷೇತ್ರ ಮಂತ್ರೋಡಿಯ ಹಿರೇಮಠದ ಶ್ರೀ ಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸಂಜೆ ರಥೋತ್ಸವ ಜರುಗಲಿದೆ. 
ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕನ್ನಡ ಸೇರಿ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ. ಸಂಜೆ ನಾಗರಹಳ್ಳಿಯ ಗಂಧರ್ವ ಮ್ಯೂಸಿಕ್ ಪೌಂಡೇಷನ್ ಹಾಗೂ ಕೃಷ್ಣ ಬಡಿಗೇರ, ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.
17ರಂದು ಪ್ರಾತಃ ಕಾಲ ವಿವಿಧ ಧಾರ್ಮಿಕ ಕೈಂಕರ್ಯಗಳು ಜರುಗಲಿವೆ. ಸಂಜೆ ಕಡುಬಿನ ಕಾಳಗ, ಪಲ್ಲಕ್ಕಿ ಉತ್ಸವ ನಡೆಯಲಿದೆ. ಸಾರಿಗೆ ಸೌಲಭ್ಯ: ಹಾವೇರಿ, ಹುಬ್ಬಳ್ಳಿ, ಸವಣೂರ, ಶಿಗ್ಗಾಂವಿ,
ಲಕ್ಷೇಶ್ವರದಿಂದ ಆಗಮಿಸುವ ಭಕ್ತರಿಗೆ ಬಸ್ ಸೌಲಭ್ಯವಿದೆ. ಕ್ಷೇತ್ರದಲ್ಲಿ ಕುಡಿಯುವ ನೀರು ಹಾಗೂ ವಸತಿ ವ್ಯವಸ್ಥೆ ಇದೆ.

ದೇವಸ್ಥಾನದಲ್ಲಿ ವಿವಿಧ ಕಾರ್ಯಕ್ರಮ...
ಏ.15ರಂದು ಸಂಜೆ 5 ಗಂಟೆಗೆ ಶ್ರೀ ವೀರಭದ್ರೇಶ್ವರ ಉತ್ಸವ ಮೂರ್ತಿಯ ಮೆರವಣಿಗೆ ಹಾಗೂ ಮಹಾಗಣಾರಾಧನೆ.
16ರಂದು ಪ್ರಾತಃಕಾಲ ಗುಗ್ಗಳ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮ. ಸಂಜೆ 5 ಗಂಟೆಗೆ ವೀರಭದ್ರೇಶ್ವರ ರಥೋತ್ಸವ ಜರುಗಲಿದೆ. ನಂತರ ಧರ್ಮಸಭೆ ಜರುಗಲಿದ್ದು, ಸುಕ್ಷೇತ್ರ ಮಂತ್ರವಾಡಿ ಗ್ರಾಮದ ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. 17 ರಂದು ಸಂಜೆ 'ಕಡುಬಿನಕಾಳಗ' ಹಾಗೂ ಪಲ್ಲಕ್ಕಿ ಸೇವೆ ನಡೆಯಲಿದೆ.