ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಮತ್ತೊಂದು ಮೈಲಿಗಲ್ಲು ತಲುಪಿದ ಚೇತೇಶ್ವರ ಪೂಜಾರ

ಭಾರತ ಕ್ರಿಕೆಟ್ ತಂಡದ ಮಧ್ಯಮ ಕ್ರಮಾಂಕದ ಅನುಭವಿ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಮತ್ತೊಂದು ಅದ್ಭುತ ಸಾಧನೆ ಮಾಡಿದ್ದು, ಭಾರತದ ನೆಲದಲ್ಲಿ 12,000 ರನ್‌ಗಳನ್ನು ಶುಕ್ರವಾರ ಪೂರ್ಣಗೊಳಿಸಿದ್ದಾರೆ.
2022-23ರ ರಣಜಿ ಟ್ರೋಫಿ ಪಂದ್ಯಾವಳಿಯ ಆಂಧ್ರಪ್ರದೇಶ ವಿರುದ್ಧದ ಮುಖಾಮುಖಿಯ ತಮ್ಮ ಎರಡನೇ ಇನ್ನಿಂಗ್ಸ್‌ನಲ್ಲಿ ಸೌರಾಷ್ಟ್ರ ತಂಡದ ಪರ ಆಡುತ್ತಿರುವಾಗ ಚೇತೇಶ್ವರ ಪೂಜಾರ ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಭಾರತದ ನೆಲದಲ್ಲಿ 12,000 ರನ್‌ಗಳ ಹೆಗ್ಗುರುತನ್ನು ತಲುಪಿದರು.ಒಂದು ದಶಕಕ್ಕೂ ಹೆಚ್ಚು ಕಾಲ ಭಾರತ ಟೆಸ್ಟ್ ತಂಡದಲ್ಲಿ ಚೇತೇಶ್ವರ ಪೂಜಾರ ಬ್ಯಾಟಿಂಗ್ ಆಧಾರಸ್ತಂಭವಾಗಿದ್ದು, ಅವರು ತಮ್ಮ ವೃತ್ತಿಜೀವನದಲ್ಲಿ ಹಲವು ಬಾರಿ ಏರಿಳಿತ ಕಂಡಿದ್ದಾರೆ. 34 ವರ್ಷ ವಯಸ್ಸಿನ ಪೂಜಾರ ಭಾರತ ತಂಡಕ್ಕೆ ಮತ್ತೆ ತಮ್ಮ ಬಲವಾದ ಪುನರಾಗಮನವನ್ನು ಮಾಡಿದರು.
ಸೌರಾಷ್ಟ್ರ ಪರ ಚೇತೇಶ್ವರ ಪೂಜಾರ 91 ರನ್ ಗಳಿಸಿ ಆಂಧ್ರಪ್ರದೇಶದ ವಿರುದ್ಧ ತಮ್ಮ ತಂಡದ ಗೆಲುವಿನ ಭರವಸೆಯನ್ನು ಜೀವಂತವಾಗಿರಸಲು ಪ್ರಯತ್ನಿಸಿದರು. ಆದರೂ, ಸೌರಾಷ್ಟ್ರ ತಂಡ 150 ರನ್‌ಗಳಿಂದ ಆಂಧ್ರಪ್ರದೇಶ ತಂಡದೆದುರು ಸೋಲಬೇಕಾಯಿತು.
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಚೇತೇಶ್ವರ ಪೂಜಾರ ಆಟ ನಿರ್ಣಾಯಕ
ಭಾರತ ಟೆಸ್ಟ್ ತಂಡವು ಫೆಬ್ರವರಿ 9ರಿಂದ ಆರಂಭವಾಗುವ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಎದುರಿಸುವಾಗ, ಭಾರತ ತಂಡಕ್ಕೆ ಚೇತೇಶ್ವರ ಪೂಜಾರ ನಿರ್ಣಾಯಕ ಆಟಗಾರನಾಗಲಿದ್ದಾರೆ.
ಆಸೀಸ್ ತಂಡವನ್ನು ಎದುರಿಸಿದಾಗಲೆಲ್ಲಾ ಚೇತೇಶ್ವರ ಪೂಜಾರ ತನ್ನ ನೈಜ ಆಟವನ್ನು ಆಡಿ ತಂಡಕ್ಕೆ ಆಸರೆಯಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ 20 ಟೆಸ್ಟ್‌ಗಳಲ್ಲಿ ಚೇತೇಶ್ವರ ಪೂಜಾರ 54.08ರ ಅತ್ಯುತ್ತಮ ಸರಾಸರಿಯಲ್ಲಿ 1893 ರನ್ ಗಳಿಸಿದ್ದಾರೆ ಮತ್ತು ಅವರ ವಿರುದ್ಧ ಐದು ಶತಕ ಮತ್ತು 10 ಅರ್ಧಶತಕಗಳನ್ನು ಬಾರಿಸಿದ್ದಾರೆ.