ಬಂಡಾಯ ತಪ್ಪಿಸಲು ಬೀದರ್‌ನಲ್ಲಿ ಆಣೆ-ಪ್ರಮಾಣ!

ಬೀದರ: ವಿಧಾನಸಭೆ ಮಹಾ ಕದನಕ್ಕೆ ದಿನಗಳು ಸಮೀಪಿಸುತ್ತಿದ್ದಂತೆ ಜಿಲ್ಲೆಯ ಭಾಲ್ಕಿ ಕ್ಷೇತ್ರದಲ್ಲಿ ಚುನಾವಣೆ ಕಾವು ಹೆಚ್ಚಿದೆ. ಕ್ಷೇತ್ರದಲ್ಲಿ ಈ ಬಾರಿ ಕಮಲ ಅರಳಿಸಲು ಪಣ ತೊಟ್ಟಿರುವ ಬಿಜೆಪಿ, ಶಾಸಕ ಈಶ್ವರ ಖಂಡ್ರೆ ಅವರನ್ನು ಸೋಲಿಸಲು ತಂತ್ರ ರೂಪಿಸುತ್ತಿದೆ.
ಸತತ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಕಾಂಗ್ರೆಸ್ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರನ್ನು ಈ ಬಾರಿ ಮಣಿಸಲು ಬಿಜೆಪಿ ಸಜ್ಜಾಗಿ ಕಾರ್ಯತಂತ್ರ ಹಣೆಯುತ್ತಿದೆ. ಪ್ರಬಲ ಆಕಾಂಕ್ಷಿಗಳಾಗಿರುವ ಮಾಜಿ ಶಾಸಕ ಪ್ರಕಾಶ ಖಂಡ್ರೆ ಮತ್ತು ಪರಾಜಿತ ಅಭ್ಯರ್ಥಿ ಡಿ.ಕೆ. ಸಿದ್ರಾಮ್ ಸದ್ಯ ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದು, ಶಾಸಕ ಖಂಡ್ರೆ ವಿರುದ್ಧ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಕೇಂದ್ರ ಸಚಿವ ಖೂಬಾ ಸಾರಥ್ಯ: ಆದರೆ ಕ್ಷೇತ್ರದಲ್ಲಿ ಕೇಸರಿ ಪಡೆಯಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿರುವುದು ವರಿಷ್ಠರಿಗೆ ಕಗ್ಗಂಟಾಗಿದ್ದಲ್ಲದೇ ಟಿಕೆಟ್ ವಂಚಿತರು ಬಂಡಾಯ ಇಲ್ಲವೇ ಬೇರೆ ಪಕ್ಷಕ್ಕೆ ಹಾರುವ ಭೀತಿಯೂ ಇದೆ. ಪ್ರತಿ ಬಾರಿ ಟಿಕೆಟ್ ವಂಚಿತರ ಮುನಿಸಿನಿಂದಾಗಿ ಪಕ್ಷ ಸೋಲುಣ್ಣುತ್ತ ಬಂದಿದೆ. ಹಾಗಾಗಿ ಇದನ್ನು ತಪ್ಪಿಸಲು ಪಕ್ಷದ ನಾಯಕರು ದೇವರ ಮೇಲೆ ಪ್ರಮಾಣ ಮಾಡಿಸಿದ್ದಾರೆ. ಇದಕ್ಕೆ ಕೇಂದ್ರ ಸಚಿವ ಭಗವಂತ ಖೂಬಾ ಸಾರಥ್ಯ ವಹಿಸಿದ್ದರೆ, ಜಿಲ್ಲೆಯ ಬಿಜೆಪಿ
ಹಿರಿಯ ನಾಯಕರು ಸಾಕ್ಷಿಯಾಗಿದ್ದಾರೆ.
ಪ್ರಮಾಣ ಮಾಡಿಸಿದ್ದು ಎಲ್ಲಿ?: ಕ್ಷೇತ್ರದಲ್ಲಿ ಸದ್ಯ ಬಿಜೆಪಿಯಿಂದ ಪ್ರಕಾಶ ಖಂಡ್ರೆ, ಡಿ.ಕೆ.ಸಿದ್ರಾಮ್ ಜತೆಗೆ ಮರಾಠಾ ಸಮಾಜದ ಮುಖಂಡ ಡಾ|ದಿನಕರ ಮೊರೆ ಸೇರಿ ಐದಾರು ಜನ ಆಕಾಂಕ್ಷಿಗಳಿದ್ದಾರೆ. ದಕ್ಷಿಣ ಕಾಶಿ ಖ್ಯಾತಿಯ ಭಾಲ್ಕಿ ತಾಲೂಕಿನ ಶ್ರೀ ಮೈಲಾರ ಮಲ್ಲಣ್ಣ ದೇವಸ್ಥಾನದಲ್ಲಿ ಪ್ರಮಾಣ ಮಾಡಿಸಲಾಗಿದೆ. “ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕ್ಷೇತ್ರದಿಂದ ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ನಾನು ಮತ್ತು ನನ್ನ ಪರಿವಾರ ಆ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತೇವೆ ಎಂದು ನಮ್ಮ ಮನೆ ದೇವರು ಮತ್ತು ಮೈಲಾರ ಮಲ್ಲಣ್ಣ ದೇವರ ಮೇಲೆ ಆಣೆ ಮಾಡುತ್ತೇನೆ’ ಎಂದು ಆಕಾಂಕ್ಷಿಗಳಿಂದ ಪ್ರತ್ಯೇಕವಾಗಿ ಪ್ರಮಾಣ ಮಾಡಿಸಲಾಗಿದೆ.
ಖೂಬಾ-ಈಶ್ವರ ಖಂಡ್ರೆ ಜಿದ್ದಾಜಿದ್ದಿ
ಶಾಸಕ ಈಶ್ವರ ಖಂಡ್ರೆ ಮತ್ತು ಕೇಂದ್ರ ಸಚಿವ ಭಗವಂತ ಖೂಬಾ ಮಧ್ಯದ ರಾಜಕೀಯ ಕುಸ್ತಿ ದಿನ ಕಳೆದಂತೆ ಹೆಚ್ಚುತ್ತಿದ್ದು, ಭಾಲ್ಕಿ ಕ್ಷೇತ್ರದಲ್ಲಿ ಈಶ್ವರ ಅವರನ್ನು ಶತಾಯ ಗತಾಯ ಸೋಲಿಸಲು ಕಸರತ್ತು ನಡೆಸುತ್ತಿದ್ದಾರೆ. ಆಣೆ-ಪ್ರಮಾಣದ ಹೆಸರಿನಲ್ಲಿ ಟಿಕೆಟ್ ಘೋಷಣೆಗೂ ಮುನ್ನವೇ ಅಭ್ಯರ್ಥಿಗಳನ್ನು ಒಂದುಗೂಡಿಸಿ ಪಕ್ಷವನ್ನು ಬಲಿಷ್ಠಗೊಳಿಸುವುದರ ಜತೆಗೆ ಮುಂದೆ ಎದುರಾಗಬಹುದಾದ ಬಂಡಾಯ ಶಮನ ಮಾಡುವ ಪ್ರಯತ್ನ ಮಾಡಿದ್ದಾರೆ
ಶಶಿಕಾಂತ ಬಂಬುಳಗೆ