ಚುನಾವಣಾ ಹೊತ್ತಲಿ ಮಮತಾ ಬ್ಯಾನರ್ಜಿ-ಎಚ್‌ಡಿ ಕುಮಾರಸ್ವಾಮಿ ನಡುವೆ ಮೀಟಿಂಗ್ ಫಿಕ್ಸ್! ಕಾರಣ ಇಲ್ಲಿದೆ

ಕೋಲ್ಕತ್ತಾ, ಮಾರ್ಚ್23: 2023 ರ ವಿಧಾನಸಭಾ ಚುನಾವಣೆಗೆ ವೇದಿಕೆ ಸಜ್ಜಾಗಿದ್ದು, ಈ ಬಾರೀ ಪಕ್ಷವನ್ನ ಅಧಿಕಾರಕ್ಕೆ ತರಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಪಣ ತೊಟ್ಟಿದ್ದು, ರಾಜ್ಯಾದ್ಯಂತ ಪಂಚರತ್ನ ರಥಯಾತ್ರೆಯನ್ನ ನಡೆಸುತ್ತಿದ್ದಾರೆ.
ಇತ್ತ 2023 ರ ವಿಧಾನಸಭಾ ಚುನಾವಣೆ ನಡುವೆ 2024ರ ಲೋಕಸಭಾ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇರುವ ಹಿನ್ನೆಲೆ ದೇಶದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಬಿಜೆಪಿ ವಿರುದ್ದ ಕಾಂಗ್ರೆಸ್ ಹಾಗೂ ಬಿಜೆಪಿಯೇತರ ಪ್ರಾದೇಶಿಕ ಪಕ್ಷಗಳ ಒಕ್ಕೂಟ ರಚಿಸುವ ತಂತ್ರಗಾರಿಕೆಗೆ ಪ್ಲಾನ್ ನಡೆಸಿದ್ದಾರೆ ಎನ್ನಲಾಗಿದೆ.
ಇತ್ತೀಚೆಗೆ ಜೆಡಿಎಸ್ ನಾಯಕ ಎಚ್ .ಡಿ. ಕುಮಾರಸ್ವಾಮಿ ಅವರು ಸಮಾಜವಾದಿ ಪಕ್ಷದ ಮುಖ್ಯಸ್ಥರಾದ ಅಖಿಲೇಶ್ ಯಾದವ್‌ರನ್ನು ಭೇಟಿಯಾಗಿದ್ದರು. ಇದೀಗ ಶುಕ್ರವಾರ ಸಂಜೆ 4 ಗಂಟೆಗೆ ಕೊಲ್ಕತ್ತಾದ ಭವಾನಿಪುರದಲ್ಲಿರುವ ಮಮತಾ ಬ್ಯಾನರ್ಜಿ ಅವರ ನಿವಾಸದಲ್ಲಿ ಎಚ್‌ಡಿ ಕುಮಾರಸ್ವಾಮಿ ಅವರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾಗಲಿದ್ದಾರೆ ಎಂದು ಟಿಎಂಸಿ ಮೂಲಗಳು ತಿಳಿಸಿವೆ.ಇನ್ನೂ ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಅವರು ದೀದಿ ಭೇಟಿ ಸಾಕಷ್ಟು ಕುತೂಹಲವನ್ನ ಹುಟ್ಟಿಸಿದೆ.
ಇನ್ನ ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಹಾಗೂಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ದೇಶದ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಅಲ್ಲದೇ 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸುವ ತಂತ್ರಗಳ ಬಗ್ಗೆಯೂ ಮಾತುಕತೆ ನಡೆಯಲಿದೆ ಎನ್ನಲಾಗಿದೆ. ಇನ್ನೂ ಈ ಬಾರೀ ಬಿಜೆಪಿಯನ್ನ ಅಧಿಕಾರದಿಂದ ದೂರ ಇಡಬೇಕು ಎಂದು ಕಾಂಗ್ರೆಸ್ ಮತ್ತು ಬಿಜೆಪಿಯೇತರ ಪ್ರಾದೇಶಿಕ ಪಕ್ಷಗಳಲ್ಲಿ ಒಮ್ಮತ ರೂಪಿಸುವ ಸಲುವಾಗಿ ಈ ಮಾತುಕತೆಗಳು ನಡೆಯುತ್ತಿವೆ ಎಂದು ಟಿಎಂಸಿ ನಾಯಕರು ಹೇಳಿದ್ದಾರೆ.
ಇನ್ನು, ಕಳೆದ 2019ರ ಲೋಕಸಭೆ ಚುನಾವಣೆಗೂ ಮುನ್ನ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕರೆದಿದ್ದ ವಿರೋಧ ಪಕ್ಷಗಳ ಸಭೆಯಲ್ಲಿಯೂ ಕೂಡ ಜೆಡಿಎಸ್ ನಾಯಕ ಎಚ್.ಡಿ ಕುಮಾರಸ್ವಾಮಿ ಭಾಗವಹಿಸಿದ್ದರು. ಇನ್ನೂ ಕಾಂಗ್ರೆಸ್ಸೇತರ ಹಾಗೂ ಬಿಜೆಪಿಯೇತರ ನಾಯಕರ ಜೊತೆಗೆ ಮಮತಾ ಬ್ಯಾನರ್ಜು ನಡೆಸುತ್ತಿರುವ ಮೂರನೇ ಸಭೆಯಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಇನ್ನೂ ಪಚ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇಂದು (ಗುರುವಾರ) ಒಡಿಶಾಕ್ಕೆ ತೆರಳಲಿದ್ದು, ಅಲ್ಲಿನ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಯವ ಸಾಧ್ಯತೆ ಇದೆ.
