ಇನ್ಮುಂದೆ ಶಾಲಾ-ಕಾಲೇಜು ಸಮಯಕ್ಕೆ ಸರಿಯಾಗಿ ಬರಲಿದೆ ಬಸ್
ಇನ್ಮುಂದೆ ಶಾಲಾ-ಕಾಲೇಜು ಸಮಯಕ್ಕೆ ಸರಿಯಾಗಿ ಬರಲಿದೆ ಬಸ್
ಬೆಂಗಳೂರು: ದೂರದ ಸ್ಥಳಗಳಿಂದ ಶಾಲಾ-ಕಾಲೇಜುಗಳಿಗೆ ತೆರಳುವ ಮಕ್ಕಳು ಸಮಯಕ್ಕೆ ಸರಿಯಾಗಿ ತಲುಪಲು ಅನುಕೂಲವಾಗಿಸುವ ನಿಟ್ಟಿನಲ್ಲಿ ರಾಜ್ಯದ ಎಲ್ಲ ಭಾಗಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸಲಿವೆ. ಈ ಬಗ್ಗೆ ಸಂಬಂಧಪಟ್ಟ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ತಿಳಿಸಿದ್ದಾರೆ.
ಪ್ರೌಢ ಶಾಲೆ 9 ಮತ್ತು 10ನೇ ತರಗತಿಗಳು, ಪ್ರಥಮ ಹಾಗೂ ದ್ವಿತೀಯ ಪಿಯುಸಿ ತರಗತಿಗಳು ಪುನರಾರಂಭವಾಗಿದ್ದು, ಹೀಗಾಗಿ, ರಾಜ್ಯದ ಹಲವು ಭಾಗಗಳಲ್ಲಿ ವಿದ್ಯಾರ್ಥಿಗಳು ಶಾಲೆಗೆ ತೆರಳಲು ಬಸ್ ಅವಲಂಬಿಸಿದ್ದಾರೆ. ಲಾಕ್‌ಡೌನ್ ಪೂರ್ವದಲ್ಲಿ ಶಾಲಾ ಅವಧಿಗೆ ಸರಿಯಾಗಿ ಮಕ್ಕಳು ತಲುಪುವಂತೆ ಬಸ್ ಸಂಚರಿಸುತ್ತಿದ್ದವು. ಈಗ ಅದೇ ರೀತಿ ಬಸ್‌ಗಳು ಸಮಯಕ್ಕೆ ಸರಿಯಾಗಿ ಸಂಚರಿಸಬೇಕು ಎಂದು ಸಚಿವರು ಸೂಚಿಸಿದ್ದಾರೆ.
ತರಗತಿಗಳ ಅವಧಿಗೆ ಸರಿಯಾಗಿ ಬಸ್ ಸಂಚಾರದಿಂದ ಮಕ್ಕಳ ಹಾಜರಾತಿ ಇನ್ನಷ್ಟು ಹೆಚ್ಚಳವಾಗುತ್ತದೆ. ಬಸ್‌ಗಳಲ್ಲಿ ಸಂಚರಿಸುವ ಮಕ್ಕಳು ಕೋವಿಡ್ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು. ಮಕ್ಕಳು ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವಂತೆ ಸಲಹೆ, ಸೂಚನೆಗಳನ್ನು ನಿರ್ವಾಹಕರು ನೀಡುತ್ತಿರಬೇಕು ಎಂದು ಸಚಿವ ಬಿ.ಸಿ ನಾಗೇಶ್ ತಿಳಿಸಿದರು.
