ರಷ್ಯಾದ ತೈಲ ಖರೀದಿ ಸಮರ್ಥಿಸಿದ ಭಾರತ

ರಷ್ಯಾದ ತೈಲ ಖರೀದಿ ಸಮರ್ಥಿಸಿದ ಭಾರತ

ವದೆಹಲಿ: ಪ್ರಾದೇಶಿಕ ಮತ್ತು ಜಾಗತಿಕ ಸಮಸ್ಯೆಗಳು, ಪರಸ್ಪರರ ಹಿತಾಸಕ್ತಿ ಹಾಗೂ ದ್ವಿಪಕ್ಷೀಯ ಸಹಕಾರ ಬಲಪಡಿಸುವ ಸಂಬಂಧ ಭಾರತ ಮತ್ತು ರಷ್ಯಾ ಮಂಗಳವಾರ ಮಾಸ್ಕೊದಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಿದವು.

ಭಾರತೀಯ ವಿದೇಶಾಂಗ ಸಚಿವ ಎಸ್‌.

ಜೈಶಂಕರ್‌ ಮತ್ತು ರಷ್ಯಾ ವಿದೇಶಾಂಗ ಸಚಿವ ಸೆರ್ಗಿ ಲಾವ್ರೊವ್‌ ಅವರು ಮಾತುಕತೆಯಲ್ಲಿ ಭಾಗಿಯಾಗಿದ್ದರು.

ಫೆಬ್ರುವರಿಯಲ್ಲಿ ರಷ್ಯಾ ಮತ್ತು ಉಕ್ರೇನ್‌ ಸಂಘರ್ಷ ಶುರುವಾದ ನಂತರ ಉಭಯ ಸಚಿವರು ಈಗಾಗಲೇ ನಾಲ್ಕು ಬಾರಿ ಪರಸ್ಪರ ಭೇಟಿಯಾಗಿ ಪರಸ್ಪರ ಮಾತುಕತೆ ನಡೆಸಿದ್ದರು.

'ಭಾರತ ಮತ್ತು ರಷ್ಯಾ ನಡುವಿನ ಹಿತಾಸಕ್ತಿಗಳ ಬಗ್ಗೆ ಸಹಜ ಚರ್ಚೆ ನಡೆಸಿದ್ದೇವೆ. ಅಸ್ಥಿರತೆಯ ಈ ಕಾಲದಲ್ಲಿ, ನಾವು ನಿಜವಾಗಿಯೂ ಜಾಗತಿಕ ಆರ್ಥಿಕತೆಯ ಸ್ಥಿರತೆಗೆ ನೆರವಾಗುವ ಒಳ್ಳೆಯ ಕೆಲಸ ಮಾಡುತ್ತಿದ್ದೇವೆ. ತೈಲ ಮತ್ತು ಅನಿಲ ಖರೀದಿಯಲ್ಲಿ ಮೂರನೇ ಅತಿದೊಡ್ಡ ಗ್ರಾಹಕ ಎನಿಸಿರುವ ನಮ್ಮ ದೇಶದ ಆದಾಯವು ಹೆಚ್ಚಿಲ್ಲದ ಕಾರಣ, ನಾವು ಕೈಗೆಟಕುವ ದರದಲ್ಲಿ ಇಂಧನ ಪಡೆಯಬೇಕಾಗಿದೆ. ಈ ಹಿನ್ನೆಲೆಯಲ್ಲಿ ರಷ್ಯಾ ಜತೆಗಿನ ಸಂಬಂಧ ಭಾರತಕ್ಕೆ ಪ್ರಯೋಜನಕಾರಿಯಾಗಿದೆ. ರಷ್ಯಾ ಜತೆಗೆ ನಮ್ಮ ಬಾಂಧವ್ಯವನ್ನು ಮುಂದುವರಿಸುತ್ತೇವೆ' ಎಂದು ಜೈಶಂಕರ್‌, ರಷ್ಯಾದಿಂದ ತೈಲ ಖರೀದಿ ಸಮರ್ಥಿಸಿಕೊಂಡರು.

'ಇದು ಯುದ್ಧ ಕಾಲವಲ್ಲ'ವೆಂದು ಪುಟಿನ್‌ ಅವರಿಗೆ ಮೋದಿ ಹೇಳಿದ್ದ ಕಿವಿ ಮಾತನ್ನು ನೆನಪಿಸಿದ ಅವರು, ಉಕ್ರೇನ್ ಮೇಲೆ ಆಗುತ್ತಿರುವ ಪರಿಣಾಮಗಳನ್ನು ಗಮನಿಸಿಯೇ ಉಭಯ ರಾಷ್ಟ್ರಗಳಿಗೂ ಮಾತುಕತೆಗೆ ಮರಳುವಂತೆ ಭಾರತ ಬಲವಾಗಿ ಒತ್ತಾಯಿಸುತ್ತಲೇ ಇದೆ' ಎಂದು ಎಸ್‌. ಜೈಶಂಕರ್‌ ಹೇಳಿರುವುದಾಗಿ 'ಎನ್‌ಡಿಟಿವಿ' ವರದಿ ಮಾಡಿದೆ.

