3 ರಾಜ್ಯಗಳ ಚುನಾವಣಾ ಫಲಿತಾಂಶ: ನಾಗಾಲ್ಯಾಂಡ್, ತ್ರಿಪುರಾದಲ್ಲಿ BJPಗೆ ಭರ್ಜರಿ ಮುನ್ನಡೆ, ಮೇಘಾಲಯದಲ್ಲಿ 2ನೇ ಸ್ಥಾನ
ನವದೆಹಲಿ: ಫೆಬ್ರವರಿಯಲ್ಲಿ ಚುನಾವಣೆ ಎದುರಿಸಿದ ಈಶಾನ್ಯದ ತ್ರಿಪುರಾ, ನಾಗಾಲ್ಯಾಂಡ್ ಮತ್ತು ಮೇಘಾಲಯಗಳಲ್ಲಿ ಇಂದು ಬೆಳಗ್ಗೆ ಮತಎಣಿಕೆ ಆರಂಭವಾಗಿದ್ದು, ಸದ್ಯದ ಟ್ರೆಂಡ್ ಪ್ರಕಾರ ನಾಗಾಲ್ಯಾಂಡ್ ಮತ್ತು ತ್ರಿಪುರಾದಲ್ಲಿ ಬಿಜೆಪಿ ಭರ್ಜರಿ ಮುನ್ನಡೆಯನ್ನು ಕಾಯ್ದುಕೊಂಡಿದೆ.
ಬೆಳಗ್ಗೆ 10 ಗಂಟೆಯ ವೇಳೆಗೆ ನಾಗಾಲ್ಯಾಂಡ್ನಲ್ಲಿ ಬಿಜೆಪಿ 45 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದರೆ, ತ್ರಿಪುರಾದಲ್ಲಿ 32 ಸ್ಥಾನಗಳಲ್ಲಿ ಮುಂದಿದೆ. ಮೇಘಾಲಯದಲ್ಲಿ 10 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಎಂದಿನಂತೆ ಬಾರಿಯು ಕಾಂಗ್ರೆಸ್ಗೆ ಮೂರು ರಾಜ್ಯಗಳಲ್ಲಿ ಮುಖಭಂಗವಾಗಿದೆ.
ಈ ಮೂರೂ ರಾಜ್ಯಗಳು ತಲಾ 60 ಕ್ಷೇತ್ರಗಳನ್ನು ಹೊಂದಿವೆ. ತ್ರಿಪುರಾ ಮತ್ತು ನಾಗಾಲ್ಯಾಂಡ್ನಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಈಗಾಗಲೇ ಚುನಾವಣೋತ್ತರ ಸಮೀಕ್ಷೆಗಳು ಹೇಳಿವೆ. ಇದೀಗ ಅದಕ್ಕೆ ಪೂರಕವಾಗಿಯೇ ಮತಎಣಿಕೆಗೆ ಆರಂಭಿಕ ಸೂಚನೆ ಇದೆ. ಫಲಿತಾಂಶ ಹೀಗೆ ಮುಂದುವರಿದರೆ ನಾಗಾಲ್ಯಾಂಡ್ ಮತ್ತು ತ್ರಿಪುರಾದಲ್ಲಿ ಬಿಜೆಪಿ ಭರ್ಜರಿ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರಲಿದೆ. ಈಗಾಗಲೇ ಬಿಜೆಪಿ ಪಾಳಯದಲ್ಲಿ ಸಂಭ್ರಮ ಮನೆ ಮಾಡಿದೆ. ಮಧ್ಯಾಹ್ನದ ಹೊತ್ತಿಗೆ ಸ್ಪಷ್ಟ ಫಲಿತಾಂಶ ಹೊರಬೀಳಲಿದೆ.
ಚುನಾವಣೆ ಫಲಿತಾಂಶಕ್ಕೂ ಮುನ್ನವೇ ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮ ಮತ್ತು ಮೇಘಾಲಯ ಸಿಎಂ ಕನ್ರಾಡ್ ಸಂಗ್ಮಾ ಮಂಗಳವಾರ ತಡರಾತ್ರಿ ಗುವಾಹಟಿಯಲ್ಲಿ ಭೇಟಿ ಮಾಡಿರುವುದು ಕುತೂಹಲ ಕೆರಳಿಸಿದೆ. ಮೇಘಾಲಯದಲ್ಲಿ ಅಸ್ಪಷ್ಟ ಜನಾದೇಶ ಹೊರಬೀಳುವ ಸಾಧ್ಯತೆ ಹಿನ್ನೆಲೆಯಲ್ಲಿ ಬಿಜೆಪಿ ಜತೆ ಚುನಾವಣೋತ್ತರ ಮೈತ್ರಿ ಮಾಡಿಕೊಳ್ಳುವ ಕುರಿತು ಎನ್ಪಿಪಿ ನಾಯಕ ಸಂಗ್ಮಾ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.