ವಿಮಾ ಕಂಪೆನಿಗೆ ಬೆಳೆ ವಿಮೆ ಪ್ರಿಮಿಯಂ ಹಣ ವರ್ಗಾಯಿಸದ ಬ್ಯಾಂಕಿಗೆ 50 ಸಾವಿರ ರೂ . ದಂಡ

ವಿಮಾ ಕಂಪೆನಿಗೆ ಬೆಳೆ ವಿಮೆ ಪ್ರಿಮಿಯಂ ಹಣ ವರ್ಗಾಯಿಸದ ಬ್ಯಾಂಕಿಗೆ 50 ಸಾವಿರ ರೂ . ದಂಡ

ಧಾರವಾಡ : ರೈತರೊಬ್ಬರು ತಮ್ಮ ಮಾವಿನ ಬೆಳೆಗೆ ವಿಮಾ ಸೌಲಭ್ಯ ಪಡೆಯಲು ಪಾವತಿಸಿದ್ದ ಪ್ರಿಮಿಯಂ ಹಣವನ್ನು ಅಗತ್ಯ ವಿವರಗಳೊಂದಿಗೆ ವಿಮಾ ಕಂಪೆನಿಗೆ ವರ್ಗಾಯಿಸದೇ ನಿರ್ಲಕ್ಷ್ಯ ತೋರಿದ ಕಲಘಟಗಿಯ ಬ್ಯಾಂಕ್ ಆಫ್ ಬರೋಡಾ ಶಾಖೆಗೆ ಇಲ್ಲಿನ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು 50 ಸಾವಿರ ರೂ.ದಂಡ ವಿಧಿಸಿದೆ . ಕಲಘಟಗಿ ತಾಲೂಕು ಯಲವಾಳ ಗ್ರಾಮದ ಕೃಷಿಕ ಬಸಪ್ಪ ಚೆನ್ನಪ್ಪ ಕಾಮಧೇನು ಎಂಬುವರು 2018-19ನೇ ಸಾಲಿನಲ್ಲಿ ತಮ್ಮ ಮಾವಿನ ಬೆಳೆಗೆ ವಿಮಾ ಸೌಲಭ್ಯ ಬಯಸಿ 3,399 ರೂ.ಪ್ರಿಮಿಯಂನ್ನು ಕಲಘಟಗಿಯ ಬ್ಯಾಂಕ್ ಆಫ್ ಬರೋಡಾದಲ್ಲಿ ಪಾವತಿಸಿದ್ದರು . ಬ್ಯಾಂಕು ವಿಮಾ ಕಂಪನಿಗೆ ಹಣದೊಂದಿಗೆ ರೈತನ ವಿವರಗಳನ್ನು ಕಳುಹಿಸದೇ ನಿರ್ಲಕ್ಷ ಹಾಗೂ ಸೇವಾ ನ್ಯೂನ್ಯತೆ ಎಸಗಿದೆ ಎಂದು ಆಯೋಗದಲ್ಲಿ ದೂರು ದಾಖಲಿಸಿದ್ದರು . ವಿಚಾರಣೆ ನಡೆಸಿದ ಆಯೋಗವು ಕಲಘಟಗಿಯ ಬ್ಯಾಂಕ್ ಆಫ್ ಬರೋಡಾ ಶಾಖೆಗರ 40 ಸಾವಿರ ರೂ . ದಂಡ ಮತ್ತು ಪರಿಹಾರ ಹಾಗೂ ಪ್ರಕರಣ ನ್ಯಾಯಾಲಯದ ಖರ್ಚಿಗೆ 10 ಸಾವಿರ ರೂ.ಗಳನ್ನು ಪಾವತಿಸುವಂತೆ ಆದೇಶಿಸಿದೆ . ಆಯೋಗದ ಅಧ್ಯಕ್ಷರಾದ ಈಶಪ್ಪ ಭೂತೆ ಸದಸ್ಯರಾದ ವಿ.ಅ. ಬೋಳಶೆಟ್ಟಿ ಮತ್ತು ಪಿ.ಸಿ.ಹಿರೇಮಠ ಈ ತೀರ್ಪು ನೀಡಿದ್ದಾರೆ .