ಕಾಂಗ್ರೆಸ್‌ನ ಮೇಕೆದಾಟು ಪಾದಯಾತ್ರೆಗೆ ಕನ್ನಡ ಚಲನಚಿತ್ರ ರಂಗ ಬೆಂಬಲ
ಬೆಂಗಳೂರು, ಜ.7- ಮೇಕೆದಾಟು ಪಾದಯಾತ್ರೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯಮಂಡಳಿ ಬೆಂಬಲ ಘೋಷಿಸಿದೆ. ಡಾ.ರಾಜ್‍ಕುಮಾರ್ ಕಾಲದಿಂದಲೂ ನೆಲ-ಜಲದ ಬಗ್ಗೆ ಚಲನಚಿತ್ರ ವಾಣಿಜ್ಯ ಮಂಡಳಿ ಬೆಂಬಲ ನೀಡುತ್ತಲೇ ಬಂದಿದೆ.
ಇದು ಪಕ್ಷಾತೀತ ಹೋರಾಟವಾಗಿರುವುದರಿಂದ ಪಾದಯಾತ್ರೆಗೆ ಬೆಂಬಲ ನೀಡುತ್ತಿದ್ದೇವೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ವಾಣಿಜ್ಯಮಂಡಳಿಗೆ ಬಂದು ಬೆಂಬಲ ಕೋರಿದರು. ಇದರಲ್ಲಿ ಎಲ್ಲರೂ ಪಾಲ್ಗೊಳ್ಳುತ್ತಿದ್ದಾರೆ. ನಮ್ಮ ಹಕ್ಕನ್ನು ಪ್ರತಿಪಾದಿಸಲು ನಾವು ಕೂಡ ಇದರಲ್ಲಿ ಪಾಲ್ಗೊಳ್ಳುತ್ತೇವೆ ಎಂದರು.
ತಮಿಳುನಾಡಿಗೆ ನೂರು ಟಿಎಂಸಿ ನೀರು ಬಿಡಬೇಕು. ಆದರೆ, 400 ಟಿಎಂಸಿ ನೀರು ಹರಿಯುತ್ತಿದೆ. ಹೆಚ್ಚುವರಿಯಾಗಿ ಹರಿಯುತ್ತಿರುವ ನೀರನ್ನು ನಾವು ಬಳಸಿಕೊಳ್ಳಲು ಹೋರಾಡಬೇಕಾಗಿದೆ. ಇದು ನಾಲ್ಕು ಜಿಲ್ಲೆಗಳಿಗೆ ಕುಡಿಯುವ ನೀರಿಗಾಗಿ ಹೋರಾಟವಾಗಿದೆ. ಬೆಂಗಳೂರು ಬೃಹದಾಕಾರವಾಗಿ ಬೆಳೆಯುತ್ತಿದೆ. ಕುಡಿಯುವ ನೀರಿನ ಅಗತ್ಯತೆ ಹೆಚ್ಚುತ್ತಿದೆ. ಇದನ್ನು ನೀಗಿಸಲು ಮೇಕೆದಾಟು ಯೋಜನೆ ಅನುಕೂಲವಾಗಲಿದೆ. ಕೊರೊನಾ ನಿಯಮಗಳು ಇರುವುದರಿಂದ ಭೌತಿಕವಾಗಿ ನಾವೆಲ್ಲರೂ ಒಂದೇ ಬಾರಿ ಭಾಗಿಯಾಗಲು ಸಾಧ್ಯವಾಗುತ್ತಿಲ್ಲ. ಆದರೆ, ಒಂದೊಂದು ದಿನ ಅವರವರ ಅನುಕೂಲಕ್ಕೆ ತಕ್ಕಂತೆ ಹೋರಾಟದಲ್ಲಿ ಪಾಲ್ಗೊಳ್ಳುತ್ತೇವೆ ಎಂದು ಹೇಳಿದರು.
ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಹಾಗೂ ಡಾ.ರಾಜ್‍ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು ಮಾತನಾಡಿ, ಕುಡಿಯುವ ನೀರಿಗಾಗಿ ಹಾಹಾಕಾರ ಇದೆ. ಕೇಂದ್ರ ಸರ್ಕಾರ ಯಾವುದೇ ಒತ್ತಡಕ್ಕೆ ಮಣಿಯದೆ ಮೇಕೆದಾಟು ಯೋಜನೆಯನ್ನು ಜಾರಿಗೆ ತರಬೇಕು. ಪಾದಯಾತ್ರೆಯ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಇದು ಕನ್ನಡಿಗರಾದ ನಮ್ಮೆಲ್ಲರ ಜವಾಬ್ದಾರಿ ಕೂಡ ಎಂದರು.
ಕಲಾವಿದರ ಸಂಘದ ಅಧ್ಯಕ್ಷರಾದ ಡಾ.ರಾಕ್‍ಲೈನ್ ವೆಂಕಟೇಶ್ ಅವರ ಮೂಲಕ ಎಲ್ಲ ಕಲಾವಿದರು ಹೋರಾಟದಲ್ಲಿ ಭಾಗಿಯಾಗಲು ಪತ್ರ ಕಳುಹಿಸಲಾಗಿದೆ. ಎಲ್ಲರೂ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಕೊರೊನಾ ನಿಯಮಗಳಿರುವುದರಿಂದ ಅವರ ಅನುಕೂಲಕ್ಕೆ ತಕ್ಕಂತೆ ಪಾದಯಾತ್ರೆಯಲ್ಲಿ ಭಾಗಿಯಾಗುತ್ತಾರೆ. 19ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಎಲ್ಲ ಕಲಾವಿದರು, ತಂತ್ರಜ್ಞರು ಭಾಗಿಯಾಗಲಿದ್ದಾರೆ ಎಂದು ಹೇಳಿದರು.
