ಬುಡಕಟ್ಟು ಮಹಿಳೆ ಡಾ.ಜಿ.ಕೆ.ಪ್ರೇಮ'ಗೆ 2023ನೇ ಸಾಲಿನ 'ಅಕ್ಷರದವ್ವ ಸಾವಿತ್ರಿ ಬಾಯಿ ಪುಲೆ ಪ್ರಶಸ್ತಿ'

ಬುಡಕಟ್ಟು ಮಹಿಳೆ ಡಾ.ಜಿ.ಕೆ.ಪ್ರೇಮ'ಗೆ 2023ನೇ ಸಾಲಿನ 'ಅಕ್ಷರದವ್ವ ಸಾವಿತ್ರಿ ಬಾಯಿ ಪುಲೆ ಪ್ರಶಸ್ತಿ'

ಶಿವಮೊಗ್ಗ: ಬೆಂಗಳೂರಿನ ದಲಿತ ವಿದ್ಯಾರ್ಥಿ ರಾಜ್ಯ ಘಟಕದಿಂದ ಕೊಡ ಮಾಡುವಂತ ಅಕ್ಷರದವ್ವ ಸಾವಿತ್ರಿ ಬಾಯಿ ಪುಲೆ 2023ರ ಪ್ರಶಸ್ತಿಯನ್ನು ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಉಪನ್ಯಾಸಕಿ ಡಾ.ಜಿ.ಕೆ ಪ್ರೇಮ ಅವರಿಗೆ ನೀಡಲಾಗಿದೆ.

ಪ್ರತಿ ವರ್ಷ ಬೆಂಗಳೂರಿನ ದಲಿತ ವಿದ್ಯಾರ್ಥಿ ರಾಜ್ಯ ಘಟಕದಿಂದ ಶೈಕ್ಷಣಿಕ ಹಾಗೂ ಸಮಾಜಮುಖಿ ಸೇವೆ ಸಲ್ಲಿಸುತ್ತಿರುವಂತ ಸಾಧಕರಿಗೆ ಅಕ್ಷರದವ್ವ ಸಾವಿತ್ರಿಬಾಯಿ ಪುಲೆ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಗುತ್ತಿದೆ.

ಪ್ರಶಸ್ತಿ ಪುರಸ್ಕೃತ ಡಾ.ಜಿ.ಕೆ ಪ್ರೇಮ ಪರಿಚಯ

ಡಾ.ಜಿ.ಕೆ ಪ್ರೇಮ ಅವರು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಕಾಡುಗೊಲ್ಲ ಸಮುದಾಯದವರಾಗಿದ್ದಾರೆ. ಅವರ ಸಮುದಾಯದಲ್ಲಿ ಹೆಣ್ಣುಮಕ್ಕಳಿಗೆ ಮುಜುಗರತರಿಸುತ್ತಿದ್ದ ಹುಟ್ಟು ಮುಟ್ಟು ಸೂತಕ ಅಚರಣೆ ವಿರುದ್ಧ ಹೋರಾಡಿ, ಹೆಣ್ಣು ಮಕ್ಕಳು ಹಟ್ಟಿಯ ಒಳಗೆ ಇರಲು ಅಕಾಶ ಕಲ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದಷ್ಟೇ ಅಲ್ಲದೇ ಕರ್ನಾಟಕದ ಇತರೆ ಹಟ್ಟಿಗಳಲ್ಲಿ ಇನ್ನೂ ಜೀವಂತವಾಗಿರುವ ಇಂತಹ ಅಚರಣೆಗಳ ವಿರುದ್ಧ ಅರಿವು ಮೂಡಿಸಲು ಶ್ರಮಿಸಿದ್ದಾರೆ. ಸುಮಾರು 14 ವರ್ಷಗಳ ಸೇವಾನುಭವ ಹೊಂದಿರುವ ಇವರು, ಪ್ರಸ್ತುತ ಶಿವಮೊಗ್ಗ ಸದ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದಾರೆ. ಸೇವಾ ಅವಧಿಯಲ್ಲಿ ಅನೇಕ ಅಸಹಾಯಕ ಮತ್ತು ಬಡ ವಿದ್ಯಾರ್ಥಿಗಳಿಗೆ ಬೇಕಾದ ಸಹಾಯ ಸಹಕಾರ ಮಾಡುತ್ತಾ ಬಂದಿದ್ದಾರೆ.

2011ರಲ್ಲಿ ಕುವೆಂಪು ವಿಶ್ವವಿದ್ಯಾಲಯದಲ್ಲಿ 'ಕಾಡುಗೊಲ್ಲ ಬುಡಕಟ್ಟು ಸಾಹಿತ್ಯ, ಸಂಸ್ಕೃತಿಯಲ್ಲಿ ಮಹಿಳೆ' ಎಂಬ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಲಭಿಸಿದೆ.

ಸಂಶೋಧಾ ಪುಸ್ತಕ ಜನ್ನಿಗೆ ಕೃತಿ ಪ್ರಕಟವಾಗಿದೆ. ಇವರ ಅನೇಕ ಲೇಖನಗಳು ಮುದ್ರಿತ ರೂಪದಲ್ಲಿವೆ. ಎಫ್ ಓ ಎಸ್ ಎಸ್ ಐ ಎಸ್ ರಾಷ್ಟ್ರಮಟ್ಟದ ಸಮ್ಮೇಳನದಲ್ಲಿ ಮಹಿಳೆಯರ ಬಗ್ಗೆ ಲೇಖನ ಮಂಡಿಸಿದ್ದಾರೆ. ಬುಡಕಟ್ಟು ಸಮುದಾಯಗಳು ಮತ್ತು ಮಹಿಳೆಯರ ಶೋಷಣೆಯ ವಿರುದ್ಧ ಹೋರಾಡುತ್ತಿರುವ ಇವರಿಗೆ 2014ರಲ್ಲಿ ಬೆಂಗಳೂರಿನ ಸ್ವರಾಜ್ ಸಂಸ್ಥೆಯಿಂದ 'ನೆಲತಾಯಿ ಪ್ರಶಸ್ತಿ' ನೀಡಿ ಗೌರವಿಸಲಾಗಿದೆ. ಇವರ ಶೈಕ್ಷಣಿಕ ಸೇವೆ ಜೊತೆಗೆ ಸಮಾಜಮುಖಿ ಕಾರ್ಯ ಹಾಗೂ ಸಾಹಿತ್ಯ ಸೇವೆಯನ್ನು ಪರಿಗಣಿಸಿ ದಲಿತ ವಿದ್ಯಾರ್ಥಿ ಪರಿಷತ್ ಕೊಡಮಾಡುವ 2023ನೇ ಸಾಲಿನ 'ಅಕ್ಷರದವ್ವ ಸಾವಿತ್ರಿ ಬಾಯಿ ಪುಲೆ ಪ್ರಶಸ್ತಿ'ಯನ್ನು, ವಿಜಯಪುರದಲ್ಲಿ ನಡೆದಂತ ಕಾರ್ಯಕ್ರಮದಲ್ಲಿ ನೀಡಿ ಗೌರವಿಸಲಾಗಿದೆ.

ವರದಿ: ವಸಂತ ಬಿ ಈಶ್ವರಗೆರೆ