ನಾವೂ ಚಪ್ಪಲಿ ತೋರಿಸಬಲ್ಲೆವು: ಪವನ್ ಕಲ್ಯಾಣ್‌ಗೆ ನಟಿ, ರಾಜಕಾರಣಿ ಎಚ್ಚರಿಕೆ

ಭಾರಿ ಸಂಖ್ಯೆಯ ಅಭಿಮಾನಿ ವರ್ಗ ಹೊಂದಿರುವ ನಟ ಪವನ್ ಕಲ್ಯಾಣ್ ರಾಜಕೀಯದಲ್ಲಿಯೂ ಸಕ್ರಿಯರಾಗಿದ್ದಾರೆ. ಜನಸೇನಾ ಪಕ್ಷ ಕಟ್ಟಿರುವ ಪವನ್ ಕಲ್ಯಾಣ್, ಇತ್ತೀಚೆಗಷ್ಟೆ ಚಂದ್ರಬಾಬು ನಾಯ್ಡು ಅವರ ಟಿಡಿಪಿ ಜೊತೆ ಕೈಜೋಡಿಸಿದ್ದಾರೆ.
ಸಿನಿಮಾದ ಸ್ಟಾರ್ ನಾಯಕ ನಟನಾಗಿರುವ ಪವನ್ ಕಲ್ಯಾಣ್ ರಾಜಕೀಯವನ್ನೂ ತುಸು ಸಿನಿಮೀಯವಾಗಿಯೇ ಮಾಡುತ್ತಿದ್ದಾರೆ.
ಆಡಳಿತ ಪಕ್ಷದವರು ಸಹ ಪವನ್ ಕಲ್ಯಾಣ್ ಅನ್ನು ಗಂಭೀರವಾಗಿ ಪರಿಗಣಿಸುತ್ತಲೇ ಬಂದಿದ್ದು, ಪವನ್‌ರ ಪ್ರತಿ ಹೇಳಿಕೆಗೂ ಪ್ರತಿಕ್ರಿಯೆಗಳನ್ನು ನೀಡುತ್ತಾ ಬಂದಿದ್ದಾರೆ. ಅದರಲ್ಲಿಯೂ ನಟಿ, ರಾಜಕಾರಣಿ ಎರಡೂ ಆಗಿರುವ ರೋಜಾ ಅಂತೂ ಪವನ್ ಕಲ್ಯಾಣ್ ಮೇಲೆ ಅವಕಾಶ ಸಿಕ್ಕಾಗೆಲ್ಲ ವಾಗ್ದಾಳಿ ನಡೆಸುತ್ತಲೇ ಬಂದಿದ್ದಾರೆ. ಇದೀಗ ಪವನ್ ಕಲ್ಯಾಣ್, ರಾಜಕಾರಣಿಯೇ ಅಲ್ಲ ಆತನೊಬ್ಬ ರೌಡಿ ಎಂದಿದ್ದಾರೆ.
ಕೆಲವು ದಿನಗಳ ಹಿಂದೆ ಪಕ್ಷದ ಸಭೆಯೊಂದರಲ್ಲಿ ಮಾನಾಡಿದ್ದ ನಟ ಪವನ್ ಕಲ್ಯಾಣ್, ತಮ್ಮನ್ನು ಭ್ರಷ್ಟನೆಂದು ಆಡಳಿತ ಪಕ್ಷದವರು ಮಾಡುವ ಆರೋಪಗಳಿಗೆ ಲೆಕ್ಕ ಸಮೇತ ಉತ್ತರ ನೀಡಿ, ಇನ್ನೊಮ್ಮೆ ನನ್ನನ್ನು ಭ್ರಷ್ಟ ಎಂದರೆ ಚಪ್ಪಲಿಯಲ್ಲಿ ಹೊಡೆಯುತ್ತೇನೆ ಎಂದು ಧರಿಸಿದ್ದ ಚಪ್ಪಲಿಯನ್ನು ಕೈಗೆತ್ತಿಕೊಂಡು ತೋರಿಸಿದ್ದರು. ಪವನ್‌ರ ಈ ವರ್ತನೆ ಬಹಳ ಚರ್ಚೆಯಾಗಿತ್ತು. ಇದೀಗ ಆಡಳಿತ ಪಕ್ಷದ ಸದಸ್ಯೆ ನಟಿ, ರಾಜಕಾರಣಿ ರೋಜಾ, ಪವನ್‌ಗೆ ತಿರುಗೇಟು ನೀಡಿದ್ದಾರೆ.