ರಿಲೀಸ್ಗೂ ಮೊದಲೇ ಸಂಕಷ್ಟಕ್ಕೆ ಸಿಲುಕಿದ 'ಪುಷ್ಪ'; ಚಿಂತೆಗೀಡಾದ ಅಲ್ಲು ಅರ್ಜುನ್?

ಸುಕುಮಾರ್ ನಿರ್ದೇಶನದ ಸಿನಿಮಾ ಎಂದರೆ ಅಲ್ಲೊಂದು ಅದ್ದೂರಿತನ ಇದ್ದೇ ಇರುತ್ತದೆ.
'ಪುಷ್ಪ' ಸಿನಿಮಾ ತೆಲುಗು ಸೇರಿ ಐದು ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಸಿನಿಮಾ ಡಬ್ ಆಗಿ ತೆರೆಕಾಣುತ್ತಿದೆ. ಸಿನಿಮಾ ರಿಲೀಸ್ ಆಗೋಕೆ ಇನ್ನು ಎರಡು ತಿಂಗಳು ಮಾತ್ರ ಬಾಕಿ ಇದೆ. ಮೂಲಗಳ ಪ್ರಕಾರ ಮೈತ್ರಿ ಮೂವಿ ಮೇಕರ್ಸ್ ಹಾಗೂ ಈ ಚಿತ್ರದ ಹಿಂದಿ ಡಬ್ಬಿಂಗ್ ಹಕ್ಕನ್ನು ಹೊಂದಿರುವ ವ್ಯಕ್ತಿ ಜತೆ ಮನಸ್ತಾಪ ಮೂಡಿದೆ. ಇದನ್ನು ಪರಿಹಾರ ಮಾಡಬೇಕು ಎಂದು ಅಲ್ಲು ಅರ್ಜುನ್ ಎಲ್ಲಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಇದಕ್ಕೆ ಪರಿಹಾರ ಸಿಕ್ಕಿಲ್ಲ.
ಈ ಕಾರಣಕ್ಕೆ ಹಿಂದಿ ಅವತರಣಿಕೆ ತೆರೆಕಾಣೋದು ವಿಳಂಬ ಆಗಬಹುದು ಎನ್ನುವ ಅಭಿಪ್ರಾಯ ಮೂಡುತ್ತಿದೆ. ಈ ವಿಚಾರದಲ್ಲಿ ನಿರ್ದೇಶಕ ಸುಕುಮಾರ್ ಹಾಗೂ ಅಲ್ಲು ಅರ್ಜುನ್ ಸಾಕಷ್ಟು ಚಿಂತೆಗೀಡಾಗಿದ್ದಾರೆ ಎಂದು ವರದಿ ಆಗಿದೆ. ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಇನ್ನಷ್ಟೇ ಬರಬೇಕಿದೆ.
'ಅಲಾ ವೈಕುಂಠಪುರಮುಲೋ' ಸಿನಿಮಾ ನಂತರ ಅಲ್ಲು ಅರ್ಜುನ್ 'ಪುಷ್ಪ' ಸಿನಿಮಾ ಮೂಲಕ ಮತ್ತೆ ತೆರೆಮೇಲೆ ಬರೋಕೆ ಸಿದ್ಧರಾಗಿದ್ದಾರೆ. ಸುಕುಮಾರ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. 2018ರಲ್ಲಿ ತೆರೆಕಂಡ 'ರಂಗಸ್ಥಲಂ' ಚಿತ್ರದ ನಂತರ ಅವರು ಕೈಗೆತ್ತಿಕೊಂಡಿರುವ ಮುಂದಿನ ಚಿತ್ರ ಇದಾಗಿದೆ. 'ರಂಗಸ್ಥಲಂ' ಸಿನಿಮಾ ಕತೆ ಹಳ್ಳಿ ಹಿನ್ನೆಲೆಯಲ್ಲಿ ಸಾಗಿತ್ತು. ಪುಷ್ಪ ಸಿನಿಮಾ ಕಾಡಿನ ಹಿನ್ನೆಲೆ ಹೊಂದಿದೆ. ಶೇಷಾಚಲಂನ ಅರಣ್ಯದಲ್ಲಿ ನಡೆಯುತ್ತಿದ್ದ ರಕ್ತ ಚಂದನದ ಕಳ್ಳ ಸಾಗಾಣಿಕೆ ಬಗ್ಗೆ ಈ ಸಿನಿಮಾದಲ್ಲಿ ಹೇಳಲಾಗುತ್ತಿದೆ. ಚಿತ್ರದಲ್ಲಿ ಅಲ್ಲು ಅರ್ಜುನ್ ಟ್ರಕ್ ಡ್ರೈವರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ ಅನ್ನೋದು ವಿಶೇಷ. ರಶ್ಮಿಕಾ ಸಿನಿಮಾದ ನಾಯಕಿ.