ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ದ್ವಿತೀಯ ದರ್ಜೆ ಸಹಾಯಕ

ಬೆಂಗಳೂರು: ಗುತ್ತಿಗೆದಾರನಿಗೆ ಹಣ ಬಿಡುಗಡೆಗೊಳಿಸಲು ಶೇ 10 ರಷ್ಟು ಕಮಿಷನ್ ರೂಪದಲ್ಲಿ ಲಂಚ ಪಡೆಯುತ್ತಿದ್ದಾಗ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ದ್ವಿತೀಯ ದರ್ಜೆ ಸಹಾಯಕನನ್ನು(ಎಸ್‌ಡಿಎ) ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದರು.
ನಗರದ ಕೆ.ಆರ್.ಸರ್ಕಲ್ ಬಳಿಯಿರುವ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಕಚೇರಿಗೆ ಹವಾ ನಿಯಂತ್ರಕಗಳ ಪೂರೈಕೆಗೆ ವಿಜಯ್ ಕುಮಾರ್ ಎಂಬುವವರು ಗುತ್ತಿಗೆ ಪಡೆದಿದ್ದರು. ಅಂತೆಯೇ, ಕಚೇರಿಗೆ ಸಲಕರಣೆಗಳ ಅಳವಡಿಕೆ ಬಳಿಕ ಹಣ ಬಿಡುಗಡೆಗೆ ಪ್ರಾಧಿಕಾರದ ಆಡಳಿತ ವಿಭಾಗದ ಉಪ ಆಯುಕ್ತರ ಕಚೇರಿಗೆ ಗುತ್ತಿಗೆದಾರರು ಮನವಿ ಮಾಡಿದ್ದರು. ಆದರೆ ಶೇ 10 ರಷ್ಟು ಕಮಿಷನ್ ರೂಪದಲ್ಲಿ ಲಂಚ ನೀಡುವಂತೆ ಶಶಿಕುಮಾರ್ ಬೇಡಿಕೆ ಇಟ್ಟಿದ್ದರು.ಈ ಬಗ್ಗೆ ಲೋಕಾಯುಕ್ತ ಪೊಲೀಸರಿಗೆ ವಿಜಯ್ ಕುಮಾರ್ ದೂರು ಸಲ್ಲಿಸಿದ್ದರು. ಅದರಂತೆ, ಕಾರ್ಯಾಚರಣೆ ನಡೆಸಿದ ತನಿಖಾಧಿಕಾರಿಗಳು ಹಣ ಸ್ವೀಕರಿಸುವಾಗ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ಲೋಕಾಯುಕ್ತ ಎಸ್.ಪಿ. ಅಶೋಕ್.ಕೆ.ವಿ ಮಾಹಿತಿ ನೀಡಿದರು