ಪಾಕ್‌: ರಾಜೀನಾಮೆ ಹಿಂಪಡೆದ ಇಮ್ರಾನ್ ಪಕ್ಷದ 45 ಶಾಸಕರು

ಪಾಕ್‌: ರಾಜೀನಾಮೆ ಹಿಂಪಡೆದ ಇಮ್ರಾನ್ ಪಕ್ಷದ 45 ಶಾಸಕರು

ಸ್ಲಾಮಾಬಾದ್: ಪಾಕಿಸ್ತಾನ ತೆಹ್ರೀಕ್‌-ಎ- ಇನ್ಸಾಫ್ (ಪಿಟಿಐ) ಪಕ್ಷದ 45 ಶಾಸಕರು ಪಾಕಿಸ್ತಾನದ ಸಂಸತ್ತಿಗೆ ನೀಡಿದ್ದ ಸಾಮೂಹಿಕ ರಾಜೀನಾಮೆಯನ್ನು ಪಕ್ಷದ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಆದೇಶದ ಮೇರೆಗೆ ಸೋಮವಾರ ಹಿಂಪಡೆದಿದ್ದಾರೆ.

2022ರ ಏಪ್ರಿಲ್‌ನಲ್ಲಿ ಅವಿಶ್ವಾಸ ಮತದ ಮೂಲಕ ಅಧಿಕಾರದಿಂದ ಕೆಳಗಿಳಿದ ಇಮ್ರಾನ್ ಖಾನ್ ಅವರ ಪಕ್ಷದ ಕನಿಷ್ಠ 123 ಶಾಸಕರು ತಕ್ಷಣವೇ ರಾಜೀನಾಮೆ ನೀಡಲು ನಿರ್ಧರಿಸಿದ್ದರು. ಆದರೆ, ಸ್ಪೀಕರ್ ರಾಜಾ ಪರ್ವೈಜ್ ಅಶ್ರಫ್ ಅವರು ಜುಲೈನಲ್ಲಿ 11 ಮಂದಿಯ ರಾಜೀನಾಮೆಗಳನ್ನು ಮಾತ್ರ ಅಂಗೀಕರಿಸಿದ್ದರು ಮತ್ತು ಉಳಿದ ಶಾಸಕರನ್ನು ಪರಿಶೀಲನೆಗಾಗಿ ಪ್ರತ್ಯೇಕವಾಗಿ ಕರೆಸಲಾಗುವುದು ಎಂದು ಹೇಳಿದ್ದರು.

ಆದರೆ, ಕಳೆದ ವಾರ ಅನಿರೀಕ್ಷಿತ ನಡೆಯೊಂದರಲ್ಲಿ ಸ್ಪೀಕರ್ ಅವರು ಪಿಟಿಐನ 69 ಶಾಸಕರ ರಾಜೀನಾಮೆಯನ್ನು ಅಂಗೀಕರಿಸಿದ್ದರು. ಇದು ಇಮ್ರಾನ್ ಪಕ್ಷವು ತನ್ನ ತಂತ್ರಗಾರಿಕೆ ಬದಲಾಯಿಸಿಕೊಳ್ಳುವ ಅನಿವಾರ್ಯತೆ ತಂದಿತು.

ಸಂಸತ್ತಿನಲ್ಲಿ ತಮ್ಮ ಪಕ್ಷವು ಪ್ರಮುಖ ವಿರೋಧ ಪಕ್ಷವಾಗಬೇಕೆಂಬ ಉದ್ದೇಶದಿಂದ ಇಮ್ರಾನ್ ಖಾನ್, ತಮ್ಮ ಪಕ್ಷದ ಇತರ ಶಾಸಕರಿಗೆ ತಮ್ಮ ರಾಜೀನಾಮೆಯನ್ನು ಹಿಂಪಡೆಯುವಂತೆ ಆದೇಶಿಸಿದ್ದರು.