ಇಬ್ಬರು ಸಚಿವರು, ಸಂಸದ, ಮಾಜಿ ಡಿಸಿಎಂ ಸೇರಿ ಹಲವು ಬಿಜೆಪಿ ನಾಯಕರು ಕಾಂಗ್ರೆಸ್ ಸೇರ್ಪಡೆ?

ಬೆಂಗಳೂರು, ಮಾರ್ಚ್ 23: ಕರ್ನಾಟಕ ವಿಧಾನಸಭೆ ಚುನಾವಣೆಗೆ ( Karnataka Assembly Elections 2023 ) ಕೆಲ ದಿನಗಳು ಬಾಕಿ ಉಳಿದಿವೆ. ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳಗಣಿಗೆಗಳು ನಡೆಯುತ್ತಿವೆ. ಪಕ್ಷಾಂತರವೂ ಜೋರಾಗಿ ನಡೆಯುತ್ತಿದೆ. ಬಿಜೆಪಿ ( BJP ) ಹಾಗೂ ಜೆಡಿಎಸ್‌ನಿಂದ ( JDS ) ಕಾಂಗ್ರೆಸ್‌ಗೆ ( Congress ) ಸೇರ್ಪಡೆಗೊಳ್ಳುವವರ ಸಂಖ್ಯೆ ಏರುತ್ತಲೇ ಇದೆ.
ನಾಲ್ಕು ಬಾರಿ ಬಿಜೆಪಿ ಎಂಎಲ್‌ಸಿ ಆಗಿದ್ದ ಪುಟ್ಟಣ್ಣ ಅವರು ಕಳೆದ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು. ಅವರು ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ನಾಲ್ಕು ಬಾರಿ ಆಯ್ಕೆಯಾಗಿದ್ದರು. ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿರುವುದು ಕೇಸರಿ ಪಕ್ಷಕ್ಕೆ ಭಾರೀ ಹಿನ್ನೆಡೆಯಾಗಿದೆ. ಇನ್ನು ಬುಧವಾರ ಬಿಜೆಪಿ ಎಂಎಲ್‌ಸಿ ಬಾಬುರಾವ್ ಚಿಂಚನಸೂರ್ ಅವರು ಕಾಂಗ್ರೆಸ್ ಸೇರಿದರು. ಅವರು ಕಲಬುರಗಿ ಭಾಗದ ಕಬ್ಬಲಿಗ ಸಮುದಾಯಕ್ಕೆ ಸೇರಿದವರು. ಅವರ ಸೇರ್ಪಡೆಯಿಂದ ಕಲಬುರಗಿ ಭಾಗದಲ್ಲಿ ಬಿಜೆಪಿಗೆ ಹಿನ್ನೆಡೆ ಉಂಟಾಗಿದೆ.
ಜೆಡಿಎಸ್ ನಾಯಕರು ಕಾಂಗ್ರೆಸ್ ಸೇರ್ಪಡೆ
ಜೆಡಿಎಸ್‌ನ ಪ್ರಬಲ ನಾಯಕರಾಗಿದ್ದ, ಅರಸಿಕೆರೆ ಎಂಎಲ್‌ಎ ಶಿವಲಿಂಗೇಗೌಡರು ಕಾಂಗ್ರೆಸ್ ಸೇರಿದ್ದಾರೆ. ಈ ಹಿನ್ನೆಲೆಯಲ್ಲಿ ಹಾಸನದಲ್ಲಿ ಜೆಡಿಎಸ್‌ಗೆ ಪೆಟ್ಟು ಬಿದ್ದಂತಾಗಿದೆ. ಒಕ್ಕಲಿಗ ಸಮುದಾಯಕ್ಕೆ ಸೇರಿದ ಶಿವಲಿಂಗೇಗೌಡರು ಜೆಡಿಎಸ್‌ನ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದರು. ಇನ್ನು ಜೆಡಿಎಸ್ ನಾಯಕರಾಗಿದ್ದ, ಕೊರಟಗೆರೆ ಮಾಜಿ ಶಾಸಕ ವೈಎಸ್‌ವೈ ದತ್ತಾ ಅವರು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಈ ಭಾರಿ ಕೊರಟಗೆರೆ ಕಾಂಗ್ರೆಸ್ ಟಿಕೆಟ್ ಅವರಿಗೆ ಸಿಗುವುದು ಬಹುತೇಕ ಖಚಿತವಾಗಿದೆ. ಪ್ರಾಮಾಣಿಕ ರಾಜಕಾರಣಿಯೆಂದೇ ಖ್ಯಾತರಾಗಿರುವ ವೈಎಸ್‌ವಿ ದತ್ತಾ ಸೇರ್ಪಡೆಯಿಂದ ಕಾಂಗ್ರೆಸ್‌ಗೆ ನೈತಿಕ ಸ್ಥೈರ್ಯ ಬಂದಂತಾಗಿದೆ ಎಂಬುದು ರಾಜಕೀಯ ತಜ್ಞರ ಅಭಿಪ್ರಾಯವಾಗಿದೆ.