ಹೋರಾಟಕ್ಕೆ ಮಾನಸಿಕ ಹಾಗೂ ಭೌತಿಕವಾಗಿ ಎಲ್ಲ ರೀತಿಯಲ್ಲೂ ನಮ್ಮ ಬೆಂಬಲವಿದೆ. ತಮಿಳುನಾಡಿಗೆ ನೀರಿನ ವಿಚಾರದಲ್ಲಿ ನಾವು ಮೋಸ ಮಾಡಿಲ್ಲ. ನಾವು ಕೇಳುತ್ತಿರುವುದು ಹೆಚ್ಚುವರಿಯಾಗಿ ಹರಿಯುತ್ತಿರುವ ನೀರನ್ನು ಮಾತ್ರ. ಕೇಂದ್ರ ಸರ್ಕಾರ ತಾತ್ವಿಕವಾಗಿ ಒಪ್ಪಿದೆ. ರಾಷ್ಟ್ರೀಯ ಜಲನೀತಿ ನಿರ್ಣಯವನ್ನು ಪಾಲಿಸಬೇಕು. ಕೂಡಲೇ ಮೇಕೆದಾಟು ಯೋಜನೆಯನ್ನು ಜಾರಿಗೊಳಿಸಬೇಕು. ನಾವು ಯಾವುದೇ ಪಕ್ಷಕ್ಕೆ ಸೀಮಿತವಲ್ಲ. ನಾವೆಲ್ಲರೂ ಪಾಲ್ಗೊಳ್ಳುತ್ತೇವೆ ಎಂದು ಹೇಳಿದರು.
ಮುಖ್ಯಮಂತ್ರಿ ಚಂದ್ರು ಮಾತನಾಡಿ, ನಮಗೆ ಕೇಂದ್ರ ಸರ್ಕಾರದ ವಿರುದ್ಧವಾಗಲಿ, ರಾಜ್ಯ ಸರ್ಕಾರದ ವಿರುದ್ಧವಾಗಲಿ ಯಾವುದೇ ಘರ್ಷಣೆ ಇಲ್ಲ. ನಮಗೆ ಬೇಕಾಗಿರುವುದು ಕುಡಿಯುವ ನೀರು. ಅದಕ್ಕಾಗಿ ನಮ್ಮ ಹೋರಾಟ. ಹೋರಾಟದ ಸಮಯದಲ್ಲಿ ನೂಕುನುಗ್ಗಲು ಹೆಚ್ಚಾಗುವ ಕಾರಣ ಕಲಾವಿದರು ಒಟ್ಟಿಗೆ ಹೋಗುವ ಬದಲು ಹಂತ ಹಂತವಾಗಿ ಹೋರಾಟದಲ್ಲಿ ಭಾಗಿಯಾಗಲಿದ್ದಾರೆ ಎಂದರು.
ಚಿತ್ರನಟಿ ಜಯಮಾಲಾ ಮಾತನಾಡಿ, ರಾಜ್ಯಸರ್ಕಾರ ಕುರುಡುನೆಪ ಹೇಳಿ ಪಾದಯಾತ್ರೆಯನ್ನು ತಡೆಯುವ ಪ್ರಯತ್ನ ಮಾಡುತ್ತಿದೆ. ರಾಜಕೀಯ ಮಾಡುವುದನ್ನು ಬಿಟ್ಟು ಹೋರಾಟಕ್ಕೆ ಬೆಂಬಲಿಸಲಿ. ಜನಪರ ಕಾಳಜಿ ಇದ್ದರೆ ಯೋಜನೆಯನ್ನು ಬೇಗ ಜಾರಿಮಾಡಲಿ ಎಂದು ಹೇಳಿದರು.
ನಮ್ಮ ಹೋರಾಟ ಸರ್ಕಾರದ ಕಣ್ಣು ತೆರೆಸುವ ಹೋರಾಟವಾಗಿದೆ. ಮೇಕೆದಾಟು ಯೋಜನೆಗೆ ಯಾವುದೇ ಅಡೆತಡೆಗಳಿಲ್ಲ. ನ್ಯಾಯಾಲಯದಲ್ಲಿ ಯಾವುದೇ ಪ್ರಕರಣ ಇಲ್ಲ. ಕೇಂದ್ರ ಸರ್ಕಾರ ಕೂಡಲೇ ಈ ಯೋಜನೆ ಅನುಷ್ಠಾನಕ್ಕೆ ಮುಂದಾಗಬೇಕು. ನೀವು ನಮ್ಮನ್ನು ಬಂಸಲು ಮುಂದಾದರೆ ಅದೇ ನಮಗೆ ಶ್ರೀರಕ್ಷೆಯಾಗಲಿದೆ ಎಂದು ಹೇಳಿದರು.
ಮೇಕೆದಾಟು ಪಾದಯಾತ್ರೆಗೆ ಚಿತ್ರರಂಗದ ಬೆಂಬಲ ಕುರಿತು ಇಂದು ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಹಿರಿಯ ನಟಿ ಉಮಾಶ್ರೀ, ಗಣೇಶ್, ಪ್ರವೀಣ್ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದರು.