ಮಹಿಳೆಯರೇ ಎಚ್ಚರವಹಿಸಿ: ಸೀರೆ ಜೊತೆ ಬೈಕ್ ಚಕ್ರಕ್ಕೆ ಸಿಲುಕಿದ ಮಹಿಳೆಯ ಕಾಲು

ಚಿಕ್ಕಮಗಳೂರು: ಬೈಕ್ ಹಿಂಬದಿ ಚಕ್ರಕ್ಕೆ ಮಹಿಳೆಯೊಬ್ಬರ ಕಾಲು ಸಿಲುಕಿ ನರಳಾಡಿದ ಘಟನೆ ತರೀಕೆರೆ ಸಮೀಪದ ಇಟಗಿ ಗ್ರಾಮದಲ್ಲಿ ಇತ್ತೀಚೆಗೆ ನಡೆದಿದ್ದು, ಈ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದ್ದು ಬೈಕ್ ಹಿಂಬದಿ ಕುಳಿತುಕೊಳ್ಳುವ ಮಹಿಳೆಯರೇ ಎಚ್ಚರ ಎಂಬ ಸಂದೇಶ ಹಾಕಲಾಗಿದೆ.
ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಇಟಗಿ ಗ್ರಾಮದಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಹಿಂಬದಿ ಕುಳಿತ್ತಿದ್ದ ಮಹಿಳೆಯ ಸೀರೆ ಬೈಕ್ ಚಕ್ರಕ್ಕೆ ಸಿಲುಕಿದೆ. ಸೀರೆಯೊಂದಿಗೆ ಕಾಲು ಚಕ್ರಕ್ಕೆ ಸಿಲುಕಿದ್ದು, ಮಹಿಳೆ ಗಂಟೆಗಟ್ಟಲೇ ಯಾತನೆ ಅನುಭವಿಸಿದ್ದಾರೆ. ಇಟಗಿ ಗ್ರಾಮದ ಮಹಿಳೆ ಯಶೋಧಾಬಾಯಿ ಎಂಬವರ ಕಾಲು ಬೈಕ್ ಚಕ್ರಕ್ಕೆ ಸಿಲುಕಿಕೊಂಡಿದ್ದು, ಕಾಲು ತೆಗೆಯಲು ಸಾಧ್ಯವಾಗದೆ ಕೊನೆಗೆ ಬೈಕ್ ಮ್ಯಾಕಾನಿಕ್ ಸ್ಥಳಕ್ಕೆ ಕರೆಸಿಕೊಂಡು ಬೈಕ್‌ನ ಗೇರ್‌ಬಾಕ್ಸ್ ಬಿಚ್ಚಿ, ಚೈನ್ ಕತ್ತರಿಸಿ ಕಾಲು ಹೊರತಗೆಯಲಾಗಿದೆ.ಮಹಿಳೆ ಕಾಲಿಗೆ ಗಂಭೀರ ಗಾಯವಾಗಿದ್ದು, ಶೀಘ್ರವೇ ಶಿವಮೊಗ್ಗ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ಯಶೋಧಾಬಾಯಿ ಚೇತರಿಸಿಕೊಂಡಿದ್ದಾರೆ. ಸ್ಥಳದಲ್ಲಿದ್ದ ಯಾರೋ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಈ ವಿಡಿಯೋ ಬಾರೀ ವೈರಲ್ ಆಗಿದೆ. ಹಾಗೇ ಬೈಕ್‌ನಲ್ಲಿ ಮಹಿಳೆಯರು ಸವಾರಿ ಮಾಡುವಾಗ ಎಚ್ಚರ ವಹಿಸಬೇಕೆಂಬ ಸಂದೇಶಗಳು ಸಾರ್ವಜನಿಕರಿಂದ ವಲಯದಿಂದ ಕೇಳಿ ಬರುತ್ತಿದೆ.