ಡಿಸಿಪಿ ನಿಶಾ ಜೇಮ್ಸ್ ವಿರುದ್ಧ ಬೆಂಗಳೂರು ಕಮಿಷನರ್ ಕಚೇರಿ ಸಿಬ್ಬಂದಿಯಿಂದ ದೂರು
ತಮಗೆ ಮಾನಸಿಕ ಕಿರುಕುಳು ನೀಡುತ್ತಿದ್ದಾರೆ ಎಂದು ಡಿಸಿಪಿ ನಿಶಾ ಜೇಮ್ಸ್ ವಿರುದ್ಧ ಬೆಂಗಳೂರು ಕಮಿಷನರ್ ಕಚೇರಿ ಸಿಬ್ಬಂದಿ, ಆಡಳಿತ ವಿಭಾಗದ ಎಡಿಜಿಪಿ ಎಂ.ಎ ಸಲೀಂ ಅವರಿಗೆ ದೂರು ಸಲ್ಲಿಸಿದ್ದಾರೆ. 25ಕ್ಕೂ ಹೆಚ್ಚು ಪ್ರಥಮ ದರ್ಜೆ ಹಾಗೂ ದ್ವಿತಿಯ ದರ್ಜೆ ಸಹಾಯಕರು ಲಿಖಿತ ದೂರು ಸಲ್ಲಿಸಿದ್ದಾರೆ.
ಸಣ್ಣ ಪುಟ್ಟ ವಿಷಯಗಳನ್ನು ದೊಡ್ಡದಾಗಿ ಮಾಡಿ ಶಿಸ್ತು ಕ್ರಮಕ್ಕೆ ಮುಂದಾಗುತ್ತಾರೆ. ಉದ್ದ್ದೇಶ ಪೂರ್ವಕವಾಗಿ ಸಿಬ್ಬಂದಿಯನ್ನು ತಡ ರಾತ್ರಿವರೆಗೂ ಕಚೇರಿಯಲ್ಲಿಯೇ ಉಳಿಸಿಕೊಳ್ಳುತ್ತಾರೆ. ನಿಶಾ ಜೇಮ್ಸ್ ಅವರು ಸಂಜೆ 6ರ ನಂತರ ಕೆಲಸ ಶುರುಮಾಡಿ ರಾತ್ರಿ 3 ಕ್ಕೆ ಮುಗಿಸ್ತಾರೆ. ಸಿಬ್ಬಂದಿಯನ್ನೂ ನಿಲ್ಲಿಸಿಕೊಳ್ಳುತ್ತಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ನಿಶಾ ಜೇಮ್ಸ್ ಅವರ ಉಪಟಳದಿಂದ ಪತ್ನಿ, ಮಕ್ಕಳು, ಪೋಷಕರ ಜೊತೆ ಸಮಯ ಕಳೆಯಲು ಆಗುತ್ತಿಲ್ಲ. ನಮಗೆ ರಾತ್ರಿ ನಿದ್ರೆ ಮಾಡಲೂ ಆಗುತ್ತಿಲ್ಲ, ನಿದ್ರಾಹೀನತೆಯಿಂದಾಗಿ ಮರೆವು ಸೇರಿ ಹಲವು ಕಾಯಿಲೆ ಬರುತ್ತಿವೆ. ಅದೇ ರೀತಿ 26 ಮಂದಿ ಸಿಬ್ಬಂದಿಗೆ ವೇತನ ಬಡ್ತಿಯನ್ನೂ ತಡೆ ಹಿಡಿಯಲಾಗಿದೆ ಎಂಬ ಆರೋಪಗಳು ದೂರಿನಲ್ಲಿವೆ.
ಕಡತಗಳನ್ನು ಸಮಯಕ್ಕೆ ಸರಿಯಾಗಿ ವಿಲೇವಾರಿ ಮಾಡುತ್ತಿಲ್ಲ. ತಿಂಗಳುಗಟ್ಟಲೇ ಸಹಿ ಹಾಕದೇ ಸತಾಯಿಸುತ್ತಾರೆ. ಇದರಿಂದ ಕಡತ ವಿಲೇವಾರಿ ತಡವಾಗುತ್ತದೆ. ಕಚೇರಿಯಲ್ಲಿ ಹಿಂದೂ ದೇವರುಗಳ ಫೋಟೊ ಇಡಲೂ ಅವಕಾಶ ನೀಡುವುದಿಲ್ಲ ಎಂಬುದಾಗಿ ಆರೋಪಿಸಿದ್ದಾರೆ.
ಕನ್ನಡದಲ್ಲಿ ವ್ಯವಹರಿಸುವುದಿಲ್ಲ. ಕನ್ನಡ ಮಾತನಾಡುವ ಸಿಬ್ಬಂದಿಯನ್ನು ತುಚ್ಚವಾಗಿ ಕಾಣುತ್ತಾರೆ. ಕಚೇರಿ ಸಿಬ್ಬಂದಿಯ ಸಮಸ್ಯೆಗಳನ್ನು ಆಲಿಸುವುದಿಲ್ಲ. ಮಹಿಳಾ ಟೈಪಿಸ್ಟ್ ಒಬ್ಬರು ತಾವು ಗರ್ಭಿಣಿ ಎಂದು ತಿಳಿಸಿದರೂ ಕಚೇರಿಯಲ್ಲಿ 9 ಗಂಟೆಗೂ ಹೆಚ್ಚು ಕಾಲ ಕೆಲಸ ಮಾಡಿಸುತ್ತಿದ್ದರು. ಇದರಿಂದ ಅವರಿಗೆ ಮಾನಸಿಕ ಹಿಂಸೆಯಾಗಿ ಗರ್ಭಪಾತವಾಗಿದೆ ಎಂದು ದೂರಲಾಗಿದೆ.