ಕದನ ವಿರಾಮ ಅಂತ್ಯ- ಉಕ್ರೇನ್‌ ವಶಪಡಿಸಿಕೊಳ್ಳುವವರೆಗೂ ಯುದ್ಧ ನಿಲ್ಲದು ಎಂದ ರಷ್ಯಾ

ಕದನ ವಿರಾಮ ಅಂತ್ಯ- ಉಕ್ರೇನ್‌ ವಶಪಡಿಸಿಕೊಳ್ಳುವವರೆಗೂ ಯುದ್ಧ ನಿಲ್ಲದು ಎಂದ ರಷ್ಯಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

36 ಗಂಟೆಗಳ ಕ್ರಿಸ್‌ಮಸ್‌ ಕದನ ವಿರಾಮ ಘೋಷಿಸಿದ್ದ ರಷ್ಯಾವು ಕದನ ವಿರಾಮವನ್ನು ಕೊನೆಗೊಳಿಸಿದ್ದು ಉಕ್ರೇನಿನ ಮೇಲೆ ಮತ್ತೆ ದಾಳಿ ಮುಂದುವರೆಸಿದೆ. ರಾತ್ರಿ ಪೂರ್ವ ಉಕ್ರೇನ್‌ನಲ್ಲಿನ ಪ್ರದೇಶಗಳ ಮೇಲೆ ರಷ್ಯಾ ಬಾಂಬ್‌ ದಾಳಿ ನಡೆಸಿದ್ದು ಘಟನೆಯಲ್ಲಿ ಒಬ್ಬ ಸಾವನ್ನಪ್ಪಿದ್ದಾನೆ ಎಂದು ಸ್ಥಳೀಯ ಅಧಿಕಾರಿಗಳು ಭಾನುವಾರ ಹೇಳಿದ್ದಾರೆ ಎಂದು ಮೂಲಗಳ ವರದಿ ಉಲ್ಲೇಖಿಸಿದೆ.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಶುಕ್ರವಾರದಂದು ರಷ್ಯಾ ಮತ್ತು ಉಕ್ರೇನ್‌ನ ಸಾಂಪ್ರದಾಯಿಕ ಕ್ರಿಸ್‌ಮಸ್ ವೀಕ್ಷಿಸಲು 36 ಗಂಟೆಗಳ ಕದನ ವಿರಾಮಕ್ಕೆ ಆದೇಶಿಸಿದರು. ಉಕ್ರೇನ್‌ ಒಪ್ಪಂದವನ್ನು ತಿರಸ್ಕರಿಸಿತು. ಪರಿಣಾಮ ಶೆಲ್‌ ದಾಳಿ ನಡೆಯಿತು. ರಷ್ಯಾದ ಶೆಲ್ ದಾಳಿಯ ಪರಿಣಾಮವಾಗಿ ಖಾರ್ಕಿವ್‌ನ ಈಶಾನ್ಯ ಪ್ರದೇಶದಲ್ಲಿ 50 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಪ್ರದೇಶದ ಗವರ್ನರ್ ಓಲೆಹ್ ಸಿನೆಹುಬೊವ್ ತಿಳಿಸಿದ್ದಾರೆ.

ಉಕ್ರೇನ್‌ನ ಡೊನೆಟ್ಸ್ಕ್ ಪ್ರದೇಶದ ಜರ್ಜರಿತ ನಗರವಾದ ಕ್ರಾಮಾಟೋರ್ಸ್ಕ್‌ನಲ್ಲಿ ಏಳು ಸೇರಿದಂತೆ ರಾತ್ರಿಯಿಡೀ ಈ ಪ್ರದೇಶದ ಮೇಲೆ ಒಂಬತ್ತು ಕ್ಷಿಪಣಿ ದಾಳಿಗಳು ನಡೆದಿವೆ ಎಂದು ಗವರ್ನರ್ ಪಾವ್ಲೊ ಕೈರಿಲೆಂಕೊ ಹೇಳಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ ಯಾವುದೇ ಪ್ರಾಣಹಾನಿಯಾಗಿಲ್ಲ. ಝಪೊರಿಝಿಯಾ ಪ್ರದೇಶದ ಆಡಳಿತ ಕೇಂದ್ರವಾದ ಝಪೊರಿಝಿಯಾ ನಗರದಲ್ಲಿಯೂ ಸ್ಫೋಟಗಳು ಕೇಳಿಬಂದಿವೆ

ಹೆಚ್ಚಿನ ಉಕ್ರೇನಿಯನ್ ಆರ್ಥೊಡಾಕ್ಸ್ ಕ್ರಿಶ್ಚಿಯನ್ನರು ಹಾಗು ರಷ್ಯಾದಲ್ಲಿ ಆರ್ಥೊಡಾಕ್ಸ್ ಕ್ರಿಶ್ಚಿಯನ್ನರು ಸಾಂಪ್ರದಾಯಿಕವಾಗಿ ಕ್ರಿಸ್ಮಸ್ ಅನ್ನು ಜನವರಿ 7 ರಂದು ಆಚರಿಸುತ್ತಾರೆ. ಆದರೆ ಈ ಬಾರಿ ಕದನದ ಹಿನ್ನೆಲೆಯಲ್ಲಿ ಆರ್ಥೊಡಾಕ್ಸ್ ಚರ್ಚ್ ಆಫ್ ಉಕ್ರೇನ್ ಡಿಸೆಂಬರ್ 25 ರ ಆಚರಣೆಗೆ ಅವಕಾಶ ಮಾಡಿಕೊಟ್ಟಿತ್ತು.

ಕದನ ವಿರಾಮ ಅಂತ್ಯಗೊಂಡ ನಂತರ ರಷ್ಯಾದ ದಾಳಿ ಮುಂದುವರೆದಿದ್ದು ಉಕ್ರೇನಿನ ಮೇಲೆ ವಿಜಯ ಸಾಧಿಸುವವರೆಗೆ ಯುದ್ಧ ನಿಲ್ಲುವುದಿಲ್ಲ ಎಂದು ಹೇಳಿದೆ. ಉಕ್ರೇನ್‌ ವಶಪಡಿಸಿಕೊಳ್ಳಲು ಜಾರಿ ಮಾಡಲಾದ ವಿಶೇಷ ಮಿಲಿಟರಿ ಕಾರ್ಯಾಚರಣೆ ಮುಂದುವರೆಯುತ್ತದೆ ಎಂದು ರಷ್ಯಾ ಹೇಳಿರುವುದಾಗಿ ಮೂಲಗಳು ವರದಿ ಮಾಡಿವೆ.