ಸೆ.15ರ ಒಳಗೆ ಎಲ್ಲ ಪಠ್ಯ ಪುಸ್ತಕಗಳ ಪೂರೈಕೆಗೆ ಕ್ರಮ..:
ಸೆಪ್ಟೆಂಬರ್ 15ರ ಒಳಗೆ ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಿಗೆ ಪಠ್ಯ ಪುಸ್ತಕಗಳನ್ನು ಪೂರೈಕೆ ಮಾಡುವ ಗುರಿ ಹೊಂದಲಾಗಿದೆ. ನಿಗದಿತ ಅವಧಿಯೊಳಗೆ ಪಠ್ಯ ಪುಸಕ್ತಗಳು ತಲುಪುವ ವಿಶ್ವಾಸವಿದೆ ಎಂದು ಅವರು ತಿಳಿಸಿದರು.‘
ಕೋವಿಡ್-19 ಕಾರಣದಿಂದ ಸರಕಾರಿ ಮುದ್ರಣಾಲಯಗಳು ಕೆಲ ಅವಧಿಗೆ ಮುದ್ರಣ ಸ್ಥಗಿತಗೊಳಿಸಿದ್ದರಿಂದ ವಿಳಂಬವಾಗಿದೆ. ಆದರೂ, ರಾಜ್ಯದ ಶೇ.50ಕ್ಕಿಂತ ಹೆಚ್ಚು ಶಾಲೆಗಳಿಗೆ ಪುಸ್ತಕಗಳನ್ನು ಪೂರೈಸಲಾಗಿದೆ’ ಎಂದು ತಿಳಿಸಿದರು.
ಶೇ.70ಕ್ಕಿಂತ ಹೆಚ್ಚು ಪಠ್ಯ ಪುಸ್ತಕಗಳು ಮುದ್ರಣಗೊಂಡಿವೆ. ವಾರದೊಳಗೆ ಮುದ್ರಣಗೊಂಡಿರುವ ಎಲ್ಲ ಪುಸ್ತಕಗಳು ಶಾಲೆಗಳಿಗೆ ತಲುಪುವಂತೆ ವ್ಯವಸ್ಥೆ ಮಾಡಲಾಗುತ್ತದೆ. ಸೆಪ್ಟಂಬರ್ 15ರ ಒಳಗಾಗಿ ಎಲ್ಲ ಶಾಲೆಗಳಿಗೆ ಪುಸ್ತಕಗಳು ತಲುಪಿಸುವ ಗುರಿ ಹೊಂದಲಾಗಿದೆ’ ಎಂದು ಸಚಿವರು ತಿಳಿಸಿದರು.
ಆನ್‌ಲೈನ್ ಶಿಕ್ಷಣದ ಅಗತ್ಯಕ್ಕೆ ತಕ್ಕಂತೆ ಪಠ್ಯವನ್ನು ಸಿದ್ಧಪಡಿಸಿ ಆನ್‌ಲೈನ್‌ಗೆ ಅಪ್‌ಲೋಡ್ ಮಾಡಲಾಗಿತ್ತು. ಅವುಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವಂತೆ ಮಕ್ಕಳಿಗೆ, ಪಾಲಕರಿಗೆ ತಿಳಿಸಲಾಗಿತ್ತು. ಹೀಗಾಗಿ, ಬಹುತೇಕ ಮಕ್ಕಳು ಆನ್‌ಲೈನ್‌ನಲ್ಲೇ ಪುಸ್ತಕಗಳನ್ನು ಡೌನ್‌ಲೋಡ್ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ’ ಎಂದು ಸಚಿವರು ಈ ಸಂದರ್ಭದಲ್ಲಿ ತಿಳಿಸಿದರು. ‘ಶಾಲೆಗಳ ಮುಖ್ಯ ಶಿಕ್ಷಕರಿಗೆ, ಆಡಳಿತ ಮಂಡಳಿಗಳಿಗೆ ಪಠ್ಯ ಪುಸ್ತಕಗಳನ್ನು ಡೌನ್‌ಲೋಡ್ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡುವಂತೆ ಸೂಚನೆ ನೀಡಲಾಗಿದೆ’ ಎಂದು ಮಾಹಿತಿ ನೀಡಿದರು.