ದೆಹಲಿಯಲ್ಲಿ ಮತ್ತೊಂದು ಭೀಕರ ಹತ್ಯೆ: ಮಹಿಳೆಯನ್ನ ಕೊಂದು ಸ್ಮಶಾನದಲ್ಲಿ ಹೂತಾಕಿದ ದುಷ್ಕರ್ಮಿಗಳು

ದೆಹಲಿಯಲ್ಲಿ ಮತ್ತೊಂದು ಭೀಕರ ಹತ್ಯೆ: ಮಹಿಳೆಯನ್ನ ಕೊಂದು ಸ್ಮಶಾನದಲ್ಲಿ ಹೂತಾಕಿದ ದುಷ್ಕರ್ಮಿಗಳು

ದೆಹಲಿ: ದೆಹಲಿಯಲ್ಲಿ ಮತ್ತೊಂದು ಭೀಕರ ಹತ್ಯೆಯ ಘಟನೆಯೊಂದು ಬೆಳಕಿಗೆ ಬಂದಿದೆ. ಮಂಗೋಲ್ಪುರಿಯ 50 ವರ್ಷದ ಮಹಿಳೆಯನ್ನು ಅಪಹರಿಸಿ, ಮೂವರು ವ್ಯಕ್ತಿಗಳು ಬರ್ಬರವಾಗಿ ಹತ್ಯೆಗೈದಿದ್ದು, ಸಾಕ್ಷ್ಯ ನಾಶಪಡಿಸಲು ಆಕೆಯ ಶವವನ್ನು ಹೂತು ಹಾಕಿದ್ದಾರೆ ಎಂದ ತಿಳಿದುಬಂದಿದೆ.

ಸುಮಾರು 10 ದಿನಗಳ ಹಿಂದೆ ಮಹಿಳೆಯನ್ನು ಅಪಹರಿಸಿ ಕೊಲೆ ಮಾಡಲಾಗಿದ್ದು, ಆರೋಪಿಗಳನ್ನು ಬುಧವಾರ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಶವವನ್ನು ಪಡೆಯಲು ಪೊಲೀಸರು ನಂಗ್ಲೋಯ್‌ನಲ್ಲಿ ಸಮಾಧಿಯನ್ನು ಅಗೆದಿದ್ದಾರೆ. ಆಕೆಯ ಮರಣೋತ್ತರ ಪರೀಕ್ಷೆಯನ್ನು ಗುರುವಾರ(ಇಂದು) ಸಂಜಯ್ ಗಾಂಧಿ ಸ್ಮಾರಕ ಆಸ್ಪತ್ರೆಯಲ್ಲಿ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳನ್ನು ಮೊಬಿನ್ ಖಾನ್, ನವೀನ್ ಖಾನ್ ಮತ್ತು ರೆಹಾನ್ ಎಂದು ಗುರುತಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೃತಳನ್ನು ಮೀನಾ ವಾಧ್ವನ್ ಎಂದು ಗುರುತಿಸಲಾಗಿದ್ದು, ಆವಂತಿಕಾ ಪ್ರದೇಶದಲ್ಲಿ ವಾಸವಿದ್ದಳು. ಮೀನಾ ಬಡ್ಡಿಗೆ ಹಣ ನೀಡುತ್ತಿದ್ದಳು. ಈ ಮೂವರು ಆರೋಪಿಗಳು ಮೀನಾಗೆ ಪರಿಚಿತರಾಗಿದ್ದು, ಆಕೆಯಿಂದ ಸಾಲ ಪಡೆದಿದ್ದರು. ಆರೋಪಿಗಳು ಇನ್ನೂ ಹೆಚ್ಚಿನ ಸಾಲಕ್ಕೆ ಬೇಡಿಕೆ ಇಟ್ಟಿದ್ದು, ಆಕೆ ನಿರಾಕರಿಸಿದಾಗ ಆಕೆಯನ್ನು ಅಪಹರಿಸಿ ಕೊಲೆ ಮಾಡಿ ಮೃತದೇಹವನ್ನು ನಂಗ್ಲೋಯ್‌ನಲ್ಲಿರುವ ಸ್ಮಶಾನದಲ್ಲಿ ಹೂಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗೋಲ್‌ಪುರಿ ಪೊಲೀಸ್ ಠಾಣೆಯಲ್ಲಿ ಅಪಹರಣ ಕಮ್ ಮರ್ಡರ್ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.