ಇಂಗ್ಲೆಂಡ್ ಗೋಲು ತಪ್ಪಲು ಕಪ್ಪುವರ್ಣೀಯರು ಕಾರಣ: ಸಾಮಾಜಿಕ ತಾಣದ ಚರ್ಚೆ, ಆಕ್ಷೇಪ

ಲಂಡನ್: ಯೂರೊ ಕಪ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ಫೈನಲ್ ಪಂದ್ಯದ ಪೆನಾಲ್ಟಿ ಶೂಟೌಟ್‌ನಲ್ಲಿ ಇಂಗ್ಲೆಂಡ್ ಸೋಲಿಗೆ ಕಪ್ಪು ವರ್ಣೀಯ ಆಟಗಾರರು ಕಾರಣ ಎಂಬ ಆರೋಪ ವಿವಾದದ ಸ್ವರೂಪ ಪಡೆದುಕೊಂಡಿದೆ.
ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಬಂದಿರುವ ಪೋಸ್ಟ್‌ಗಳಿಗೆ ಬ್ರಿಟನ್ ಪ್ರಧಾನಿ, ರಾಜಕೀಯ-ಸಾಮಾಜಿಕ-ಕ್ರೀಡಾ ವಲಯದಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಇಟಲಿ ಎದುರಿನ ಪಂದ್ಯದಲ್ಲಿ ಇಂಗ್ಲೆಂಡ್ ಪರ ಪೆನಾಲ್ಟಿ ಕಿಕ್ ತೆಗೆದುಕೊಂಡ ಕಪ್ಪು ವರ್ಣೀಯರಾದ ಮಾರ್ಕಸ್ ರಷ್‌ಫೋರ್ಡ್, ಜೇಡನ್ ಸಾಂಚೊ ಮತ್ತು ಬುಕಾಯೊ ಸಾಕ ಚೆಂಡನ್ನು ಗುರಿಮುಟ್ಟಿಸುವಲ್ಲಿ ವಿಫಲರಾಗಿದ್ದರು. ಇದನ್ನೇ ಪ್ರಮುಖ ವಿಷಯವಾಗಿರಿಸಿಕೊಂಡು ಫುಟ್‌ಬಾಲ್ ಪ್ರಿಯರು ತಂಡದ ವಿರುದ್ಧ ಟೀಕೆಗಳ ಮಳೆ ಸುರಿಸಿದ್ದರು. ಕೆಲವರು ಕಪ್ಪು ವರ್ಣೀಯರನ್ನೇ ಗುರಿ ಇಟ್ಟು ಆಕ್ಷೇಪ ವ್ಯಕ್ತಪಡಿಸಿದ್ದರು.
ಇಂಗ್ಲೆಂಡ್ ಆಟಗಾರ ರಹೀಂ ಸ್ಟರ್ಲಿಂಗ್ ಮೇಲೆಯೂ ಕೆಲವರು ಆರೋಪ ಮಾಡಿದ್ದು ಡೆನ್ಮಾರ್ಕ್ ಎದುರಿನ ಸೆಮಿಫೈನಲ್ ಪಂದ್ಯದಲ್ಲಿ ಮೋಸದ ಮೂಲಕ ಪೆನಾಲ್ಟಿ ಅವಕಾಶವನ್ನು ಪಡೆದುಕೊಂಡು ತಂಡದ ಘನತೆಗೆ ಕುಂದು ತಂದಿದ್ದಾರೆ ಎಂದು ಹೇಳಿದ್ದಾರೆ.
ವರ್ಣಭೇದ ನೀತಿ ಮತ್ತು ಜನಾಂಗೀಯ ನಿಂದನೆ ವಿರುದ್ಧ ಟೂರ್ನಿಯುದ್ದಕ್ಕೂ ಇಂಗ್ಲೆಂಡ್ ಕಾಳಜಿಯನ್ನು ತೋರಿತ್ತು. ಭಾನುವಾರದ ಫೈನಲ್ ಸೇರಿದಂತೆ ಎಲ್ಲ ಪಂದ್ಯಗಳ ಆರಂಭಕ್ಕೂ ಮೊದಲು ಮೊಣಕಾಲೂರಿ ಕಪ್ಪುವರ್ಣೀಯರಿಗೆ ಬೆಂಬಲ ಸೂಚಿಸುವ ಸಂದೇಶ ಸಾರಿತ್ತು. ಆದರೂ ಜನಾಂಗೀಯ ನಿಂದನೆಯ ಮಾತುಗಳು ಕೇಳಿಬಂದಿದ್ದು ನೋವಿನ ಸಂಗತಿ ಎಂದು ಇಂಗ್ಲೆಂಡ್ ತಂಡದ ಕೋಚ್ ಗರೆತ್ ಸೌತ್‌ಗೇಟ್ ಪ್ರತಿಕ್ರಿಯಿಸಿದ್ದರು.
ಪತ್ನಿ ಮತ್ತು ಪುತ್ರನೊಂದಿಗೆ ಫೈನಲ್ ಪಂದ್ಯ ವೀಕ್ಷಿಸಿದ ರಾಜಕುಮಾರ ವಿಲಿಯಂ 'ಕಪ್ಪು ವರ್ಣೀಯರ ನಿಂದನೆ ವೈಯಕ್ತಿಕವಾಗಿ ನೋವು ತಂದಿದೆ' ಎಂದು ಹೇಳಿದ್ದಾರೆ. ನಿಂದನೆಯನ್ನು ಖಂಡಿಸಿ ಇಂಗ್ಲೆಂಡ್ ಫುಟ್‌ಬಾಲ್ ಸಂಸ್ಥೆ (ಎಫ್‌ಎ) ಸೋಮವಾರ ಬೆಳಿಗ್ಗೆಯೇ ಹೇಳಿಕೆ ಬಿಡುಗಡೆ ಮಾಡಿದೆ.
ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಕಪ್ಪುವರ್ಣೀಯರ ನಿಂದನೆಗೆ ಕಟು ಮಾತುಗಳಲ್ಲಿ ಉತ್ತರಿಸಿದ್ದು '2021ನೇ ಇಸವಿಯಲ್ಲೂ ಇಂಥ ಮಾತುಗಳು ಕೇಳಿಬರುತ್ತಿರುವುದು ಬೇಸರದ ವಿಷಯ. ದೇಶಕ್ಕಾಗಿ ಮತ್ತು ತಂಡಕ್ಕಾಗಿ ತ್ಯಾಗ ಮಾಡಿದ, ಫುಟ್‌ಬಾಲ್ ಪ್ರಿಯರಿಗೆ ಇಷ್ಟು ಕಾಲ ಖುಷಿ ನೀಡಿದ ಆಟಗಾರರನ್ನು ನಿಂದಿಸುವುದು ಎಷ್ಟರ ಮಟ್ಟಿಗೆ ಸರಿ' ಎಂದು ಪ್ರಶ್ನಿಸಿದ್ದಾರೆ.
ಪೋಸ್ಟ್ ಅಳಿಸಿ ಹಾಕಿದ ಫೇಸ್‌ಬುಕ್
ವಿವಾದಕ್ಕೆ ಸಂಬಂಧಿಸಿ ಹೇಳಿಕೆ ನೀಡಿರುವ ಫೇಸ್‌ಬುಕ್ ಆಡಳಿತ 'ಇಂಗ್ಲೆಂಡ್ ಆಟಗಾರರನ್ನು ನಿಂದಿಸಿದ ಪೋಸ್ಟ್‌ಗಳನ್ನು ತಕ್ಷಣವೇ ಅಳಿಸಿ ಹಾಕಿದ್ದು ಅಂಥವರ ಖಾತೆಗಳನ್ನು ರದ್ದುಪಡಿಸಲಾಗಿದೆ. ನಿಯಮಗಳನ್ನು ಉಲ್ಲಂಘಿಸಿದವರ ಮೇಲೆ ಸಂಸ್ಥೆ ಕಠಿಣ ಕ್ರಮ ಕೈಗೊಳ್ಳಲಿದೆ' ಎಂದು ತಿಳಿಸಿದೆ.
ನಿಂದನೆಯ ಬಗ್ಗೆ ಮಾಹಿತಿ ಲಭಿಸಿದೆ. ಇಂಥ ಪ್ರವೃತ್ತಿಯನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಆ ಪೋಸ್ಟ್‌ಗಳ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಪೊಲೀಸರು ಭರವಸೆ ನೀಡಿದ್ದಾರೆ.
ಬುಕಾಯೊ ಸಾಕಗೆ ಅವಕಾಶ: ಖಂಡನೆ
ಇಂಗ್ಲೆಂಡ್‌ನ ನಿರ್ಣಾಯಕ ಐದನೇ ಪೆನಾಲ್ಟಿ ಕಿಕ್ ತೆಗೆಯಲು ಯುವ ಆಟಗಾರ ಬುಕಾಯೊ ಸಾಕ ಅವರಿಗೆ ಅವಕಾಶ ನೀಡಿದ್ದು ಸರಿಯಲ್ಲ ಎಂದು ಮಾಜಿ ಫುಟ್‌ಬಾಲ್ ಆಟಗಾರ, ಮ್ಯಾಂಚೆಸ್ಟರ್ ಯುನೈಟೆಡ್ ತಂಡದ ನಾಯಕನಾಗಿದ್ದ ರಾಯ್ ಕೀನ್ ಅಭಿಪ್ರಾಯಪಟ್ಟಿದ್ದಾರೆ.
19 ವರ್ಷದ ಸಾಕ ಅವರ ಕಿಕ್ ಎದುರಾಳಿ ತಂಡದ ಗೋಲ್‌ಕೀಪರ್ ಗ್ಯಾನ್‌ಲೂಗಿ ಡೊನರುಮಾ ಸುಲಭವಾಗಿ ತಡೆದಿದ್ದರು. ಅನುಭವಿ ಆಟಗಾರನಿಗೆ ಈ ಅವಕಾಶ ನೀಡಬೇಕಾಗಿತ್ತು ಎಂದು ರಾಯ್ ಕೀನ್ ಹೇಳಿದ್ದಾರೆ.
ಈ ಮಾತಿಗೆ ದನಿಗೂಡಿಸಿರುವ ರೋಮಾ ಕ್ಲಬ್ ಮ್ಯಾನೇಜರ್ ಜೋಸ್ ಮೌರಿನ್ಹೊ 'ದೇಶದ ನಿರೀಕ್ಷೆಯನ್ನು ಯುವ ಆಟಗಾರನ ಹೆಗಲಿಗೆ ಹಾಕಿದ್ದು ಸರಿಯಲ್ಲ. ಅನುಭವ ಇಲ್ಲದ ಆಟಗಾರರು ಅಂಥ ಒತ್ತಡವನ್ನು ಮೀರಿ ನಿಲ್ಲಲು ಸಾಧ್ಯವಿಲ್ಲ' ಎಂದಿದ್ದಾರೆ.