ರಾಸುಗಳಿಗೆ ಕಂದು ರೋಗ : ಲಸಿಕೆ ನೀಡುವ ಬಗ್ಗೆ ರೈತರಿಗೆ ಇಲ್ಲಿದೆ ಮುಖ್ಯ ಮಾಹಿತಿ

ರಾಸುಗಳಿಗೆ ಕಂದು ರೋಗ : ಲಸಿಕೆ ನೀಡುವ ಬಗ್ಗೆ ರೈತರಿಗೆ ಇಲ್ಲಿದೆ ಮುಖ್ಯ ಮಾಹಿತಿ

ಶಿವಮೊಗ್ಗ : ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ಶಿವಮೊಗ್ಗ ಜಿಲ್ಲೆಯಾದ್ಯಂತ ಜಾನುವಾರುಗಳಲ್ಲಿ ಕಂದು ರೋಗ ನಿಯಂತ್ರಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿರುತ್ತದೆ.

ಲಸಿಕಾ ಕಾರ್ಯಕ್ರಮದಡಿ 4 ರಿಂದ 8 ತಿಂಗಳ ಅರ್ಹ ಆಕಳು /ಎಮ್ಮೆಗಳ ಹೆಣ್ಣು ಕರುಗಳಿಗೆ ಲಸಿಕೆ ಹಾಕುವ ಗುರಿ ಹೊಂದಿದ್ದು, ಫೆ.

13 ರಿಂದ 28 ರವರೆಗೆ ಸಾಮೂಹಿಕ ಲಸಿಕಾ ಕಾರ್ಯಕ್ರಮವನ್ನು ಕೈಗೊಳ್ಳಲಾಗುವುದು. ಕಂದು ರೋಗವು ಪ್ರಾಣಿಜನ್ಯ ರೋಗವಾಗಿದ್ದು, ರಾಸುಗಳಲ್ಲಿ ಈ ರೋಗದಿಂದ ಗರ್ಭಧರಿಸಿದ ಹಸುಗಳು 6 ತಿಂಗಳ ನಂತರ ಕಂದು ಹಾಕಬಹುದು. ಅವುಗಳ ಗರ್ಭಸ್ರಾವದಿಂದ ಮತ್ತು ಹಸಿ ಹಾಲನ್ನು ಹಾಗೆಯೇ ಉಪಯೋಗಿಸುವುದರಿಂದ ರೋಗವು ಮನುಷ್ಯರಿಗೂ ಹರಡಬಹುದು. ಈ ರೋಗವು ಮನುಷ್ಯರಿಗೆ ಬಂದರೆ ಸಂತಾನೋತ್ಪತ್ತಿ ಶಕ್ತಿಯನ್ನು ಕಳೆದುಕೊಳ್ಳುತ್ತಾರೆ. ಅರ್ಹ ಕರುಗಳಿಗೆ ಲಸಿಕೆ ಹಾಕಿಸಿ, ಸಂಭವಿಸಬಹುದಾದ ಆರ್ಥಿಕ ನಷ್ಟ ತಪ್ಪಿಸಿ ನಿಮ್ಮ ಜಾನುವಾರುಗಳನ್ನು ರಕ್ಷಿಸಿಕೊಳ್ಳಲು ಕೋರಿದೆ.

ಲಸಿಕಾ ಕಾರ್ಯಕ್ರಮದ ವೇಳಾಪಟ್ಟಿಯನ್ನು ತಾಲ್ಲೂಕುವಾರು ಗ್ರಾಮವಾರು ತಯಾರಿಸಲಾಗಿದ್ದು, ಪಶುಪಾಲನಾ ಇಲಾಖೆಯ ಅಧಿಕಾರಿ/ಸಿಬ್ಬಂದಿಗಳನ್ನೊಳಗೊಂಡ ಲಸಿಕಾ ತಂಡಗಳು ವೇಳಾಪಟ್ಟಿಯಂತೆ ಆಯಾ ಗ್ರಾಮಗಳಿಗೆ ಬೇಟಿ ನೀಡಿ ಜಾನುವಾರುಗಳಿಗೆ ಉಚಿತವಾಗಿ ಲಸಿಕೆಯನ್ನು ಹಾಕಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಮೀಪದ ಪಶು ಚಿಕಿತ್ಸಾ ಸಂಸ್ಥೆಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ.ಶಿವಯೋಗಿ ಬಿ.ಯಲಿ ತಿಳಿಸಿದ್ದಾರೆ.