ಕರ್ನಾಟಕ ಬಜೆಟ್ 2023: ಕೊಪ್ಪಳದ ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ 100 ಕೋಟಿ ರೂಪಾಯಿ ಅನುದಾನ

ಕರ್ನಾಟಕ ಬಜೆಟ್ 2023: ಕೊಪ್ಪಳದ ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ 100 ಕೋಟಿ ರೂಪಾಯಿ ಅನುದಾನ

ಬೆಂಗಳೂರು, ಫೆಬ್ರವರಿ. 17: ಮುಂಬರುವ ವಿಧಾನಸಭಾ ಚುನಾವಣೆಗೆ ಬಿಜೆಪಿ ಭರ್ಜರಿಯಾಗಿ ಪ್ರಚಾರ ಆರಂಭಿಸಿದೆ. ಇದರಲ್ಲಿ ರಾಮ, ಆಂಜನೇಯ ಮತ್ತು ಟಿಪ್ಪು ಎಂಬ ಪದಗಳನ್ನಿಟ್ಟುಕೊಂಡು ಅಭಿಯಾನ ಆರಂಭಿಸಿದೆ. ಇದಕ್ಕೆ ಪೂರಕವಾಗಿ ಸಿಎಂ ಬಸವರಾಜ ಬೊಮ್ಮಾಯಿ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ 100 ಕೋಟಿ ರೂಪಾಯಿ ಅನುದಾನ ಘೋಷಿಸಿದ್ದಾರೆ.

ಬಜೆಟ್ ಮಂಡನೆ ಮಾಡಿರುವ ಬಸವರಾಜ ಬೊಮ್ಮಾಯಿ, " ಶ್ರೀ ಆಂಜನೇಯ ಜನ್ಮಸ್ಥಳವೆಂದು ಪ್ರಸಿದ್ಧವಾದ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟದಲ್ಲಿ ಪ್ರವಾಸಿಗಳಿಗೆ ಮೂಲಸೌಕರ್ಯ ಒದಗಿಸಲು 100 ಕೋಟಿ ರೂ. ಅಂದಾಜು ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು ಒಳಗೊಂಡ ವಿಸ್ತ್ರತವಾದ ಯೋಜನೆಯನ್ನು ತಯಾರಿಸಿ, ಟೆಂಡರ್ ಕರೆಯಲಾಗಿದೆ" ಎಂದು ತಿಳಿಸಿದ್ದಾರೆ.

ಇನ್ನು, ಅಂಜನಾದ್ರಿ ಬೆಟ್ಟಕ್ಕೆ ರೋಪ್‌ ವೇ ಮಾಡುವ ಬಗ್ಗೆ ಈ ಹಿಂದೆ ಕೇಂದ್ರ ಸಚಿವ ನಿತಿನ್ ಗಡ್ಕರಿ ರಾಜ್ಯ ಸಭೆಯಲ್ಲಿ ತಿಳಿಸಿದ್ದಾರೆ. ರಾಜ್ಯ ಸಭಾ ಸದಸ್ಯ ನಾರಾಯಣ ಕೊರಗಪ್ಪ ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ್ದರು. ಅಂಜನಾದ್ರಿ ಬೆಟ್ಟ ಸೇರಿ ನಂದಿಬೆಟ್ಟ, ಮುಳ್ಳಯ್ಯನಗಿರಿ, ಕೆಮ್ಮಣ್ಣುಗುಂಡಿ, ಚಾಮುಂಡಿ ಬೆಟ್ಟ, ಕೊಡಚಾದ್ರಿ, ದೇವರಾಯನದುರ್ಗಾ, ಮಧುಗಿರಿ ಕೋಟೆ, ಜೋಗಜಲಪಾತ, ಸಾಗರ ಹಿನ್ನೀರು, ಯಾಣ, ಜೋಯ್ಡಾ, ಚಪೇಲ, ಕುಮಾರಪರ್ವತ, ರಾಜ ಹೌಸ್ ಗಡ್ಡಕ್ಕೆ ರೋಪ್ ವೇ ನಿರ್ಮಿಸಲಾಗುವುದು ಎಂದು ತಿಳಿಸಿದ್ದರು.

ಬಜೆಟ್‌ನಲ್ಲಿ ಮಠ ಮಂದಿರಗಳ ಅಭಿವೃದ್ಧಿಗೆ 1,000 ಕೋಟಿ ರೂಪಾಯಿ, ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ 475 ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗಿದೆ.

"ರಾಜ್ಯದಲ್ಲಿನ ವಿವಿಧ ಸ್ಮಾರಕಗಳನ್ನು 3ಡಿ ಮ್ಯಾಪಿಂಗ್ ಮತ್ತು ಲೇಸರ್ ಸ್ಕ್ಯಾನಿಂಗ್ ಮೂಲಕ ಡಿಜಿಟಲೀಕರಿಸುವ ಕಾರ್ಯವನ್ನು ಪೂರ್ಣಗೊಳಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆ ಕರ್ನಾಟಕದ್ದಾಗಿದೆ. Adopt a Monument ಯೋಜನೆಯಡಿ ಕೊಪ್ಪಳ ಜಿಲ್ಲೆಯ ಆನೆಗುಂದಿಯ ಗಗನ್ ಮಹಲ್ ಮತ್ತು ವಿಜಯಪುರ ನಗರದ ತಾಜ್ ಬಾವಡಿ ಸ್ಮಾರಕಗಳ ಸಂರಕ್ಷಣೆಗೆ ಖಾಸಗಿ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗುತ್ತಿದೆ. ಮೈಸೂರಿನಲ್ಲಿರುವ ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗಾಗಿ ಕ್ರಮ ಕೈಗೊಳ್ಳಲಾಗುವುದು" ಎಂದು ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.