ಗುಜರಾತ್ ಟೈಟನ್ಸ್‌ಗೆ ಹಿನ್ನಡೆ; 2023ರ ಐಪಿಎಲ್‌ನಿಂದ ಕೇನ್ ವಿಲಿಯಮ್ಸನ್ ಔಟ್!

ಗುಜರಾತ್ ಟೈಟನ್ಸ್‌ಗೆ ಹಿನ್ನಡೆ; 2023ರ ಐಪಿಎಲ್‌ನಿಂದ ಕೇನ್ ವಿಲಿಯಮ್ಸನ್ ಔಟ್!

ಶುಕ್ರವಾರ, ಮಾರ್ಚ್ 31ರಂದು 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 16ನೇ ಸೀಸನ್‌ನ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ಸ್ ತಂಡಗಳು ಮುಖಾಮುಖಿಯಾಗಿದ್ದು, ಮೊದಲ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟನ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 5 ವಿಕೆಟ್‌ಗಳ ಗೆಲುವು ಸಾಧಿಸಿತು.

ಇನ್ನು ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟಿಂಗ್ ಇನ್ನಿಂಗ್ಸ್ ವೇಳೆ ಡೀಪ್ ಸ್ಕ್ವೇರ್ ಲೆಗ್ ಬೌಂಡರಿಯಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಗುಜರಾತ್ ಟೈಟನ್ಸ್ ತಂಡದ ಕೇನ್ ವಿಲಿಯಮ್ಸನ್ ಬಲ ಮೊಣಕಾಲಿಗೆ ಗಂಭೀರ ಗಾಯ ಮಾಡಿಕೊಂಡು ಮೈದಾನದಿಂದ ಹೊರನಡೆದರು.

ಚೆಂಡು ಬೌಂಡರಿ ಗೆರೆ ಮೇಲೆ ದಾಟದಂತೆ ತಡೆಯುವಲ್ಲಿ ಯಶಸ್ವಿಯಾದ ಕೇನ್ ವಿಲಿಯಮ್ಸನ್, ನಂತರ ಚೆಂಡು ಪುಟಿದೇಳುವ ಮೊದಲು ಮತ್ತು ಬೌಂಡರಿ ಗೆರೆಯನ್ನು ಮುಟ್ಟಿತು. ಈ ವೇಳೆ ಜಂಪ್ ಮಾಡಲು ಹೋದಾಗ ಮೊಣಕಾಲು ನೆಲಕ್ಕೆ ತಾಗಿ ನಡೆಯಲಾರದಷ್ಟು ತೀವ್ರ ಗಾಯಗೊಂಡರು. ಎರಡೂ ತಂಡಗಳ ಫಿಸಿಯೋಗಳು ಕೇನ್ ವಿಲಿಯಮ್ಸನ್ ಅವರನ್ನು ಪರೀಕ್ಷಿಸಿದರು.

ಕೇನ್ ವಿಲಿಯಮ್ಸನ್ ಇಬ್ಬರು ಸಿಬ್ಬಂದಿಗಳ ಹೆಗಲ ಮೇಲೆ ಕೈ ಹಾಕಿಕೊಂಡು ಮೈದಾನ ತೊರೆದರು. ಶೀಘ್ರದಲ್ಲೇ ಅವರನ್ನು ಡ್ರೆಸ್ಸಿಂಗ್ ಕೋಣೆಗೆ ಕರೆದುಕೊಂಡು ಹೋಗಲಾಯಿತು. ಹೀಗಾಗಿ, ಗುಜರಾತ್ ಟೈಟನ್ಸ್ ತಂಡ ಎರಡನೇ ಇನ್ನಿಂಗ್ಸ್‌ಗೆ ಸಾಯಿ ಸುದರ್ಶನ್ ಅವರನ್ನು ತಮ್ಮ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಳಸಿಕೊಂಡಿತು.

ಕೇನ್ ವಿಲಿಯಮ್ಸನ್ ಅವರ ಗಾಯದ ಪ್ರಮಾಣದ ಬಗ್ಗೆ ಇನ್ನೂ ತಿಳಿದುಬಂದಿಲ್ಲ. ಸ್ಪೋರ್ಟ್ಸ್ ಟಾಕ್ ವರದಿಯ ಪ್ರಕಾರ, ಕೇನ್ ವಿಲಿಯಮ್ಸನ್ ಅವರು 2023ರ ಉಳಿದ ಐಪಿಎಲ್‌ನಿಂದ ಹೊರಗುಳಿಯಲಿದ್ದಾರೆ ಎಂದು ತಿಳಿಸಲಾಗಿದೆ. ಈ ಕುರಿತು ಗುಜರಾತ್ ಟೈಟನ್ಸ್ ಮ್ಯಾನೇಜ್‌ಮೆಂಟ್‌ನಿಂದ ಅಧಿಕೃತ ಮಾಹಿತಿ ಹೊರಬರಬೇಕಿದೆ.