ವನ್ಯಜೀವಿಗಳ ಪತ್ತೆ ಪ್ರಕರಣ: ಬಿಜೆಪಿಯವರಿಗೆ ಮೆದುಳಿಲ್ಲ: ಎಸ್‌. ಎಸ್. ಮಲ್ಲಿಕಾರ್ಜುನ್ ಆಕ್ರೋಶ

ವನ್ಯಜೀವಿಗಳ ಪತ್ತೆ ಪ್ರಕರಣ: ಬಿಜೆಪಿಯವರಿಗೆ ಮೆದುಳಿಲ್ಲ: ಎಸ್‌. ಎಸ್. ಮಲ್ಲಿಕಾರ್ಜುನ್ ಆಕ್ರೋಶ

ದಾವಣಗೆರೆ, ಜನವರಿ, 18: ವನ್ಯಜೀವಿಗಳ ಪತ್ತೆ ಪ್ರಕರಣ ಸಂಬಂಧ ಆರೋಪ ಮಾಡಿರುವ ಬಿಜೆಪಿಯವರಿಗೆ ಮೆದುಳಿಲ್ಲ. ವಿನಾಕಾರಣ ಆರೋಪ ಮಾಡುತ್ತಾರೆ. ಈ ಬಗ್ಗೆ ಹೆಚ್ಚು ಪ್ರತಿಕ್ರಿಯಿಸುವುದಿಲ್ಲ. ಪ್ರಕರಣ ಕೋರ್ಟ್‌ನಲ್ಲಿ ಇರುವ ಕಾರಣಕ್ಕೆ ಈ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದು ಮಾಜಿ ಸಚಿವ ಎಸ್.

ಎಸ್. ಮಲ್ಲಿಕಾರ್ಜುನ್ ದಾವಣಗೆಯಲ್ಲಿ ಹೇಳಿದರು‌.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಬಿಜೆಪಿ ಸುಳ್ಳು ಆರೋಪ ಮಾಡಿದೆ. ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಲಾಗುವುದು ಎಂದು ತಿಳಿಸಿದರು. ಇನ್ನು ಬಿಜೆಪಿ ಪಾಪದ ಕೊಡ ತುಂಬಿದೆ. ಶೇಕಡಾ 40ರಷ್ಟು ಕಮಿಷನ್ ಸರ್ಕಾರವಾಗಿದೆ. ಬಿಜೆಪಿ ಭ್ರಷ್ಟ ಸರ್ಕಾರದ ವಿರುದ್ಧ ಧ್ವನಿ ಎತ್ತಲು ಹಾಗೂ ಜನರಿಗೆ ಮನವರಿಕೆ ಮಾಡಿಕೊಡಲು ಜನವರಿ 19ರಂದು ಪ್ರಜಾಧ್ವನಿ ಯಾತ್ರೆ ದಾವಣಗೆರೆಗೆ ಬರಲಿದೆ ಎಂದರು.ಅಂದು ಮಧ್ಯಾಹ್ನ 3ಗಂಟೆಗೆ ಬಸ್ ಮೂಲಕ ಆಗಮಿಸಲಿದ್ದಾರೆ. ಒಂದು ಲಕ್ಷಕ್ಕೂ ಹೆಚ್ಚಿ‌ನ ಜನರು ಕಾರ್ಯಕ್ರಮದಲ್ಲಿ ಸೇರುವ ನಿರೀಕ್ಷೆ ಇದೆ ಎಂದು ಹೇಳಿದರು.

ಯಾತ್ರೆಯಲ್ಲಿ ಭಾಗಿಯಾಗಲಿರುವ ನಾಯಕರು

ರಣದೀಪ ಸಿಂಗ್ ಸುರ್ಜಿವಾಲ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಎಐಸಿಸಿ ಕಾರ್ಯದರ್ಶಿ ಮಯೂರ್ ಜಯಕುಮಾರ್, ಪ್ರಚಾರ ಸಮಿತಿಯ ಅಧ್ಯಕ್ಷ ಎಂ.ಬಿ ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್, ಸತೀಶ್ ಜಾರಕಿಹೊಳಿ, ಈಶ್ವರ್ ಖಂಡ್ರೆ, ದ್ರುವನಾರಾಯಣ, ರಾಮಲಿಂಗಾ ರೆಡ್ಡಿ ಮತ್ತು ಹಿರಿಯ ಮುಖಂಡರು ಆಗಮಿಸಲಿದ್ದಾರೆ ಎಂದು ವಿವರಿಸಿದರು.

BJPಯವರು ಆಸ್ತಿ ಮಾಡಲು ಹೊರಟಿದ್ದಾರೆ

ಜಿಲ್ಲಾಧ್ಯಕ್ಷ ಹೆಚ್.ಬಿ ಮಂಜಪ್ಪರ ಅಧ್ಯಕ್ಷತೆಯಲ್ಲಿ ಶಾಸಕ ಡಾ. ಶಾಮನೂರು ಶಿವಶಂಕರಪ್ಪ, ಹಾಗೂ ಮಾಜಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು. ರಾಜ್ಯದಲ್ಲಿ ಅಕ್ರಮವಾಗಿ ಬಿಜೆಪಿ ಸರ್ಕಾರ ರಚಿಸಿದೆ. ಒಂದಲ್ಲ, ಎರಡಲ್ಲ ಸಾವಿರಾರು ಹಗರಣಗಳನ್ನು ನೋಡುತ್ತಿದ್ದೇವೆ. ದಾವಣಗೆರೆಯಲ್ಲಿ ನಮ್ಮ ಸರ್ಕಾರ ಮಂಜೂರು ಮಾಡಿದ ಕೆಲಸ ಆಗಿಲ್ಲ. 82 ವರ್ಷದ ಕೆಂಪಣ್ಣನವರ ಸ್ಥಿತಿ ಏನಾಗಿದೆ. ಜೈಲಿಗೆ ಹಾಕಿ ಹೆದರಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಮಹಾನಗರ ಪಾಲಿಕೆಯಲ್ಲಿ ಗುತ್ತಿಗೆದಾರರ ಸಂಘ ಹಾಗೂ ಪಾಲಿಕೆ ಅಧಿಕಾರಿಗಳು ಕೆಲಸ ಮಾಡುತ್ತಿದ್ದರು. ಆದರೆ ಈಗ ಬಿಜೆಪಿಯವರು ಆಸ್ತಿ ಮಾಡಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ, ಶಾಸಕ ಎಸ್. ರಾಮಪ್ಪ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್. ಬಿ. ಮಂಜಪ್ಪ, ಆಯೂಬ್ ಪೈಲ್ವಾನ್, ಮಾಜಿ ಶಾಸಕರಾದ ಡಿ. ಬಿ. ಶಾಂತನಗೌಡ, ಕೆ.ಜಿ. ಶಿವಕುಮಾರ್, ಶಿವಗಂಗಾ ಬಸವರಾಜ್, ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಗಡಿಗುಡಾಳ್ ಮಂಜುನಾಥ್, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಸೇರಿದಂತೆ ದಾವಣಗೆರೆ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ 46ಕ್ಕೂ ಹೆಚ್ಚು ಆಕಾಂಕ್ಷಿಗಳು ಹಾಜರಿದ್ದರು.