ಕುನೊ ಉದ್ಯಾನದಲ್ಲಿ ಚಿರತೆಗಳ ಸಂಖ್ಯೆ ಅಧಿಕ: ಚೀತಾಗಳಿಗೆ ಆತಂಕ

ಕುನೊ ಉದ್ಯಾನದಲ್ಲಿ ಚಿರತೆಗಳ ಸಂಖ್ಯೆ ಅಧಿಕ: ಚೀತಾಗಳಿಗೆ ಆತಂಕ

ಭೋಪಾಲ್‌: 'ನಮೀಬಿಯಾದಿಂದ ತಂದು ಬಿಡಲಾಗಿರುವ ಎಂಟು ಚೀತಾಗಳು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ಒಟ್ಟು 50 ದಿನಗಳನ್ನು ಪೂರೈಸಿವೆ. ಕುನೊ ಉದ್ಯಾನ ಪ್ರದೇಶದಲ್ಲಿ ಚಿರತೆಗಳ ಸಂಖ್ಯೆ ಹೆಚ್ಚಿದ್ದು, ಇದು ಈ ಚೀತಾಗಳ ಪಾಲಿಗೆ ಆತಂಕದ ವಿಷಯವಾಗಿದೆ' ಎಂದು ದಕ್ಷಿಣ ಆಫ್ರಿಕಾದ ಪ್ರಾಣಿ ಸಂರಕ್ಷಕ ವಿನ್ಸೆಂಟ್‌ ವಾನ್‌ ಡರ್‌ ಮರ್ವ್‌ ಹೇಳಿದ್ದಾರೆ.

'ಮಾಂಸಹಾರಿಯಾಗಿರುವ ಉಭಯ ಪ್ರಾಣಿಗಳು ಪರಸ್ಪರ ಸಂಘರ್ಷಕ್ಕೆ ಇಳಿಯುವ ಸಾಧ್ಯತೆ ಹೆಚ್ಚಿರುತ್ತದೆ. ಇವು ಸಹಬಾಳ್ವೆ ನಡೆಸಿರುವ ಹಲವು ನಿದರ್ಶನಗಳು ಇತಿಹಾಸದಿಂದ ತಿಳಿದುಬರುತ್ತದೆ. ಇದು ಸಮಾಧಾನಕರ ವಿಷಯವಾಗಿದೆ' ಎಂದು ಅವರು ತಿಳಿಸಿದ್ದಾರೆ.

'ವಯಸ್ಕ ಚೀತಾಗಳು 40 ರಿಂದ 50 ಕೆ.ಜಿ ತೂಕ ಹೊಂದಿರುತ್ತವೆ. ಆದರೆ ಚಿರತೆಗಳು 50 ರಿಂದ 60 ಕೆ.ಜಿ ತೂಕವಿರುತ್ತವೆ. ಅತಿ ವೇಗವಾಗಿ ಓಡುವ ವಯಸ್ಕ ಚೀತಾಗಳು ಚಿರತೆ ದಾಳಿಯಿಂದ ತಪ್ಪಿಸಿಕೊಳ್ಳಬಲ್ಲವು. ಆದರೆ ಅವುಗಳ ಮರಿಗಳು ಚಿರತೆಗಳ ದಾಳಿಗೆ ಸಿಲುಕಿ ಸಾಯುವ ಅಪಾಯ ಹೆಚ್ಚಿರುತ್ತದೆ' ಎಂದು ಹೇಳಿದ್ದಾರೆ.

ವಿನ್ಸೆಂಟ್‌ ಅವರು ತಮ್ಮ ದೇಶದಿಂದ ಒಟ್ಟು 12 ಚೀತಾಗಳನ್ನು ಭಾರತಕ್ಕೆ ತಂದು ಬಿಡುವ ಜವಾಬ್ದಾರಿ ಹೊತ್ತಿದ್ದಾರೆ.