ಉಕ್ರೇನ್‌ ಮೇಲಿನ ರಷ್ಯಾ ಆಕ್ರಮಣವನ್ನು ಭಾರತ ಈವರೆಗೆ ಖಂಡಿಸಿಲ್ಲ. ರಾಜತಾಂತ್ರಿಕತೆ ಮತ್ತು ಮಾತುಕತೆ ಮೂಲಕವೇ ಬಿಕ್ಕಟ್ಟು ಶಮನಕ್ಕೆ ಭಾರತ ಉಭಯತ್ರರನ್ನು ಒತ್ತಾಯಿಸುತ್ತಲೇ ಇದೆ.

ಪುಟಿನ್‌ ಜತೆ ಮಾತುಕತೆಗೆ ಝೆಲೆನ್‌ಸ್ಕಿ ಒಲವು
ಕೀವ್‌ (ಎಪಿ):
 ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರೊಂದಿಗೆ ಮಾತುಕತೆ ನಡೆಸಲು ನಿರಾಕರಿಸಿದ್ದ ಉಕ್ರೇನ್‌ ನಿಲುವಿನಲ್ಲಿ ಮಹತ್ವದ ಬದಲಾವಣೆಯಾಗಿದ್ದು, ಶಾಂತಿ ಮಾತುಕತೆ ಸಾಧ್ಯತೆಯತ್ತ ಸಾಗುವ ಸುಳಿವು ನೀಡಿದೆ.

ಅಮೆರಿಕದಲ್ಲಿ ನಡೆಯಲಿರುವ ಪ್ರಮುಖ ಚುನಾವಣೆಯ ಹಿನ್ನೆಲೆಯಲ್ಲಿ ಉಕ್ರೇನ್‌ ನಿಲುವು ಬದಲಿಸಿಕೊಂಡಿದ್ದು, ಪುಟಿನ್‌ ಜತೆಗೆ ಶಾಂತಿ ಮಾತುಕತೆ ನಡೆಸುವ ಸಾಧ್ಯತೆಯ ಬಗ್ಗೆ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಸುಳಿವು ನೀಡಿದ್ದಾರೆ.

ಸೋಮವಾರ ತಡವಾಗಿ ವಿಶ್ವ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಝೆಲೆನ್‌ಸ್ಕಿ ಅವರು 'ರಷ್ಯಾವನ್ನು ನಿಜವಾದ ಶಾಂತಿ ಮಾತುಕತೆಗಳಿಗೆ ಮರಳುವಂತೆ ಒತ್ತಡ ಹೇರಬೇಕು' ಎಂದು ಒತ್ತಾಯಿಸಿದರು.

ಉಕ್ರೇನ್‌ನ ಎಲ್ಲ ಆಕ್ರಮಿತ ಭೂಮಿಯನ್ನು ಹಿಂದಿರುಗಿಸಬೇಕು, ಯುದ್ಧದಿಂದ ಉಂಟಾದ ಹಾನಿ ಮತ್ತು ಯುದ್ಧ ಅಪರಾಧಗಳ ವಿಚಾರಣೆ ನಡೆಸಿ ಸೂಕ್ತ ಪರಿಹಾರ ನೀಡಬೇಕು ಎಂದು ಝೆಲೆನ್‌ಸ್ಕಿ ಅವರು ಪುಟಿನ್‌ ಜತೆಗಿನ ಶಾಂತಿ ಮಾತುಕತೆಗೆ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.

ರಿಪಬ್ಲಿಕನ್‌ ಪಕ್ಷದ ಸಂಸದರು ಹೆಚ್ಚಿನ ಸಂಖ್ಯೆಯಲ್ಲಿ ಆರಿಸಿ ಬಂದರೆ ಬೈಡನ್‌ ಸರ್ಕಾರ ಉಕ್ರೇನ್‌ಗೆ ಮಿಲಿಟರಿ ಮತ್ತು ಆರ್ಥಿಕ ನೆರವಿನ ಪ್ಯಾಕೇಜ್‌ ಮುಂದುವರಿಸುವುದು ಕಷ್ಟವಾಗಬಹುದು ಎನ್ನುವ ಕಾರಣಕ್ಕೆ ಝೆಲೆನ್‌ಸ್ಕಿ ಅವರು, ಪುಟಿನ್‌ ಜತೆಗೆ ಮಾತುಕತೆ ಅಸಾಧ್ಯವೆಂದಿದ್ದ ರಾಗವನ್ನು ಈಗ ಬದಲಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ರಷ್ಯಾದ ವಿದೇಶಾಂಗ ಉಪ ಸಚಿವ ಆಂಡ್ರೀ ರುದೆನ್ಕೊ ಅವರು, ಮಾತುಕತೆಗೆ ಪುನಾ ಮರಳಲು ರಷ್ಯಾ ಯಾವುದೇ ಷರತ್ತುಗಳನ್ನು ಮುಂದಿಟ್ಟಿಲ್ಲ. ಆದರೆ, ಮಾತುಕತೆ ನಡೆಸಲು ಉಕ್ರೇನ್‌ಗೆ ಇಚ್ಛಾಶಕ್ತಿಯ ಕೊರತೆ ಇದೆ ಎಂದು ಆರೋಪಿಸಿದರು.