ಮೂವರು ಬಿ.ಟೆಕ್ ವಿದ್ಯಾರ್ಥಿಗಳಿಗೆ ಕಾರು ಡಿಕ್ಕಿ: ಕೋಮಾಗೆ ಜಾರಿದ ಓರ್ವ ವಿದ್ಯಾರ್ಥಿನಿ, ಪಾಲಕರ ಆಕ್ರಂದನ
ನವದೆಹಲಿ: ಅತಿ ವೇಗದಿಂದ ಬಂದ ಕಾರು ಮೂವರು ಬಿ.ಟೆಕ್ ವಿದ್ಯಾರ್ಥಿಗಳಿಗೆ ಡಿಕ್ಕಿ ಹೊಡೆದಿರುವ ಘಟನೆ ಗ್ರೇಟರ್ ನೋಯ್ಡಾದ ಏರಡನೇ ಏರಿಯಾದಲ್ಲಿ ನಡೆದಿದೆ. ಮೂವರು ವಿದ್ಯಾರ್ಥಿಗಳಲ್ಲಿ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದರೆ, ಇನ್ನೊರ್ವ ವಿದ್ಯಾರ್ಥಿನಿಗೆ ಗಂಭೀರ ಗಾಯಗಳಾಗಿದ್ದು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾಳೆ.
ವಿದ್ಯಾರ್ಥಿನಿ ಸ್ವೀಟಿ ಕುಮಾರಿಗೆ ಗಂಭೀರ ಗಾಯಗಳಾಗಿವೆ. ಆಕೆಯ ತಲೆ ಮತ್ತು ಕಾಲುಗಳಿಗೆ ಜೋರಾಗಿ ಪೆಟ್ಟು ಬಿದ್ದಿದ್ದು, ಕೋಮಾಗೆ ಜಾರಿದ್ದಾಳೆ. ಆಸ್ಪತ್ರೆಯ ಐಸಿಯುನಲ್ಲಿ ಆಕೆಗೆ ಚಿಕಿತ್ಸೆ ಮುಂದುವರಿದಿದೆ.
ಸ್ವೀಟಿ ಕುಟುಂಬವು ಬೀಟಾ-2 ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.
ಸಂತ್ರಸ್ತೆ ಸ್ವೀಟಿ ಕುಮಾರಿ ಅವರ ಸಹೋದರ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದು, ಅದರ ಪ್ರಕಾರ ಸ್ವೀಟಿ ಕುಮಾರಿ ಅವರು ಗ್ರೇಟರ್ ನೋಯ್ಡಾದ GNIOT ಕಾಲೇಜಿನ ವಿದ್ಯಾರ್ಥಿನಿ. ಗ್ರೇಟರ್ ನೋಯ್ಡಾದ ಕೈಲಾಶ್ ಆಸ್ಪತ್ರೆಯಲ್ಲಿ ಆಕೆ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ.
ನಾನು ಸಂತೋಷ್ ಕುಮಾರ್. ನನ್ನ ಸಹೋದರಿ ಸ್ವೀಟಿ ಕುಮಾರಿ ಗ್ರೇಟರ್ ನೋಯ್ಡಾದ GNIOT ಕಾಲೇಜಿನ ವಿದ್ಯಾರ್ಥಿನಿ. ಆಕೆ ದೊಡ್ಡ ರಸ್ತೆ ಅಪಘಾತಕ್ಕೆ ಒಳಗಾದ ಕಾರಣಕ್ಕಾಗಿ ನಾನು ಹಣವನ್ನು ಸಂಗ್ರಹಿಸುತ್ತಿದ್ದೇನೆ. ಆಕೆ ಸಂಪೂರ್ಣವಾಗಿ ಚೇತರಿಸಿಕೊಳ್ಳುವವರೆಗೆ ಆಸ್ಪತ್ರೆಯಲ್ಲಿರಲು ವೈದ್ಯರು ಸಲಹೆ ನೀಡಿದ್ದಾರೆ. ಆಕೆ ಪ್ರಸ್ತುತ ಗ್ರೇಟರ್ ನೋಯ್ಡಾದ ಕೈಲಾಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾವು 1 ಲಕ್ಷ ರೂ. ಖರ್ಚು ಮಾಡಿದ್ದೇವೆ. ಹೆಚ್ಚಿನ ಚಿಕಿತ್ಸೆಗೆ 10,00,000 ರೂ. ವೆಚ್ಚವಾಗುತ್ತದೆ ಮತ್ತು ಚಿಕಿತ್ಸೆಯನ್ನು ಮುಂದುವರಿಸಲು ನಮಗೆ ಹಣದ ಅಗತ್ಯವಿದೆ ಎಂದು ಸಂತೋಷ್ ಕುಮಾರ್ ಅವರು ಸಾಮಾಜಿಕ ಜಾಲತಾಣದಲ್ಲಿ ಸಹಾಯ ಕೋರಿ ಪೋಸ್ಟ್ ಮಾಡಿದ್ದಾರೆ.
ಗ್ರೇಟರ್ ನೋಯ್ಡಾ ವೆಸ್ಟ್‌ನಲ್ಲಿ ನಡೆದ ಅಪಘಾತದಲ್ಲಿ ಜೋಮ್ಯಾಟೊ ಡೆಲಿವರಿ ಕೆಲಸಗಾರ ಸಾವನ್ನಪ್ಪಿದ ಕೆಲವೇ ದಿನಗಳಲ್ಲಿ ಈ ಘಟನೆ ನಡೆದಿದೆ. ಹಿಟ್ ಅಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಕಾನೂನು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಇಷ್ಟೇ ಇಲ್ಲದೆ, ಕೆಲವೇ ದಿನಗಳ ಹಿಂದೆ ದೆಹಲಿಯಲ್ಲಿ ಕಾರೊಂದು ಸ್ಕೂಟಿಗೆ ಡಿಕ್ಕಿ ಹೊಡೆದು 13 ಕಿಲೋಮೀಟರ್ ವರೆಗೆ ಎಳೆದೊಯ್ದ ಪರಿಣಾಮ 20 ವರ್ಷದ ಮಹಿಳೆಯೊಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಕಾರಿನಲ್ಲಿದ್ದ ಐವರು ಪಾನಮತ್ತರಾಗಿದ್ದರು ಎಂದು ತಿಳಿದುಬಂದಿದೆ. (ಏಜೆನ್ಸೀಸ್)