ಕಲಬುರಗಿ ಭಾಗದ ಬಿಜೆಪಿ ನಾಯಕರು ಕಾಂಗ್ರೆಸ್ ಸೇರುವ ಸಾಧ್ಯತೆ
ಕಲಬುರಗಿ ಭಾಗದ ಕೆಲ ಬಿಜೆಪಿ ನಾಯಕರು ಕಾಂಗ್ರೆಸ್ ಸೇರುವ ಸಾಧ್ಯತೆಗಳು ಇವೆ ಎಂದು ಕಾಂಗ್ರೆಸ್‌ನ ಬಲ್ಲ ಮೂಲಗಳು ತಿಳಿಸಿವೆ. ಆ ಭಾಗದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪ್ರಭಾವವನ್ನು ಬಳಸಿಕೊಳ್ಳುವುದಕ್ಕೆ ಕಾಂಗ್ರೆಸ್ ಅಣಿಯಾಗಿದೆ.
ಉಮೇಶ್ ಜಾಧವ್ 'ಕೈ' ಹಿಡಿಯುವ ಸಾಧ್ಯತೆ
ಬಾಬುರಾವ್ ಚಿಂಚನಸೂರ್ ಅವರೂ ಸಹ ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದವರು. ಅವರು ಖರ್ಗೆ ಅವರ ಶಿಷ್ಯರೆಂದೇ ಗುರುತಿಸಿಕೊಂಡಿದ್ದವರು. ಈ ಹಿನ್ನೆಲೆಯಲ್ಲಿ ನೋಡುವುದಾದರೆ, ಈಗ ಬಿಜೆಪಿಯಲ್ಲಿ ಸಂಸದರಾಗಿರುವ ಉಮೇಶ್ ಜಾಧವ್ ಅವರು ಖರ್ಗೆ ಶಿಷ್ಯರಾಗಿದ್ದವರು. ಕರ್ನಾಟಕ ಚುನಾವಣೆಗೂ ಮುನ್ನ ಕಾಂಗ್ರೆಸ್ ಕೈ ಹಿಡಿಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಚಿವ ಬಸವರಾಜ ಬೈರತಿ ಸೇರ್ಪಡೆ ಸಾಧ್ಯತೆ
ಕಾಂಗ್ರೆಸ್‌ನಿಂದ ಬಿಜೆಪಿ ಸೇರ್ಪಡೆಗೊಂಡಿರುವ ಸಚಿವ ಬಸವರಾಜ ಬೈರತಿ ಅವರು ಮತ್ತೆ ಕಾಂಗ್ರೆಸ್‌ಗೆ ಸೇರ್ಪಡೆ ಆಗಲಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಪ್ರಸ್ತುತ ಸಚಿವರಾಗಿರುವ ಅವರು ಚುನಾವಣೆ ನೀತಿ ಸಂಹಿತೆ ಜಾರಿಯಾದ ನಂತರ 'ಕೈ' ಹಿಡಿಯಲಿದ್ದಾರೆ ಎನ್ನಲಾಗುತ್ತಿದೆ. ಅವರು ಶಾಸಕರಾಗಿರುವ ಕೆಆರ್ ಪುರಂನಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ನಂದೀಶ್ ರೆಡ್ಡಿ ಅವರು ಅಡ್ಡಗಾಲು ಹಾಕುತ್ತಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಬೈರತಿ ಮತ್ತೆ ಕಾಂಗ್ರೆಸ್ ಕೈ ಹಿಡಿಯಲಿದ್ದರೆ ಎಂಬ ಮಾತುಗಳು ಕೇಳಿಬಂದಿವೆ.
ಸಚಿವ ಕೆ ಸಿ ನಾರಾಯಣಗೌಡ ಸೇರ್ಪಡೆ ಸಾಧ್ಯತೆ
ಪ್ರಸ್ತುತ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿರುವ ಕೆ ಸಿ ನಾರಾಯಣಗೌಡ ಅವರು ಕಾಂಗ್ರೆಸ್‌ಗೆ ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ. ಅವರು 2019ರಲ್ಲಿ ಜೆಡಿಎಸ್‌ನಿಂದ ಬಿಜೆಪಿಗೆ ಸೇರ್ಪಡೆಗೊಂಡು ಕೆಆರ್ ಪೇಟೆ ಶಾಸಕರಾಗಿ ಮರು ಆಯ್ಕೆ ಆದರು. ಈ ಮತ್ತೆ ಕಾಂಗ್ರೆಸ್ ಸೇರುವ ನಿಟ್ಟಿನಲ್ಲಿ ಚಿಂತನೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
'ಕೈ' ಹಿಡಿಯಲಿದ್ದಾರೆಯೇ ಲಕ್ಷ್ಮಣ ಸವದಿಮಾಜಿ ಡಿಸಿಎಂ, ಅಥಣಿ ಕ್ಷೇತ್ರದ ಮಾಜಿ ಶಾಸಕ ಲಕ್ಷ್ಮಣ ಸವದಿ ಅವರು ಕಾಂಗ್ರೆಸ್ ಕೈಹಿಡಿಯಲಿದ್ದಾರೆ ಎಂಬ ಶಂಕೆಗಳು ವ್ಯಕ್ತವಾಗಿವೆ. ಅಥಣಿ ಕ್ಷೇತ್ರದಲ್ಲಿ ಅವರಿಗೆ ರಮೇಶ್ ಜಾರಕಿಹೊಳಿ ಅಡ್ಡಗಾಲಾಗಿದ್ದಾರೆ ಎಂಬುದು ಗೊತ್ತಿರುವ ವಿಚಾರ. ಹೀಗಾಗಿ ಅವರು ಕಾಂಗ್ರೆಸ್ ಸೇರುವ ಸಾಧ್ಯತೆಗಳಿವೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದೆ.