ಬಿಜೆಪಿಯದ್ದು ಜನಸಂಕಲ್ಪ ಅಲ್ಲ, ಜನಸಂಕಷ್ಟ ಯಾತ್ರೆ' : ಮಂಗಳೂರಿನಲ್ಲಿ ಯು.ಟಿ. ಖಾದರ್ ವ್ಯಂಗ್ಯ
ಮಂಗಳೂರು : ಬಿಜೆಪಿಯದ್ದು ಜನಸಂಕಲ್ಪ ಯಾತ್ರೆ ಅಲ್ಲ, ಜನ ಸಂಕಷ್ಟ ಯಾತ್ರೆ ಎಂಬುದಾಗಿ ಕರ್ನಾಟಕ ವಿಧಾನಸಭೆಯ ಕಾಂಗ್ರೆಸ್ ಉಪನಾಯಕ ಯು. ಟಿ. ಖಾದರ್ ವ್ಯಂಗ್ಯವಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ರಾಜ್ಯದ ಜನತೆಗೆ ವಿವಿಧ ಭರವಸೆಗಳನ್ನು ನೀಡಿದ್ದ ಬಿಜೆಪಿ ಈಗ ಅದನ್ನು ಈಡೇರಿಸುವಲ್ಲಿ ವಿಫಲವಾಗಿದೆ. ಭ್ರಷ್ಟಾಚಾರದಂತಹ ಆರೋಪಗಳಿಂದ ಜನರ ಗಮನ ಬೇರೆಡೆ ಸೆಳೆಯುವ ತಂತ್ರವಾಗಿ ಬಿಜೆಪಿ ಇಂತಹ ಯಾತ್ರೆಗಳನ್ನು ಹಮ್ಮಿಕೊಳ್ಳುತ್ತಿದೆ ಎಂದರು.
ಆಪರೇಷನ್ ಕಮಲದ ಮೂಲಕ ಬಿಜೆಪಿ ಅಧಿಕಾರಕ್ಕೇರಿದೆಯೇ ಹೊರತು ಬಹುಮತದಿಂದ ಜನರು ಆರಿಸಿ ಕಳುಹಿಸಿದ್ದಲ್ಲ. ಡಬಲ್ ಎಂಜಿನ್ ಸರ್ಕಾರ ಎಂದು ಹೇಳಿಕೊಂಡ ಬಿಜೆಪಿ ಈಗ ಮೌನಿಗಳ ಬಳಿ ಇದೆ ಎಂದು ವ್ಯಂಗ್ಯವಾಡಿದರು.
ನನ್ನ ಕ್ಷೇತ್ರದ ಪ್ರಮುಖ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಲು ಸರ್ಕಾರ ಕೇವಲ 5 ಲಕ್ಷ ರೂ.ಗಳನ್ನು ಮಂಜೂರು ಮಾಡಿದೆ. ದಕ್ಷಿಣ ಕನ್ನಡಕ್ಕೆ ಈ ಸರ್ಕಾರದ ಕೊಡುಗೆ ಏನಿದೆ ಎಂದು ಪ್ರಶ್ನಿಸಿದ ಅವರು, ಸಾಗರಮಾಲಾ ಯೋಜನೆ ಘೋಷಣೆ ಮಾಡಿದರೂ ಕಾಮಗಾರಿ ಆರಂಭಗೊಂಡಿಲ್ಲ ಎಂದು ಕಿಡಿ ಕಾರಿದರು.
