274 ಸಹ ಪ್ರಾಧ್ಯಾಪಕರಿಗೆ ಪ್ರೊಫೆಸರ್ ಹುದ್ದೆಗೆ ಬಡ್ತಿ: ಅಶ್ವತ್ಥನಾರಾಯಣ

274 ಸಹ ಪ್ರಾಧ್ಯಾಪಕರಿಗೆ ಪ್ರೊಫೆಸರ್ ಹುದ್ದೆಗೆ ಬಡ್ತಿ: ಅಶ್ವತ್ಥನಾರಾಯಣ

ಬೆಂಗಳೂರು: ಇದೇ ಮೊದಲ ಬಾರಿಗೆ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ 274 ಸಹ ಪ್ರಾಧ್ಯಾಪಕರುಗಳಿಗೆ (ಅಸೋಸಿಯೇಟ್‌ ಪ್ರೊಫೆಸರ್ಸ್) ಪ್ರಾಧ್ಯಾಪಕರಾಗಿ ಬಡ್ತಿ ನೀಡಲು ರಾಜ್ಯ ಸರಕಾರವು ನಿರ್ಧರಿಸಿದೆ. ಈ ಸಂಬಂಧವಾಗಿ ಬುಧವಾರ (ಡಿಸೆಂಬರ್ 14) ಆದೇಶ ಹೊರಡಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ.

ಈ ಬಗ್ಗೆ ಗುರುವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸರಕಾರದ ಈ ನಿರ್ಧಾರದಿಂದ 274 ಸಹ ಪ್ರಾಧ್ಯಾಪಕರಿಗೆ ಮುಂಬಡ್ತಿ ಸಿಗಲಿದೆ. ಉನ್ನತ ಶಿಕ್ಷಣ ಇಲಾಖೆಯ ಭಾಗವಾಗಿರುವ ವೃತ್ತಿ ಸುಧಾರಣೆ ಆಯ್ಕೆ ಸಮಿತಿಯ ತೀರ್ಮಾನದ ಮೇಲೆ ಈ ಹೆಜ್ಜೆ ಇಡಲಾಗುತ್ತಿದೆ ಎಂದಿದ್ದಾರೆ.

ಯುಜಿಸಿ ಸಹ ಪ್ರಾಧ್ಯಾಪಕರಿಗೆ ಪ್ರೊಫೆಸರ್‍‌ಗಳಾಗಿ ಬಡ್ತಿ ನೀಡಬಹುದೆಂದು 2010ರಲ್ಲೇ ಹೇಳಿದೆ. ಆದರೆ ಕಳೆದ 12 ವರ್ಷಗಳಿಂದ ಈ ವಿಚಾರದಲ್ಲಿ ಯಾವ ಪ್ರಗತಿಯೂ ಆಗಿರಲಿಲ್ಲ. ಈಗ ಸರಕಾರವು 274 ಅಸೋಸಿಯೇಟ್‌ ಪ್ರೊಫೆಸರ್ ಗಳಿಗೆ ಬಡ್ತಿ ನೀಡಲು ಅಧಿಸೂಚನೆ ಹೊರಡಿಸಿದೆ ಎಂದು ಅವರು ತಿಳಿಸಿದ್ದಾರೆ.

ಉನ್ನತ ಶಿಕ್ಷಣ ಇಲಾಖೆ: ಸಿಬ್ಬಂದಿ ಸಮಸ್ಯೆ ಪರಿಹರಿಸಲು ಸಮಗ್ರ ಪೋರ್ಟಲ್‌ ಸಿದ್ಧ

ಉನ್ನತ ಶಿಕ್ಷಣ ಇಲಾಖೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ಕುಂದುಕೊರತೆಗಳನ್ನು ಸುಲಭವಾಗಿ ಪರಿಹರಿಸಲು ಸಮಗ್ರ ಪೋರ್ಟಲ್‌ ಅಭಿವೃದ್ಧಿಪಡಿಸಲಾಗುತ್ತಿದೆ. ಇದನ್ನು 'ಸುಶಾಸನ ದಿನ'ವಾದ ಡಿ.25ರಂದು ಉದ್ಘಾಟಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ.

ಇಲಾಖೆಯ ಸಿಬ್ಬಂದಿ ಎದುರಿಸುತ್ತಿರುವ ಸಮಸ್ಯೆಗಳನ್ನು ಆದಷ್ಟೂ ಮಟ್ಟಿಗೆ ನ್ಯಾಯಾಲಯದ ಹೊರಗೆಯೇ ನಿವಾರಿಸಲು ಸರಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಇದರ ಭಾಗವಾಗಿ ಪೋರ್ಟಲ್‌ ಸಿದ್ಧಪಡಿಸಲಾಗುತ್ತಿದೆ. ಇದರಲ್ಲಿ ಸರಳವಾಗಿ ಮತ್ತು ಪಾರದರ್ಶಕ ರೀತಿಯಲ್ಲಿ ಕುಂದುಕೊರತೆಗಳನ್ನು ಆಲಿಸಿ, ಪಿಂಚಣಿ, ಬಡ್ತಿ, ನಿಯೋಜನೆ, ವರ್ಗಾವಣೆ ಮುಂತಾದ ವಿಚಾರಗಳನ್ನು ಸುಲಭವಾಗಿ ಬಗೆಹರಿಸಲಾಗುವುದು ಎಂದು ಅವರು ತಿಳಿಸಿದರು.

ಉನ್ನತ ಶಿಕ್ಷಣದ ಹಂತದಲ್ಲಿ ಎನ್‌ಇಪಿಯಲ್ಲಿ ಅವಕಾಶವಿರುವ 'ಓಪನ್‌ ಎಲೆಕ್ಟೀವ್ಸ್‌' ಕುರಿತು ಹೆಚ್ಚಿನ ಜಾಗೃತಿ ಮೂಡಿಸಬೇಕು. ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಯನ್ನು ಇದರಿಂದ ಸ್ಪಷ್ಟವಾಗಿ ಗುರುತಿಸಬಹುದು. ಹಾಗೆಯೇ, ಪದವಿಯ ಅಂತಿಮ ವರ್ಷದಲ್ಲಿರುವ ವಿದ್ಯಾರ್ಥಿಗಳ ವಿವರಗಳನ್ನು ಸ್ಕಿಲ್‌ ಕನೆಕ್ಟ್‌ ಪೋರ್ಟಲ್‌ನಲ್ಲಿ ಕಡ್ಡಾಯವಾಗಿ ನಮೂದಿಸಬೇಕು. ಜತೆಗೆ, ಪದವೀಧರರಾಗಿ ಹೊರಹೋಗಿರುವ ವಿದ್ಯಾರ್ಥಿಗಳನ್ನೂ ಇದರಲ್ಲಿ ನೋಂದಾಯಿಸಬೇಕು. ಇದರಿಂದ ಆ ಮಕ್ಕಳಿಗೆ ಯಾವ ಕೌಶಲಗಳನ್ನು ಕಲಿಸಬಹುದು ಎನ್ನುವುದು ಉದ್ಯಮ ವಲಯದವರಿಗೂ ಗೊತ್ತಾಗುತ್ತದೆ. ಆದ್ದರಿಂದ ಎನ್‌ಇಪಿ ಬಗ್ಗೆ ಕಾಲೇಜು ಹಂತದಲ್ಲಿ ಇನ್ನೂ ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದು ಅವರು ಸೂಚಿಸಿದರು.