4 ಕೋಟಿ ಜನರನ್ನು ತಲುಪುವ ಬಿಜೆಪಿಯ 4 ರಥಗಳ ಯಾತ್ರೆ - MLC ಎನ್.ರವಿಕುಮಾರ್

ಬೆಂಗಳೂರು : ಬಿಜೆಪಿಯ 4 ರಥಗಳು ಒಟ್ಟು 4 ಕೋಟಿ ಜನರನ್ನು ತಲುಪುವ ಉದ್ದೇಶ ಹೊಂದಿದ್ದು, ಪಕ್ಷ ಬಹುಮತ ಪಡೆಯಲು ಇದು ಪೂರಕ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ಅವರು ತಿಳಿಸಿದರು.
'ಹೊಸೂರು ರಸ್ತೆ ಬಳಿಯ ಲಾಲ್‍ಬಾಗ್ ಹತ್ತಿರ ಇರುವ ಎಸ್.ಎಂ. ಕಣ್ಣಪ್ಪ ಆಟೋಮೊಬೈಲ್ಸ್'ನಲ್ಲಿ ಇಂದು ಬಿಜೆಪಿ ವಿಜಯಸಂಕಲ್ಪ ಯಾತ್ರೆಯ 4 ರಥಗಳ ವೀಕ್ಷಣೆ ಕಾರ್ಯಕ್ರಮದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು, 4 ರಥಗಳ ಲೈಲ್ಯಾಂಡ್ ಚಾಸಿಯನ್ನು ಪ್ರಕಾಶ್ ರೋಡ್‍ಲೈನ್ಸ್‍ನವರು ನಿರ್ಮಿಸುತ್ತಿದ್ದಾರೆ. ಪ್ರತಿ ರಥವು 30 ಅಡಿ ಉದ್ದ, 8 ಅಡಿ ಅಗಲದ್ದಾಗಿದೆ. ರಥದಲ್ಲಿ ನಿಂತು ಭಾಷಣ ಮಾಡಲು ಸುಂದರ ಕೆನೊಪಿ ರಚಿಸಿದ್ದೇವೆ. 4 ಮೊಬೈಲ್ ಚಾರ್ಜರ್‍ಗಳು, ರೋಡ್ ಷೋಗೆ ಪೂರಕ ಮೈಕ್ ವ್ಯವಸ್ಥೆ ಇದ್ದು, ಸುಮಾರು ಒಂದು ಕಿಮೀ ದೂರಕ್ಕೆ ಕೇಳಿಸುವಷ್ಟು ಪ್ರಬಲವಾಗಿದೆ. ಕೆನೊಪಿ ಮೇಲೆ 4 ಬಿಗ್ ಹಾರನ್ ಇದೆ ಎಂದು ವಿವರಿಸಿದರು.
ಬಸ್ ಒಳಗಡೆ 7 ಸೀಟುಗಳಿವೆ. ಹೋಂ ಥಿಯೇಟರ್ ಇದೆ. 32 ಇಂಚಿನ ಟಿವಿ, ಚಾಲಕನ ಜೊತೆ ಮಾತನಾಡಲು ಇಂಟರ್‍ಕಾಂ ವ್ಯವಸ್ಥೆ ಇದೆ. ಜನರೇಟರ್ ಇದೆ. ಆಡಿಯೋ ಸಿಸ್ಟಂ, ಕ್ಯಾಮೆರಾ, ಹೊರಮುಖವಾಗಿ ಎಲ್‍ಇಡಿ ಡಿಸ್‍ಪ್ಲೇ ಇದೆ ಎಂದು ತಿಳಿಸಿದರು.
