ಪುನೀತ್ ಸಾವಲ್ಲೂ ಲಾಭ ಹುಡುಕುವ 'ರಣಹದ್ದುಗಳು': ಜಾಹೀರಾತಿನ ವಿರುದ್ಧ ಭಾರಿ ಆಕ್ರೋಶ

ಬೆಂಗಳೂರು: ಕರುನಾಡ ಕಣ್ಮಣಿ ಪುನೀತ್ ರಾಜ್‌ಕುಮಾರ್ ಅವರ ನಿಧನದ ನೋವನ್ನು ಇನ್ನೂ ಅರಗಿಸಿಕೊಳ್ಳಲಾಗದೇ ಲಕ್ಷಾಂತರ ಅಭಿಮಾನಿಗಳು ಇನ್ನೂ ಕಣ್ಣೀರು ಸುರಿಸುತ್ತಿರುವ ನಡುವೆಯೇ ಕೆಲವು ಕಿರಾತಕರು ಅವರ ಸಾವಿನ ಲಾಭವನ್ನು ಪಡೆಯಲು ಹವಣಿಸುತ್ತಿದ್ದಾರೆ.
ಪುನೀತ್ ಅವರು ಹೃದಯಾಘಾತದಿಂದ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಹಲವಾರು ಯುವಕರು ತಮ್ಮ ಹೃದಯದ ಬಗ್ಗೆ ಭಯಪಟ್ಟು ಹೃದಯ ಪರೀಕ್ಷೆ ಮಾಡಿಸಿಕೊಳ್ಳಲು ಮುಗಿಬೀಳುತ್ತಿದ್ದಾರೆ. ಇದನ್ನೇ ಲಾಭ ಮಾಡಿಕೊಂಡಿರುವ ಕೆಲವರು ಇದೀಗ ಪುನೀತ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ನೆಪವೊಡ್ಡಿ ತಮ್ಮ ಮಾರುಕಟ್ಟೆಯನ್ನು ಬೆಳೆಸಿಕೊಳ್ಳಲು ಹವಣಿಸುತ್ತಿದ್ದಾರೆ. ಅಂಥದ್ದೇ ಒಂದು ಜಾಹೀರಾತು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.
'ನಮ್ಮ ಡೈಗ್ನಾಸ್ಟಿಕ್ಸ್ ಕೇಂದ್ರದಲ್ಲಿ ಇಸಿಜಿ ಸೇರಿ ಹಲವು ಸೌಲಭ್ಯಗಳು ಇವೆ. ಇದಕ್ಕೆ ಆಫರ್ ಕೂಡ ಇದೆ' ಎಂದು ಕ್ರೆಡೆಂಡ್ ಡಯಾಗ್ನಿಸ್ಟಿಕ್ಸ್ ಕಂಪೆನಿ ಈ ಜಾಹೀರಾತು ಹಾಕಿಕೊಂಡಿದೆ. ಕೇವಲ ಜಾಹೀರಾತು ಹಾಕಿಕೊಂಡಿದ್ದರೆ ಯಾರೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಜಾಹೀರಾತಿನ ಮೇಲುಗಡೆ ಪುನೀತ್ ರಾಜ್‌ಕುಮಾರ್ ಅವರಿಗೆ ಶ್ರದ್ಧಾಂಜಲಿ ಎಂದು ಅವರ ಫೋಟೋ ಹಾಕಿ ಅದರ ಕೆಳಗೆ ತಮ್ಮ ಕಂಪೆನಿಯ ಜಾಹೀರಾತು ನೀಡಿರುವುದು ಪುನೀತ್ ಅವರ ಅಭಿಮಾನಿಗಳನ್ನು ಕೆರಳಿಸಿದೆ.
ಎಲ್ಲದರಲ್ಲೂ ಲಾಭ ಹುಡುಕುವ ರಣಹದ್ದುಗಳು!! pic.twitter.com/g6JwxwTwMX
— ಮಂಜುನಾಥ್ ಜವರನಹಳ್ಳಿ (@manjujb1) November 2, 2021
ಮಂಜುನಾಥ ಜವರನಹಳ್ಳಿ ಎನ್ನುವವರು ಈ ಪೋಸ್ಟ್ ಶೇರ್ ಮಾಡಿದ್ದು, 'ಎಲ್ಲದರಲ್ಲೂ ಲಾಭ ಹುಡುಕುವ ರಣಹದ್ದುಗಳು!!' ಎಂದು ಕ್ಯಾಪ್ಷನ್ ಕೊಟ್ಟಿದ್ದು, ಇದನ್ನು ಹಲವಾರು ಮಂದಿ ಶೇರ್ ಮಾಡಿಕೊಂಡು ಕಂಪೆನಿ ವಿರುದ್ಧ ಗರಂ ಆಗುತ್ತಿದ್ದಾರೆ