ಡಿಸಿ ಎದುರೇ ಕೈ ಕೈ ಮಿಲಾಯಿಸಿದ ಗ್ರಾಮಸ್ಥರು

ಜಿಲ್ಲಾಧಿಕಾರಿ ನಡೆ ಗ್ರಾಮದ ಕಡೆ ಎಂಬ ಶೀರ್ಷಿಕೆಯಡಿ ಆರಂಭವಾಗಿರುವ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಆರಂಭದಲ್ಲೆ ವಿಘ್ನ ಎದುರಾಗಿದೆ. ಗ್ರಾಮ ವಾಸ್ತವ್ಯ ತೆರಳುತ್ತಿದ್ದ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವಾಹನ ತಡೆದು ಎರಡು ಗುಂಪುಗಳು ಪರಸ್ಪರ ಕೈ-ಕೈ ಮಿಲಾಯಿಸಿದ ಘಟನೆ ಜರುಗಿದೆ. ಧಾರವಾಡ ತಾಲೂಕಿನ ಕವಲಗೇರಿ ಗ್ರಾಮದಲ್ಲಿಂದು ಈ ಘಟನೆ ನಡೆದಿದೆ. ಇಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಗ್ರಾಮ ವಾಸ್ತವ್ಯದ ಭಾಗವಾಗಿ ವನಹಳ್ಳಿ ಗ್ರಾಮಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಕವಲಗೇರಿ ಗ್ರಾಮದ ಗ್ರಾಮಸ್ಥರು ಸರ್ಕಾರಿ ಶಾಲೆಯ ಜಾಗದ ಒತ್ತುವರಿ ಕುರಿತು ಮನವಿ ನೀಡಿ ಜಾಗ ಪರಿಶೀಲಿಸುವಂತೆ ಕೋರಿದ್ದರು. ಇಂದು ಈ ಜಾಗೆಯನ್ನು ಜಿಲ್ಲಾಧಿಕಾರಿ ಪರಿಶೀಲಿಸಿದ್ದಾರೆ. ಆದರೆ, ಜಿಲ್ಲಾಧಿಕಾರಿ ಜಾಗ ಪರಿಶೀಲಿಸಿದ ನಂತರ ಎರಡು ಗುಂಪುಗಳ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಇನ್ನೂಂದು ಗುಂಪು ಅದು ನಮ್ಮ ಪಿತ್ರಾರ್ಜಿತ ಅಸ್ತಿಯೇ ಎಂದು ಪ್ರಶ್ನಿಸಿದೆ. ಮಾತಿಗೆ ಮಾತು ಬೆಳೆದು ಪರಸ್ಪರ ವಾಗ್ವಾದ ನಡೆಸಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಅರಿತ ಸ್ಥಳದಲ್ಲಿದ್ದ ಪೊಲೀಸರು ವಾತಾವರಣ ತಿಳಿಗೊಳಿಸಿದ್ದಾರೆ. ಆದರೆ ಜಿಲ್ಲಾಧಿಕಾರಿಯ ಸಮ್ಮುಖದಲ್ಲಿ ಗ್ರಾಮಸ್ಥರ ಗಲಾಟೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.