2024 ರ ಚುನಾವಣೇಗೆ ಕಾಂಗ್ರೆಸ್ಸೇತರ ಹಾಗೂ ಬಿಜೆಪಿಯೇತರ ಪಕ್ಷಗಳ ಜೊತೆಗೆ ಸಾಲು ಸಾಲು ಸಭೆಗಳನ್ನ ನಡೆಸುತ್ತಿದ್ದು, ಕಳೆದ ವಾರ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಮಮತಾ ಬ್ಯಾನರ್ಜಿ ನಡುವೆ ಮಾತುಕತೆ ನಡೆದಿದ್ದು, ಸಭೆಯ ಬಳಿಕ ಬಿಜೆಪಿ ಹಾಗೂ ಕಾಂಗ್ರೆಸ್‌ನಿಂದ ಸಮಾನ ಅಂತರ ಕಾಯ್ದುಕೊಳ್ಳುವುದಾಗಿ ಸಮಾಜವಾದಿ ಪಕ್ಷ ಮತ್ತು ಟಿಎಂಸಿ ಘೋಷಿಸಿದ್ದವು. ಅದಲ್ಲದೇ ಪ್ರಾದೇಶಿಕ ಪಕ್ಷಗಳನ್ನು ಒಟ್ಟುಗೂಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವುದಾಗಿಯೂ ಹೇಳಿದ್ದವು.
ಇನ್ನು 2023 ರ ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯುತ್ತಿರುವುದರಿಂದ ಹೊರ ರಾಜ್ಯದ ಪ್ರಾದೇಶಿಕ ಪಕ್ಷಗಳ ನಡುವೆ ಉತ್ತಮ ಸಂಬಂಧ ಹೊಂದಿರುವ ದಳಪತಿಗಳು ಚುನಾವಣಾ ಪ್ರಚಾರಕ್ಕೆ ಈ ಬಾರೀ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಕೂಡ ಪ್ರಚಾರಕ್ಕೆ ಆಹ್ವಾನಿಸುವ ಸಾಧ್ಯತೆ ಇದೆ. ಈಗಾಗಲೇ ರಾಜ್ಯದ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ತಮ್ಮ ತಮ್ಮ ಹೈಕಮಾಂಡ್ ನಾಯಕರನ್ನ ಕರೆಸುವ ಮೂಲಕ ಚುನಾವಣಾ ಪ್ರಚಾರವನ್ನ ನಡೆಸುತ್ತಿದ್ದು, ಇತ್ತ ಎರಡು ರಾಷ್ಟ್ರೀಯ ಪಕ್ಷಗಳಿಗೆ ಠಕ್ಕರ್ ಕೊಡಲು ದಳಪತಿಗಳು ಅನ್ಯ ರಾಜ್ಯದ ಪ್ರಾದೇಶಿಕ ಪಕ್ಷಗಳ ನಾಯಕರನ್ನ ಕರೆತರುವ ಪ್ಲಾನ್ ನಡೆಸಿದ್ದಾರೆ ಎನ್ನಲಾಗಿದೆ.
ರಾಷ್ಟ್ರ ರಾಜಕಾರಣದತ್ತ ಎಚ್.ಡಿ.ಕುಮಾರಸ್ವಾಮಿ?
2023 ಚುನಾವಣಾ ಪ್ರಚಾರದ ವೇಳೆ ರಾಮನಗರಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಇದೇ ನನ್ನ ಕೊನೆಯ ವಿಧಾನಸಭಾ ಚುನಾವಣೆ ಎಂದು ಘೋಷಣೆ ಮಾಡಿದ್ದರು. ಈ ಹೇಳಿಕೆ ಕುಮಾರಸ್ವಾಮಿ ರಾಜಕೀಯವಾಗಿ ನಿವೃತ್ತಿ ಘೋಷಣೆ ಮಾಡುತ್ತಾರಾ ಎಂಬ ಚರ್ಚೆಗಳಿಗೆ ಕಾರಣವಾಗಿತ್ತು. ಆದರೆ, ಕೊನೆ ವಿಧಾನಸಭಾ ಚುನಾವಣೆ ಎಂದಿದ್ದ ಕುಮಾರಸ್ವಾಮಿ ಮತ್ತೆ ರಾಷ್ಟ್ರ ರಾಜಕಾರಣಕ್ಕೆ ಪ್ರವೇಶಿಸುವ ಸೂಚನೆಯನ್ನು ನೀಡಿದ್ದರು.
ಈಗಾಗಲೇ ಬಿಆರ್‌ಎಸ್ ಮುಖ್ಯಸ್ಥ ಹಾಗೂ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಜೊತೆ ಎಚ್. ಡಿ ಕುಮಾರಸ್ವಾಮಿ ಮಾತುಕತೆ ನಡೆಸಿದ್ದು, ಈಗ ಮಮತಾ ಬ್ಯಾನರ್ಜಿ ಅವರ ಜೊತೆ ಮಾತುಕತೆ ನಡೆಸುತ್ತಿರುವುದು ಕರ್ನಾಟಕ ರಾಜಕೀಯದಲ್ಲಿ ಕುತೂಹಲ ಮೂಡಿಸಿದೆ. ಕುಮಾರಸ್ವಾಮಿ ಮತ್ತೆ ರಾಷ್ಟ್ರ ರಾಜಕಾರಣಕ್ಕೆ ಮರಳುತ್ತಾರೆ ಎಂಬುದಕ್ಕೆ ಪುಷ್ಠಿ ಕೊಟ್ಟಂತಿದೆ.