ಕರ್ನಾಟಕ ವಿಶ್ವವಿದ್ಯಾಲಯದಿಂದ ವಿಭಿನ್ನ ವ್ಯವಸ್ಥೆ ಜಾರಿ

ಕರ್ನಾಟಕ ವಿಶ್ವವಿದ್ಯಾಲಯದಿಂದ ವಿಭಿನ್ನ ವ್ಯವಸ್ಥೆ ಜಾರಿ

ಶೈಕ್ಷಣಿಕ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಎಲ್ಲ ಸೌಕರ್ಯಗಳು ಒಂದೇ ಸೂರಿನಡಿ ಸಿಗಬೇಕು ಅನ್ನುವ ಉದ್ದೇಶದಿಂದ ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆಯನ್ನು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯ ವಿಭಿನ್ನವಾಗಿ ಜಾರಿಗೊಳಿಸಿದೆ.

ಹೌದು ಉನ್ನತ ಶಿಕ್ಷಣ ಇಲಾಖೆ ಮೂಲಕ ಜಾರಿಗೆ ಬಂದಿರುವ ಈ ನೂತನ ಆನ್‌ಲೈನ್ ವ್ಯವಸ್ಥೆಯಡಿ ಧಾರವಾಡ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆ ವ್ಯಾಪ್ತಿಯಲ್ಲಿರುವ 269 ಕಾಲೇಜುಗಳ 42 ಸಾವಿರ ವಿದ್ಯಾರ್ಥಿಗಳು ನೇರ ಸೌಲಭ್ಯ ಪಡೆಯಲಾರಂಭಿಸಿದ್ದಾರೆ.
ಇನ್ನು ಸೆಂಟರ್ ಫಾರ್ ಸ್ಮಾರ್ಟ್ ಗವರ್ನೆನ್ಸ್ ಅಭಿವೃದ್ಧಿಪಡಿಸಿರುವ ಈ ತಂತ್ರಾಂಶದ ಮೂಲಕ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ದಾಖಲಾಗುವ ವಿದ್ಯಾರ್ಥಿಗಳ ಸಮಗ್ರ ದಾಖಲಾತಿ ನಿರ್ವಹಣೆ ನಡೆಯಲಿದೆ. ಇದರಲ್ಲಿ ವಿದ್ಯಾರ್ಥಿಗಳ ಪ್ರವೇಶ, ಹಾಜರಾತಿ, ವಿದ್ಯಾರ್ಥಿ ವೇತನ, ಪರೀಕ್ಷೆಯ ಮಾಹಿತಿ ಜೊತೆಗೆ ವಿಶ್ವವಿದ್ಯಾಲಯದ ಹಣಕಾಸು, ಸಿಬ್ಬಂದಿ ವೇತನ ಇತ್ಯಾದಿ ಮಾಹಿತಿಗಳ ದಾಖಲಾತಿಗೂ ಕೂಡಾ ಅವಕಾಶ ಕಲ್ಪಿಸಲಾಗಿದೆ. ಈ ಎಲ್ಲಾ ಮಾಹಿತಿಯು ಕರ್ನಾಟಕ ರಾಜ್ಯ ಮಾಹಿತಿ ಇಲಾಖೆಯ ಸರ್ವರ್‌ನ ಸ್ಮೃತಿ ಕೋಶದಲ್ಲಿ ದಾಖಲಾಗಿರಲಿದೆ.

ಅಲ್ಲದೇ ಈ ನೂತನ ವ್ಯವಸ್ಥೆಯಲ್ಲಿ ಪದವಿಗೆ ದಾಖಲಾಗಿರುವ ಮೊದಲ ವರ್ಷದ ವಿದ್ಯಾರ್ಥಿ ತನ್ನ ವಿಷಯ ಆಯ್ಕೆ, ಶುಲ್ಕ ಭರಿಸುವ ವ್ಯವಸ್ಥೆ ಈ ತಂತ್ರಾಂಶದ ಮೂಲಕವೇ ಮಾಡಬಹುದಾಗಿದೆ. ಇಲ್ಲಿ ವಿದ್ಯಾರ್ಥಿಗಳಿಗೆ ಮಾತ್ರವಲ್ಲ ಶಿಕ್ಷಕರು ಹಾಗೂ ಪ್ರಾಚಾರ್ಯರೂ ಸಹ ಅವರ ಹೊಣೆಯನ್ನು ನಿಭಾಯಿಸಬೇಕಾಗಿದೆ.  

ವಿದ್ಯಾರ್ಥಿಗಳ ಹಾಜರಾತಿ ಹಾಗೂ ಆಂತರಿಕ ಮೌಲ್ಯಮಾಪನ ಹೊಣೆಯನ್ನೂ ಉಪನ್ಯಾಸಕರು ನಿಭಾಯಿಸಬೇಕಿದೆ. ಕೋರ್ಸ್‌ಗೆ ದಾಖಲಾಗುವ ವಿದ್ಯಾರ್ಥಿಗೆ ಅನುಮತಿ ಹಾಗೂ ಶುಲ್ಕ ಪಾವತಿ ನಂತರ ಅನುಮೋದನೆ ನೀಡುವ ಹೊಣೆಯನ್ನು ಪ್ರಾಚಾರ್ಯರು ನಿಭಾಯಿಸಬೇಕಿದೆ. ನಂತರ ಇದು ವಿಶ್ವವಿದ್ಯಾಲಯದ ಮುಖ್ಯ ಕಚೇರಿಗೆ ಸಿಗಲಿದೆ.

ಒಟ್ಟಾರೆಯಾಗಿ ಧಾರವಾಡ ವಿಶ್ವವಿದ್ಯಾಲಯವು ಒಂದೇ ಸೂರಿನಡಿ ವಿದ್ಯಾರ್ಥಿಗಳಿಗೆ ವಿವಿಧ ಸೌಕರ್ಯಗಳನ್ನು ನೀಡಲು ಮುಂದಾಗಿರುವುದು ವಿದ್ಯಾರ್ಥಿಗಳಲ್ಲಿ ಹರ್ಷವನ್ನುಂಟು ಮಾಡಿದೆ.