ಹರೀಶ್ ಮತ್ತು ಗಣೇಶ್ ಅವರು ರಥ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಚುನಾವಣಾ ಗೀತೆ, ಭಾಷಣ ಕೇಳಿಸುವುದಲ್ಲದೆ, 5 ಸಾವಿರ ಜನರಿಗೆ ಬಸ್‍ನಿಂದ ಭಾಷಣ ಮಾಡುವ ವ್ಯವಸ್ಥೆ ಒಳಗೊಂಡಿದೆ. ಯಾತ್ರೆ ಯಶಸ್ವಿಗೆ ಮುಂಚಿತವಾಗಿಯೇ 4 ಸಪೋರ್ಟ್ ವಾಹನ ತೆರಳಲಿದೆ. ಅದು ಕೂಡ ಬ್ರ್ಯಾಂಡೆಡ್ ಆಗಿದೆ. ಮಾಧ್ಯಮದವರು ವಿಡಿಯೋ, ಫೋಟೋ ತೆಗೆಯಲು ಅನುಕೂಲ ಮಾಡಿಕೊಡಲು 4 ಮೀಡಿಯಾ ವೆಹಿಕಲ್ ಇರುತ್ತದೆ ಎಂದರು.
ರಥಯಾತ್ರೆ, ಪಾದಯಾತ್ರೆ, ಕಾರ್ಯಕರ್ತರ ಪರಿಶ್ರಮ, ನಾಯಕರ ಪರಿಶ್ರಮದಿಂದ ಬಿಜೆಪಿಯನ್ನು ದೇಶದಲ್ಲಿ ಕಟ್ಟಿದ್ದೇವೆ. ಹೋರಾಟಗಳು, ಆಂದೋಲನಗಳು, ಅಭಿವೃದ್ಧಿ ಕಾರ್ಯಗಳು ನಮ್ಮ ಬಿಜೆಪಿಗೆ ದೇಶ ಮತ್ತು ರಾಜ್ಯದಲ್ಲಿ 2 ಸೀಟಿನಿಂದ ಸಂಪೂರ್ಣ ಬಹುಮತ ತಂದುಕೊಡುವಲ್ಲಿ ರಥಯಾತ್ರೆಗಳು ಮುಖ್ಯ ಪಾತ್ರ ವಹಿಸಿವೆ ಎಂದು ತಿಳಿಸಿದರು.
ಕಾಂಗ್ರೆಸ್ ಮುಖಂಡರಿಂದ ಸುಳ್ಳಿನ ಸ್ಪರ್ಧೆ
ಪ್ರವಾಹ ಬಂದಾಗ ಮತ್ತು ಮನೆಗಳು ಬಿದ್ದಾಗ ಕಾಂಗ್ರೆಸ್‍ನವರು ಎಷ್ಟು ಪರಿಹಾರ ಕೊಡುತ್ತಿದ್ದರು? ಅದೇ 98 ಸಾವಿರ ಅಲ್ಲವೇ? ನಾವು 5 ಲಕ್ಷ ಕೊಡುತ್ತೇವೆ. ಮನೆಗೆ ಸ್ವಲ್ಪ ಹಾನಿಯಾದರೆ 50 ಸಾವಿರ ರೂಪಾಯಿ, ಕುಟುಂಬಕ್ಕೆ ಸಣ್ಣ ಪ್ರಮಾಣದ ಗಾಯ ಆದರೆ 10 ಸಾವಿರ ಕೊಡುತ್ತಿದ್ದೇವೆ. ಕರ್ನಾಟಕದ ಇತಿಹಾಸದಲ್ಲಿ ಯಾರೂ ಇಷ್ಟು ದೊಡ್ಡ ಪ್ರಮಾಣದ ಹಣ ಕೊಟ್ಟಿಲ್ಲ. ಸಹಾಯ ಮಾಡಿಲ್ಲ; ಪ್ರವಾಹ ನಿರ್ವಹಿಸಿಲ್ಲ. ನಮ್ಮ ಸರಕಾರ ಮಾಡಿದೆ. ಕಾಂಗ್ರೆಸ್ ಎಂದರೆ ಸುಳ್ಳಿನ ಪಾರ್ಟಿ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರ ಕೊಟ್ಟರು.