ಜಿಲ್ಲೆಯ ಮೀನುಗಾರರಿಗೆ ದ್ರೋಹ ಮಾಡಿರುವ ಬಿಜೆಪಿ, ಅವರ ಮುಗ್ದತೆಯನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಂಡಿದೆ. ಹಲವಾರು ಕಾರ್ಯಕ್ರಮಗಳನ್ನು ಮೀನುಗಾರರಿಗಾಗಿ ಸರ್ಕಾರ ಘೋಷಿಸಿದ್ದರೂ, ಯಾವೊಂದೂ ಸಾಕರಾವಾಗಿಲ್ಲ. ಒಂದು ಲಕ್ಷ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ಕಾರ್ಡ್ ಘೋಷಣೆಯು ಕೇವಲ ಘೋಷಣೆಯಾಗಿಯೇ ಉಳಿದಿದೆ. ಸಮುದ್ರ ಕೊರೆತ ತಡೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದಾಗಿ ಮೀನುಗಾರರು ಮನೆ ಕಳೆದುಕೊಳ್ಳುವ ಪರಿಸ್ಥಿತಿ ಇದೆ ಎಂದು ಯು.ಟಿ. ಖಾದರ್ ಆಕ್ರೋಶ ವ್ಯಕ್ತಪಡಿಸಿದರು.
ಸಾರ್ವಜನಿಕ ವಿತರಣಾ ವ್ಯವಸ್ಥೆ ಮೂಲಕ ಕುಚ್ಚುಲಕ್ಕಿ ವಿತರಣೆಯನ್ನು ಪ್ರಾರಂಭಿಸಲು ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ಕೆಲವು ಶಾಸಕರು ಕೇವಲ ಜ್ಞಾಪನಾ ಪತ್ರವನ್ನು ಸಲ್ಲಿಸಿದ್ದಾರೆ. ಈ ಸರ್ಕಾರದ ಅವಧಿಯಲ್ಲಿ ಜನರಿಗೆ ಸರಿಯಾದ ಸಮಯಕ್ಕೆ ಪಡಿತರ ಚೀಟಿ ಕೂಡಾ ಸಿಗುತ್ತಿಲ್ಲ ಎಂದು ಆಪಾದಿಸಿದರು.
ಹಿಂದೂ ಎಂದರೆ ಅಶ್ಲೀಲ ಪದ ಎಂಬ ಸತೀಶ್ ಜಾರಕಿಹೊಳಿ ಹೇಳಿಕೆ ಕುರಿತ ಪ್ರಶ್ನೆಗೆ, ಇದು ಜಾರಕಿಹೊಳಿ ಅವರ ವೈಯಕ್ತಿಕ ಅಭಿಪ್ರಾಯ ಎಂದಷ್ಟೇ ಪ್ರತಿಕ್ರಿಯಿಸಿದರು.
ಹೊಸ ಸೆಂಟ್ರಲ್ ಮಾರ್ಕೆಟ್‌ನಲ್ಲಿ ಗೋಮಾಂಸ ಸ್ಟಾಲ್‌ಗಳನ್ನು ತೆರೆಯುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಖಾದರ್, ಬಿಜೆಪಿಗೆ ನಿಜವಾದ ಕಾಳಜಿ ಇಲ್ಲ. ಅವರ ಉದ್ದೇಶ ರಾಜಕೀಯ ಮಾತ್ರ. ಸರ್ಕಾರ ಗೋಮಾಂಸ ರಫ್ತು ಮಾಡಲು ರಾಜ್ಯದ 11 ಫ್ಯಾಕ್ಟರಿಗಳಿಗೆ ಅನುಮತಿ ನೀಡಿರುವುದು ಯಾಕೆ? ನೀಡಿರುವ ಅನುಮತಿಯನ್ನು ಯಾಕೆ ನಿಷೇಧಿಸಿಲ್ಲ? ಎಂದು ಪ್ರಶ್ನಿಸಿದರು.
ಎಂಎಲ್ಸಿ ಹರೀಶ್ ಕುಮಾರ್, ಕಾಂಗ್ರೆಸ್ ಮುಖಂಡರಾದ ನೀರಜಪಾಲ್, ಪ್ರಕಾಶ್ ಸಾಲಿಯಾನ್ ಮತ್ತಿತರರು ಉಪಸ್ಥಿತರಿದ್ದರು.