ಕಡು ಬಡತನದಲ್ಲೂ ಅರಳಿದ ಪ್ರತಿಭೆ: ಸೆಕ್ಯೂರಿಟಿ ಗಾರ್ಡ್ ಪುತ್ರ ಈಗ ಐಆರ್‌ಎಸ್‌ ಅಧಿಕಾರಿ

ಕಡು ಬಡತನದಲ್ಲೂ ಅರಳಿದ ಪ್ರತಿಭೆ: ಸೆಕ್ಯೂರಿಟಿ ಗಾರ್ಡ್ ಪುತ್ರ ಈಗ ಐಆರ್‌ಎಸ್‌ ಅಧಿಕಾರಿ

ಪ್ರತಿಷ್ಠಿತ ಕೇಂದ್ರ ಲೋಕ ಸೇವಾ ಆಯೋಗದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ನಾಗರಿಕ ಸೇವಕರಾಗುವ ಕನಸನ್ನು ಬಹುಶಃ ದೇಶದ ಪ್ರತಿಯೊಬ್ಬ ಯುವಕ/ಯುವತಿ ತಮ್ಮ ಬದುಕಲ್ಲಿ ಒಮ್ಮೆಯಾದರೂ ಕಂಡಿರುತ್ತಾರೆ. ಆದರೆ ತೀರಾ ಕೆಲವರಿಗೆ ಮಾತ್ರವೇ ಈ ಕನಸನ್ನು ಸಾಕಾರ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ಉತ್ತರ ಪ್ರದೇಶದ ನಿಗೋ ಜಿಲ್ಲೆಯ ಶೇಯ್ಖ್‌ಪುರ ಎಂಬ ಪುಟ್ಟ ಗ್ರಾಮದ ಕುಲ್ದೀಪ್ ದ್ವಿವೇದಿ 2015ರ ನಾಗರಿಕ ಸೇವಾ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 242ನೇ ರ‍್ಯಾಂಕ್ ಪಡೆದು ಐಆರ್‌ಎಸ್‌ ಅಧಿಕಾರಿಯಾಗಿದ್ದಾರೆ.

ಬಾಲ್ಯದಿಂದಲೂ ಭಾರೀ ಬಡತನದಲ್ಲಿ ಬೆಳೆದ ಕುಲ್ದೀಪ್ ತಮ್ಮ ಕನಸುಗಳಿಗೆ ಬಡತನ ಅಡ್ಡಿಯಾಗದಂತೆ ನೋಡಿಕೊಂಡಿದ್ದಾರೆ.

ಕುಲ್ದೀಪ್ ತಂದೆ ಸೂರ್ಯಕಾಂತ್‌ ದ್ವಿವೇದಿ ಲಖನೌ ವಿಶ್ವವಿದ್ಯಾಲಯದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಕುಟುಂಬದ ಏಕೈಕ ದುಡಿಯುವ ವ್ಯಕ್ತಿಯಾಗಿದ್ದ ಅವರು ತಿಂಗಳಿಗೆ 1,100 ರೂ.ಗಳನ್ನು ಸಂಪಾದಿಸುತ್ತಿದ್ದರು. ಮಕ್ಕಳನ್ನು ಓದಿಸಲೆಂದು ಸೂರ್ಯಕಾಂತ್‌ ಬೆಳಿಗ್ಗೆ ಸಹ ಕೆಲಸ ಮಾಡಲು ಆರಂಭಿಸಿದ್ದರು.

ಇವರ ನಾಲ್ವರು ಮಕ್ಕಳ ಪೈಕಿ ಕುಲ್ದೀಪ್ ಓದುವುದರಲ್ಲಿ ಚುರುಕಾಗಿದ್ದರು. 2009ರಲ್ಲಿ ಅಲಹಾಬಾದ್ ವಿವಿಯಲ್ಲಿ ಪದವಿ ಪೂರೈಸಿದ ಕುಲ್ದೀಪ್, 2011ರಲ್ಲಿ ಸ್ನಾತಕೋತ್ತರ ವ್ಯಾಸಂಗ ಮುಗಿಸಿ ಯುಪಿಎಸ್ಸಿ ಪರೀಕ್ಷೆಗಳಿಗೆ ತಯಾರಿ ಆರಂಭಿಸಿದರು. ಆ ವೇಳೆ ಕೈಯಲ್ಲಿ ಮೊಬೈಲ್ ಫೋನ್ ಸಹ ಇಲ್ಲದ ಕಾರಣ ಕುಲ್ದೀಪ್ ತಮ್ಮ ಕುಟುಂಬಸ್ಥರೊಂದಿಗೆ ಪಿಸಿಓ ಮೂಲಕ ಸಂಪರ್ಕ ಸಾಧಿಸುತ್ತಿದ್ದರು.

2015ರಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಕಾಣಿಸಿಕೊಂಡ ಕುಲ್ದೀಪ್ ತಮ್ಮ ಮೊದಲ ಯತ್ನದಲ್ಲೇ 242ನೇ ರ‍್ಯಾಂಕ್ ಪಡೆದು ಐಆರ್‌ಎಸ್ ಹುದ್ದೆ ಆರಿಸಿಕೊಂಡರು. ಆಗಸ್ಟ್‌ 2016ರಲ್ಲಿ ಐಆರ್‌ಎಸ್ ತರಬೇತಿ ಪಡೆದ ಕುಲ್ದೀಪ್ ಯಾವುದೇ ಕೋಚಿಂಗ್ ಇಲ್ಲದೇ ತಮ್ಮದೇ ಸ್ವಂತ ಪರಿಶ್ರಮದಿಂದ ಈ ಮಟ್ಟಕ್ಕೆ ಏರಿದ್ದಾರೆ.