ಸುಳ್ಳು ಹೇಳುವುದರಲ್ಲಿ ಕಾಂಗ್ರೆಸ್‍ನಲ್ಲಿ ಸ್ಪರ್ಧೆ ಇದೆ. ಸಿದ್ದರಾಮಯ್ಯ, ಅವರನ್ನು ಮೀರಿಸಿ ಡಿ.ಕೆ.ಶಿವಕುಮಾರ್ ಸುಳ್ಳಿನ ಸ್ಪರ್ಧೆಗೆ ಇಳಿದಂತಿದೆ ಎಂದು ಟೀಕಿಸಿದರು.
ಕಾಂಗ್ರೆಸ್ ಹಿಮ್ಮುಖವಾಗಿ ಓಡುತ್ತಿದೆ
ಕಾಂಗ್ರೆಸ್ ಹಿಮ್ಮುಖವಾಗಿ ಓಡುತ್ತಿದೆ. ನಾವು ಮುಮ್ಮುಖವಾಗಿ ಓಡುತ್ತಿದ್ದೇವೆ. ಅವರೂ ಓಡುತ್ತಿದ್ದಾರೆ. ಆದರೆ, ಹಿಮ್ಮುಖವಾಗಿದ್ದಾರೆ ಎಂದು ರವಿಕುಮಾರ್ ತಿಳಿಸಿದರು.
ಒಂದು ಕುರಿ ಸತ್ತರೆ ಸಿದ್ದರಾಮಯ್ಯ ಎಷ್ಟು ಹಣ ಕೊಡುತ್ತಿದ್ದರು? ಇವತ್ತು ನಾವೆಷ್ಟು ಕೊಡುತ್ತಿದ್ದೇವೆ? ಹಸು ಸತ್ತರೆ ನೀವೇನೂ ಕೊಡುತ್ತಿರಲಿಲ್ಲ. ಎತ್ತು ಸತ್ತರೆ ನಾವು 20 ಸಾವಿರ ಕೊಡುತ್ತಿದ್ದೇವೆ. ಕುರಿ ಸತ್ತರೆ 5 ಸಾವಿರ ಕೊಡುತ್ತೇವೆ ಎಂದು ವಿವರಿಸಿದರು. ರೈತರನ್ನು ಸಂಪೂರ್ಣವಾಗಿ ಕೈಹಿಡಿದ, ಮೇಲೆತ್ತಿದ, ಅವರ ಮನೆಯಿಂದ ಆರಂಭಿಸಿ ಅವರ ಸ್ತರವನ್ನು ಮೇಲೆತ್ತಿದ ಪಕ್ಷ ಬಿಜೆಪಿ. ರೈತರು, ಕಾರ್ಮಿಕರು, ಪೌರಕಾರ್ಮಿಕರನ್ನು ಮುಳುಗಿಸಿದ ಪಕ್ಷ ಅದು ಕಾಂಗ್ರೆಸ್ ಎಂದು ಆರೋಪಿಸಿದರು. ನಾವು 11 ಸಾವಿರ ಪೌರಕಾರ್ಮಿಕರನ್ನು ಖಾಯಂ ಮಾಡಿದ್ದೇವೆ; ಅವರು ಒಬ್ಬರನ್ನೂ ಖಾಯಂ ಮಾಡಿಲ್ಲ ಎಂದರು.
ಹಿಂದೆ ನಾವು ಪರಿವರ್ತನಾ ಯಾತ್ರೆ, ಏಕತಾ ಯಾತ್ರೆ, ರಾಮಮಂದಿರಕ್ಕಾಗಿ ರಥಯಾತ್ರೆ ಮಾಡಿದ್ದೇವೆ. ಈಗ ರಾಜ್ಯದಲ್ಲಿ ಮತ್ತೊಮ್ಮೆ ಬಹುಮತದ ಸರಕಾರವನ್ನು ತರಲು 4 ರಥಯಾತ್ರೆ ಮಾಡುತ್ತಿದ್ದೇವೆ ಎಂದು ತಿಳಿಸಿದರು. ನಾಳೆ ಪೂಜೆ ಸಲ್ಲಿಸಿ ರಥವನ್ನು 4 ಸ್ಥಳಗಳಿಗೆ ಕಳುಹಿಸಲಿದ್ದೇವೆ ಎಂದು ವಿವರಿಸಿದರು.
ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಪಂಕ್ಚರ್ ಆಗಿದೆ. ಜನವೇ ಇರಲಿಲ್ಲ ಎಂದ ಅವರು, ನಮ್ಮ ಯಾತ್ರೆಗೆ ಸಂಬಂಧಿಸಿ ಅದ್ಭುತ ಯೋಜನೆ ಮಾಡಿದ್ದು, ದೊಡ್ಡ ಸಂಖ್ಯೆಯಲ್ಲಿ ಜನರು ಸೇರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿಯಲ್ಲಿ ನಾವು 50ಕ್ಕೂ ಹೆಚ್ಚು ಸಮರ್ಥ ನಾಯಕರ ಹೆಸರು ಹೇಳಬಲ್ಲೆವು. ಕಾಂಗ್ರೆಸ್‍ನಲ್ಲಿ ಅಂಥ ನಾಯಕರು ಯಾರಿದ್ದಾರೆ ಎಂದು ಪ್ರಶ್ನಿಸಿದರು. ಕಾಂಗ್ರೆಸ್‍ನವರು ನಮ್ಮ ನಾಯಕತ್ವವನ್ನು, ಅಭಿವೃದ್ಧಿಯನ್ನು ಕೊಂಡಾಡುತ್ತಿದ್ದಾರೆ. ಆದರೆ, ಎದುರುಗಡೆ ಅದನ್ನು ಹೇಳಲು ಆಗುತ್ತಿಲ್ಲ ಎಂದು ಇನ್ನೊಂದು ಪ್ರಶ್ನೆಗೆ ಉತ್ತರ ಕೊಟ್ಟರು.
ನಮ್ಮ ಸಂಸ್ಕøತಿ ಉಳಿಸಿ ಬೆಳೆಸುವಲ್ಲಿ ಸಾಧುಗಳು, ಸಂತರು, ಮಹಾಂತರ ಪ್ರಮುಖ ಪಾತ್ರ ಇದೆ. ಮನೆ ಮನೆಯಲ್ಲಿ ದೇವರ ಮನೆ ಇದೆ. ಸಂತರು, ಸ್ವಾಮೀಜಿಗಳನ್ನು ಬಿಟ್ಟು ನಮ್ಮ ಪಕ್ಷ ಇಲ್ಲ. ಅವರ ಮಾರ್ಗದರ್ಶನ, ಆಶೀರ್ವಾದ ಪಡೆಯುತ್ತೇವೆ. ತಪ್ಪೇನಿದೆ ಎಂದು ಅವರು ಈ ಕುರಿತ ಪ್ರಶ್ನೆಗೆ ಉತ್ತರ ನೀಡಿದರು.
ರಾಜಕೀಯಕ್ಕೆ ಬರುವುದು, ಬಿಡುವುದು ಸ್ವಾಮೀಜಿಗಳಿಗೆ ಬಿಟ್ಟ ವಿಚಾರ. ಅದರೊಳಗೆ ನಮ್ಮ ಯಾವುದೇ ಪಾತ್ರ ಇಲ್ಲ ಎಂದು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು.
ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷರಾದ ಗೀತಾ ವಿವೇಕಾನಂದ, ಮಾಜಿ ಉಪಮೇಯರ್ ಹಾಗೂ ಜಿಲ್ಲಾ ವಕ್ತಾರ ಎಸ್. ಹರೀಶ್, ಜಿಲ್ಲಾ ಉಪಾಧ್ಯಕ್ಷ ಗಣೇಶ್ ಕೃಷ್ಣಮೂರ್ತಿ ಅವರು ಭಾಗವಹಿಸಿದ್ದರು.